ಮುಂಬೈ ವಿರುದ್ಧ ಶತಕ ಚಚ್ಚಿ ಅಬ್ಬರಿಸಿದ ಕನ್ನಡಿಗ ರಾಹುಲ್; ಐಪಿಎಲ್ ಇತಿಹಾಸದಲ್ಲಿ ಇಂಥ ಶತಕ ಯಾರೂ ಸಿಡಿಸಿಲ್ಲ!


ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 26ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸಿದ್ದು, ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದೆ.
ಇನ್ನು ಸತತ 5 ಪಂದ್ಯಗಳಲ್ಲಿ ಸೋತು ನೆಲಕಚ್ಚಿರುವ ಮುಂಬೈ ಇಂಡಿಯನ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದೊಂದಿಗೆ ಕಣಕ್ಕಿಳಿದಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ. ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 200 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ 52 ರನ್‌ಗಳ ಜೊತೆಯಾಟವನ್ನು ಆಡಿದರು. ಕ್ವಿಂಟನ್ ಡಿ ಕಾಕ್ 24 ರನ್‌ಗಳಿಗೆ ಔಟ್ ಆದರೆ, ಕೆಎಲ್ ರಾಹುಲ್ ಇನಿಂಗ್ಸ್ ಮುಗಿಯುವವರೆಗೂ ಬ್ಯಾಟ್ ಬೀಸಿ 60 ಎಸೆತಗಳಲ್ಲಿ 103 ರನ್ ಕಲೆಹಾಕಿ ಅಜೇಯರಾಗಿ ಉಳಿದರು. ಹೀಗೆ ಇನ್ನಿಂಗ್ಸ್‌ನ ಆರಂಭದಿಂದ ಅಂತಿಮ ಹಂತದವರೆಗೂ ಬ್ಯಾಟ್ ಬೀಸಿದ ಕೆಎಲ್ ರಾಹುಲ್ ಬಾರಿಸಿರುವ ಈ ಶತಕ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ಈ ಕುರಿತಾದ ಮಾಹಿತಿ ಕೆಳಕಂಡಂತಿದೆ ಓದಿ.

ಐಪಿಎಲ್ ಇತಿಹಾಸದಲ್ಲೇ ಇಂಥ ಶತಕ ಯಾರೂ ಬಾರಿಸಿಲ್ಲ
ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಶತಕ ಬಾರಿಸಿರುವ ಕೆಎಲ್ ರಾಹುಲ್ ಐಪಿಎಲ್ ಇತಿಹಾಸದಲ್ಲಿಯೇ ವಿಶೇಷ ಹಾಗೂ ವಿಶಿಷ್ಟವಾದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹೌದು, ಕೆಎಲ್ ರಾಹುಲ್ ಬಾರಿಸಿದ ಈ ಶತಕ ಆಟಗಾರನೋರ್ವ ತನ್ನ 100ನೇ ಐಪಿಎಲ್ ಪಂದ್ಯದಲ್ಲಿ ಬಾರಿಸಿರುವ ಚೊಚ್ಚಲ ಶತಕವಾಗಿದೆ. ಕೆಎಲ್ ರಾಹುಲ್ ಆಡಿರುವ ಈ ಪಂದ್ಯ ತನ್ನ ಐಪಿಎಲ್ ವೃತ್ತಿಬದುಕಿನ 100ನೇ ಪಂದ್ಯವಾಗಿದ್ದು, ತನ್ನ ಶತಕದ ಪಂದ್ಯದಲ್ಲಿ ಶತಕ ಬಾರಿಸಿ ನೂತನ ದಾಖಲೆಯನ್ನು ಕೆತ್ತಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಚೊಚ್ಚಲ ಶತಕ ಕೂಡ ಹೌದು
ಇನ್ನು ಕೆಎಲ್ ರಾಹುಲ್ ಬಾರಿಸಿರುವ ಈ ಶತಕ ಐಪಿಎಲ್ ಇತಿಹಾಸದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರನೋರ್ವ ಸಿಡಿಸಿದ ಮೊದಲ ಶತಕ ಎಂಬ ವಿಶೇಷತೆಯನ್ನು ಕೂಡ ಹೊಂದಿದೆ. ಭವಿಷ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಪ್ರಥಮ ಶತಕ ಸಿಡಿಸಿದ ಆಟಗಾರ ಯಾರು ಎಂಬ ಪ್ರಶ್ನೆ ಎದ್ದಾಗ ಕೆಎಲ್ ರಾಹುಲ್ ಎಂಬ ಉತ್ತರ ಸಿಗಲಿದೆ.

ಕೆಎಲ್ ರಾಹುಲ್ ಬಾರಿಸಿದ ಮೂರನೇ ಶತಕವಿದು
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 100 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕನ್ನಡಿಗ ಕೆಎಲ್ ರಾಹುಲ್ ಈ ಶತಕವನ್ನು ಸೇರಿ ಒಟ್ಟು 3 ಶತಕಗಳನ್ನು ಬಾರಿಸಿದ್ದಾರೆ. ಈ ಹಿಂದೆ 2019 ಮತ್ತು 2020ರ ಐಪಿಎಲ್ ಟೂರ್ನಿಗಳಲ್ಲಿ ಕೆಎಲ್ ರಾಹುಲ್ ತಲಾ ಒಂದೊಂದು ಶತಕವನ್ನು ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications