IPL 2022: ಕೊಹ್ಲಿಯ '973 ರನ್' ಬೃಹತ್ ದಾಖಲೆ ಮುರಿಯಲು ಬಟ್ಲರ್ ಫೈನಲ್‌ನಲ್ಲಿ ಎಷ್ಟು ರನ್ ಬಾರಿಸಬೇಕು?

ಮೇ 29ರ ಭಾನುವಾರ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇತ್ತಂಡಗಳು ಮುಖಾಮುಖಿಯಾಗಲಿರುವ ಮೂರನೇ ಪಂದ್ಯ ಇದಾಗಿದ್ದು, ಮೊದಲಿಗೆ ಲೀಗ್ ಹಂತದಲ್ಲಿ ನಡೆದ ಪ್ರಥಮ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಗೆಲುವನ್ನು ಕಂಡಿತ್ತು ಹಾಗೂ ಇತ್ತೀಚೆಗಷ್ಟೇ ನಡೆದ ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿಯೂ ಕೂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗುಜರಾತ್ ಟೈಟನ್ಸ್ ಸೋಲುಣಿಸಿ ನೇರವಾಗಿ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು.
ಇತ್ತ ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಳಗದ ವಿರುದ್ಧ ಸೋಲುಂಡ ರಾಜಸ್ಥಾನ್ ರಾಯಲ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿದ್ದು, ಮತ್ತೊಮ್ಮೆ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಟೂರ್ನಿಯ ಮೊದಲಾರ್ಧದಲ್ಲಿ ಅಬ್ಬರಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ದ್ವಿತೀಯಾರ್ಧದಲ್ಲಿ ಸಾಮಾನ್ಯ ಪ್ರದರ್ಶನವನ್ನು ನೀಡಿದ್ದರು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಬಟ್ಲರ್ ಕಮ್ ಬ್ಯಾಕ್ ಮಾಡಿದ್ದು, ಇದೀಗ ಗುಜರಾತ್ ಟೈಟನ್ಸ್ ತಂಡಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ ಎಂದೇ ಹೇಳಬಹುದು. ಇನ್ನು ಜೋಸ್ ಬಟ್ಲರ್ ಟೂರ್ನಿಯ ಆರಂಭದಲ್ಲಿ ಅಬ್ಬರಿಸುತ್ತಿದ್ದನ್ನು ಕಂಡಿದ್ದ ಕ್ರಿಕೆಟ್ ಅಭಿಮಾನಿಗಳು ಈತ ವಿರಾಟ್ ಕೊಹ್ಲಿ 2016ರಲ್ಲಿ ಸಿಡಿಸಿದ್ದ 973 ರನ್‌ಗಳ ದಾಖಲೆಯನ್ನು ಸುಲಭವಾಗಿ ಮುರಿದು ಹಾಕಲಿದ್ದಾರೆ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ನಂತರದಲ್ಲಿ ಮಂಕಾದ ಬಟ್ಲರ್ ಈ ದಾಖಲೆ ಮುರಿಯುವುದರಲ್ಲಿ ಅನುಮಾನ ಮೂಡಿಸಿದ್ದರು ಹಾಗೂ ಇದೀಗ ಮತ್ತೊಮ್ಮೆ ಕಮ್ ಬ್ಯಾಕ್ ಮಾಡಿರುವ ಬಟ್ಲರ್ ವಿರಾಟ್ ಕೊಹ್ಲಿಯ 2 ಸಾರ್ವಕಾಲಿಕ ದಾಖಲೆಗಳನ್ನು ತನ್ನ ಹೆಸರಿಗೆ ದಾಖಲಿಸಿಕೊಳ್ಳಲು ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಈ ಕೆಳಕಂಡಂತೆ ಬ್ಯಾಟ್ ಬೀಸಬೇಕಿದೆ.

