
ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 44ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ. ಮುಂಬೈನ ಡಾ ಡಿ ವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿದ್ದು ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 159 ರನ್‌ಗಳ ಗುರಿಯನ್ನು ನೀಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಹೇಳಿಕೊಳ್ಳುವಂತಹ ಉತ್ತಮ ಆರಂಭವನ್ನೇನೂ ಪಡೆದುಕೊಳ್ಳಲಿಲ್ಲ. ಜೋಸ್ ಬಟ್ಲರ್ ಜತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 15 ರನ್ ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಸಂಜು ಸ್ಯಾಮ್ಸನ್ 16 ರನ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡೇರಿಲ್ ಮಿಚೆಲ್ 17 ರನ್ ಗಳಿಸಿ ಔಟ್ ಆದರು. ಹೀಗೆ ತಂಡದ ಆಟಗಾರರು ಒಂದೆಡೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುತ್ತಿದ್ದರೆ ಮತ್ತೊಂದೆಡೆ ಜವಾಬ್ದಾರಿಯುತ ಆಟವನ್ನಾಡಿದ ಜೋಸ್ ಬಟ್ಲರ್ ಅರ್ಧಶತಕ ಬಾರಿಸಿದರು.
52 ಎಸೆತಗಳನ್ನು ಎದುರಿಸಿದ ಜೋಸ್ ಬಟ್ಲರ್ 62 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇನ್ನುಳಿದಂತೆ ರಿಯಾನ್ ಪರಾಗ್ 3 ರನ್ ಕಲೆಹಾಕಿದರೆ, ರವಿಚಂದ್ರನ್ ಅಶ್ವಿನ್ 9 ಎಸೆತಗಳಲ್ಲಿ 21 ರನ್ ಚಚ್ಚಿ ಅಬ್ಬರಿಸಿದರು, ಟ್ರೆಂಟ್ ಬೌಲ್ಟ್ 1 ಎಸೆತಕ್ಕೆ 1 ರನ್ ಕಲೆಹಾಕಿ ಅಜೇಯರಾಗಿ ಉಳಿದರು ಹಾಗೂ ಶಿಮ್ರಾನ್ ಹೆಟ್ಮಾಯೆರ್ 14 ಎಸೆತಗಳನ್ನು ಎದುರಿಸಿ ಕೇವಲ 6 ರನ್ ಕಲೆಹಾಕಿ ದೊಡ್ಡ ಹೊಡೆತಗಳನ್ನು ಬಾರಿಸಲು ವಿಫಲರಾದರು.
ಮುಂಬೈ ಇಂಡಿಯನ್ಸ್ ಪರ ಹೃತಿಕ್ ಶೋಕಿನ್ ಮತ್ತು ರಿಲೇ ಮೆರೆಡಿತ್ ತಲಾ 2 ವಿಕೆಟ್ ಪಡೆದರೆ, ಡೇನಿಯಲ್ ಸ್ಯಾಮ್ಸ್ ಮತ್ತು ಕುಮಾರ್ ಕಾರ್ತಿಕೇಯ ತಲಾ ಒಂದೊಂದು ವಿಕೆಟ್ ಪಡೆದರು.
ಆಡುವ ಬಳಗಗಳು:
ರಾಜಸ್ಥಾನ್ ರಾಯಲ್ಸ್ ಆಡುವ ಬಳಗ: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ ( ವಿಕೆಟ್ ಕೀಪರ್/ ನಾಯಕ), ಡೇರಿಲ್ ಮಿಚೆಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಕುಲದೀಪ್ ಸೇನ್
ಮುಂಬೈ ಇಂಡಿಯನ್ಸ್ ಆಡುವ ಬಳಗ: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಹೃತಿಕ್ ಶೋಕೀನ್, ಡೇನಿಯಲ್ ಸಾಮ್ಸ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ರಿಲೆ ಮೆರೆಡಿತ್