
ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಅದ್ಭುತ ಪ್ರದರ್ಶನ ನೀಡಿದ್ದು ಚಾಂಪಿಯನ್ ಪಟ್ಟಕ್ಕೇರಿದೆ. ಚೊಚ್ಚಲ ಆವೃತ್ತಿಯಲ್ಲಿಯೇ ಗುಜರಾತ್ ಈ ಪ್ರದರ್ಶನ ನೀಡಿದ ಬಗ್ಗೆ ಸಾಕಷ್ಟು ಪ್ರಶಂಸೆಯ ಮಾತುಗಳು ಕೇಳಿ ಬಂದಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಇಯಾನ್ ಬಿಷಪ್ ಮಾತನಾಡಿದ್ದು ಈ ಐಪಿಎಲ್‌ನಲ್ಲಿ ಮಿಂಚಿದ ಓರ್ವ ಆಟಗಾರನ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಆತ ಯಾವುದೇ ತಂಡದಲ್ಲಿದ್ದರೂ ಆ ತಂಡಕ್ಕೆ ಚಿನ್ನವಿದ್ದಂತೆ ಎಂದಿದ್ದಾರೆ ಇಯಾನ್ ಬಿಷಪ್.
ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಈ ಮಾತುಗಳನ್ನು ಆಡಿರುವುದು ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ. ಚೊಚ್ಚಲ ಆವೃತ್ತಿಯಲ್ಲಿ ನಾಯಕನಾಗಿ ಮಿಂಚಿರುವ ಹಾರ್ದಿಕ್ ಪಾಂಡ್ಯ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದಿದ್ದಾರೆ, ನಾಯಕನಾಗಿ ಮಾತ್ರವಲ್ಲದೆ ಹಾರ್ದಿಕ್ ಪಾಂಡ್ಯ ಆಟಗಾರನಾಗಿಯೂ ಮುಂದೆ ನಿಂತ ತಂಡವನ್ನು ಮುನ್ನಡೆಸಿದ ರೀತಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿ ಭರ್ಜರಿಯಾಗಿ ಗೆಲುವು ಸಾಧಿಸಿದೆ. 7 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ತಂಡ ಮೊದಲ ಪ್ರಯತ್ನದಲ್ಲಿಯೇ ಚಾಂಪಿಯನ್ ಪಟ್ಟಕ್ಕೇರಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅದ್ಭುತ ಕೊಡುಗೆ ನೀಡಿದ್ದಾರೆ. ಬ್ಯಾಟಿಂಗ್‌ನಲ್ಲಿ 31 ಎಸೆತಗಳಲ್ಲಿ 34 ರನ್‌ಗಳಿಸಿದ ಪಾಂಡ್ಯ ಅದಕ್ಕೂ ಮುನ್ನ ಬೌಲಿಂಗ್‌ನಲ್ಲಿ ಕೇವಲ 17 ರನ್‌ಗಳನ್ನು ನೀಡಿ ಪ್ರಮುಖ ಮೂರು ವಿಕೆಟ್ ಕಬಳಿಸಿದ್ದರು. ಈ ಮೂಲಕ ಆರ್‌ಆರ್ ತಂಡ ಹೆಚ್ಚಿನ ಮೊತ್ತ ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು.
"ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವುದಕ್ಕೆ ಸಮರ್ಥವಾದರೆ ಯಾವುದೇ ತಂಡಕ್ಕಾದರ ಆತ ಅಮೂಲ್ಯ ಆಟಗಾರ. ಹಾರ್ದಿಕ್ ಪಾಂಡ್ಯ ಹಾಗೂ ಆತನ ತಂಡ ಗುಜರಾತ್ ಟೈಟನ್ಸ ಪಡೆಗೆ ಅಭಿನಂದನೆಗಳು. ಈ ಮೂಲಕ ಮೊದಲ ಆವೃತ್ತಿಯಲ್ಲಿಯೇ ಟ್ರೋಫಿ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. ಅದ್ಭುತವಾದ ಬೌಲಿಂಗ್ ವಿಭಾಗ. ಇನ್ನು ಟೂರ್ನಿಯುದ್ದಕ್ಕೂ ಸಾಕಷ್ಟು ಆಟಗಾರರು ತಂಡವನ್ನು ಗೆಲ್ಲಿಸಲು ಮುಂದೆ ಬಂದಿದ್ದಾರೆ" ಎಂದು ಜಿಟಿ ತಂಡದ ಒಟ್ಟಾರೆ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಇಯಾನ್ ಬಿಷಪ್.
ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಆಡಿದ 15 ಪಂದ್ಯಗಳಲ್ಲಿ ಪಾಂಡ್ಯ 44.27ರ ಸರಾಸರಿಯಲ್ಲಿ 287 ರನ್‌ಗಳನ್ನು ಗಳಿಸಿದ್ದಾರೆ. 131.27ರಷ್ಟು ಸ್ಟ್ರೈಕ್‌ರೇಟ್‌ನಲ್ಲಿ ಪಾಂಡ್ಯ ಬ್ಯಾಟ್ ಬೀಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಕೂಡ ಟೂರ್ನಿಯಲ್ಲಿ 8 ವಿಕೆಟ್ ಸಂಪಾದಿಸಿರುವ ಪಾಂಡ್ಯ ಫೈನಲ್ ಪಂದ್ಯದಲ್ಲಿ 17 ರನ್‌ಗಳನ್ನು ನೀಡಿ 3 ವಿಕೆಟ್ ಸಂಪಾದಿಸುವ ಮೂಲಕ ಬೌಲಿಂಗ್‌ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಗುಜರಾತ್ ಟೈಟನ್ಸ್ ಸ್ಕ್ವಾಡ್ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ಡೊಮಿನಿಕ್ ಡ್ರೇಕ್ಸ್, ಜಯಂತ್ ಯಾದವ್, ವಿಜಯ್ ಶಂಕರ್, ದರ್ಶನ್ ನಲ್ಕಂಡೆ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಗುರುಕೀರತ್ ಸಿಂಗ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್, ರಹಮಾನುಲ್ಲಾ ಗುರ್ಬಾಜ್