973 ರನ್ ದಾಖಲೆ ಮುರಿಯಲು ಇಷ್ಟು ರನ್ ಬಾರಿಸಲೇಬೇಕು
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 16 ಪಂದ್ಯಗಳನ್ನಾಡಿರುವ ಜೋಸ್ ಬಟ್ಲರ್ 824 ರನ್ ಕಲೆಹಾಕಿದ್ದು, ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿರುವ ವಿರಾಟ್ ಕೊಹ್ಲಿಯ 973 ರನ್‌ಗಳ ಸಾರ್ವಕಾಲಿಕ ದಾಖಲೆಯನ್ನು ಮುರಿಯಲು ಬಟ್ಲರ್ ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯದಲ್ಲಿ 149 ರನ್‌ಗಳನ್ನು ಬಾರಿಸಲೇಬೇಕಾಗಿದೆ.

ಆವೃತ್ತಿಯೊಂದರಲ್ಲಿ ಅತಿಹೆಚ್ಚು ಶತಕ ದಾಖಲೆ ಹೊಂದಲು ಮತ್ತೊಂದು ಶತಕ ಬೇಕು
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಜೋಸ್ ಬಟ್ಲರ್ ಇಲ್ಲಿಯವರೆಗೂ ಒಟ್ಟು 4 ಶತಕಗಳನ್ನು ಬಾರಿಸಿದ್ದು 2016ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ 4 ಶತಕಗಳನ್ನು ಬಾರಿಸಿ ಮಾಡಿದ್ದ ದಾಖಲೆಯನ್ನು ಸರಿದೂಗಿಸಿದ್ದಾರೆ. ಆದರೆ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಸಂಪೂರ್ಣವಾಗಿ ಬರೆದುಕೊಳ್ಳಬೇಕೆಂದರೆ ಜೋಸ್ ಬಟ್ಲರ್ ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕಡ್ಡಾಯವಾಗಿ ಶತಕ ಬಾರಿಸಲೇಬೇಕಿದೆ.

ಕೊಹ್ಲಿ ದಾಖಲೆ ಮುರಿಯುವುದು ಅಸಾಧ್ಯ ಎನ್ನುತ್ತಿದ್ದಾರೆ ಕ್ರಿಕೆಟ್ ಪ್ರೇಮಿಗಳು
ಟೂರ್ನಿಯ ಆರಂಭದಲ್ಲಿ ಜೋಸ್ ಬಟ್ಲರ್ ಅಬ್ಬರಿಸಿದ್ದನ್ನು ಕಂಡಿದ್ದ ಕ್ರಿಕೆಟ್ ಪ್ರೇಮಿಗಳು ಈತ ವಿರಾಟ್ ಕೊಹ್ಲಿಯ 973 ರನ್ ದಾಖಲೆಯನ್ನು ಮುರಿಯಬಹುದು ಎಂದಿದ್ದರು. ಆದರೆ ಇದೀಗ ಈ ದಾಖಲೆಯನ್ನು ಮುರಿಯಲು ಅಂತಿಮ ಪಂದ್ಯದಲ್ಲಿ ಜೋಸ್ ಬಟ್ಲರ್ 149 ರನ್ ಬಾರಿಸಬೇಕಾದ ಅಗತ್ಯವಿರುವುದರಿಂದ ಇದು ಅಸಾಧ್ಯ ಎಂಬ ಅಭಿಪ್ರಾಯಗಳನ್ನು ಕ್ರೀಡಾಪ್ರೇಮಿಗಳು ವ್ಯಕ್ತಪಡಿಸುತ್ತಿದ್ದಾರೆ. ಫೈನಲ್ ಪಂದ್ಯವಾಗಿರುವ ಕಾರಣ ಒತ್ತಡ ಹೆಚ್ಚಿರಲಿದೆ ಹೀಗಾಗಿ ಜೋಸ್ ಬಟ್ಲರ್ ಇಷ್ಟು ದೊಡ್ಡ ಮೊತ್ತವನ್ನು ಕಲೆ ಹಾಕುವುದು ತೀರಾ ಕಷ್ಟಸಾಧ್ಯ ಎಂದೇ ಹೇಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications