ವಿಕೆಟ್ ಪಡೆದು ಮುತ್ತಿಟ್ಟು ಕೆಟ್ಟ ರೀತಿ ಸಂಭ್ರಮಿಸಿದ ಪಾಂಡ್ಯ; ಕೋಪಗೊಂಡ ಪೊಲಾರ್ಡ್ ಮಾಡಿದ್ದೇನು?

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಸಾಲು ಸಾಲು ಪಂದ್ಯಗಳಲ್ಲಿ ಸೋತು ನೆಲಕಚ್ಚಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 8 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ ಎಲ್ಲಾ ಪಂದ್ಯಗಳಲ್ಲಿಯೂ ಸೋತು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.
5 ಬಾರಿ ಇಂಡಿಯನ್ ಪ್ರಿಮಿಯರ್ ಲೀಗ್ ಟ್ರೋಫಿಯನ್ನು ಮುಡಿಗೇರಿಸಿಕೊಂಡ ಬೃಹತ್ ದಾಖಲೆಯನ್ನು ತನ್ನ ಹೆಸರಿನಲ್ಲಿ ಹೊಂದಿರುವ ಮುಂಬೈ ಇಂಡಿಯನ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಾಲು ಸಾಲು ಪಂದ್ಯಗಳಲ್ಲಿ ಸೋತಿದ್ದು, ಕಳೆದ ಬಾರಿಯ ಐಪಿಎಲ್ ಆವೃತ್ತಿಯ ಹಾಗೆ ಈ ಬಾರಿಯೂ ಸಹ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರ ಬೀಳಲಿದೆ. ಸಾಲು ಸಾಲು ಪಂದ್ಯಗಳಿಂದ ಸೋತು ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಆಟಗಾರರು ಹತಾಶೆಯಲ್ಲಿದ್ದು, ಗೆಲುವಿನ ಖಾತೆ ತೆರೆಯಲು ಪರದಾಡುತ್ತಿದ್ದಾರೆ.
ಹೀಗಿರುವಾಗ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಕೃನಾಲ್ ಪಾಂಡ್ಯ ಈ ಬಾರಿ ಲಕ್ನೋ ಸೂಪರ್ ಜಯಂಟ್ಸ್ ವಿರುದ್ಧ ಕಣಕ್ಕಿಳಿದಿದ್ದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪೊಲಾರ್ಡ್ ವಿಕೆಟ್ ಪಡೆದು ವಿಚಿತ್ರವಾಗಿ ಸಂಭ್ರಮಿಸಿದ್ದಾರೆ. ಹೌದು, ಮುಂಬೈ ಇಂಡಿಯನ್ಸ್ ತನ್ನ ಎಂಟನೇ ಪಂದ್ಯದಲ್ಲಿ ಏಪ್ರಿಲ್ 24ರಂದು ಲಕ್ನೋ ಸೂಪರ್ ಜಯಂಟ್ಸ್ ವಿರುದ್ಧ ಸೆಣಸಾಟ ನಡೆಸಿದ್ದು, ಈ ಪಂದ್ಯದ ವೇಳೆ ಕೃನಾಲ್ ಪಾಂಡ್ಯ ವಿಚಿತ್ರ ರೀತಿಯಲ್ಲಿ ಸಂಭ್ರಮಿಸಿದ ಈ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಚರ್ಚಾಸ್ಪದ ವಿಷಯವಾಗಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಕೆಳಕಂಡಂತಿದೆ.

ಅಂತಿಮ ಓವರ್‌ನಲ್ಲಿ ಪೊಲಾರ್ಡ್ ವಿಕೆಟ್ ಪಡೆದು ಸಂಭ್ರಮಿಸಿದ ಕೃನಾಲ್
ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಡೆದ ಪಂದ್ಯದ ಅಂತಿಮ ಓವರ್‌ನ್ನು ಕ್ರುನಾಲ್ ಪಾಂಡ್ಯ ಬೌಲಿಂಗ್ ಮಾಡಿದರೆ, ಕೀರನ್ ಪೊಲಾರ್ಡ್ ಮೊದಲನೇ ಎಸೆತವನ್ನು ಎದುರಿಸಿದರು. ಮೊದಲನೇ ಎಸೆತದಲ್ಲಿಯೇ ಕೀರನ್ ಪೊಲಾರ್ಡ್ ದೀಪಕ್ ಹೂಡಾಗೆ ಕ್ಯಾಚ್ ನೀಡಿ ಬೇಸರದಿಂದ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಕೀರನ್ ಪೊಲಾರ್ಡ್ ಬಳಿ ಬಂದ ಕೃನಾಲ್ ಪಾಂಡ್ಯ ಪೊಲಾರ್ಡ್ ಮೇಲೆ ಹಾರಿ ತಬ್ಬಿಕೊಂಡು ಪೊಲಾರ್ಡ್ ತಲೆಗೆ ಮುತ್ತಿಟ್ಟಿದ್ದಾರೆ. ಹೀಗೆ ವಿಕೆಟ್ ಪಡೆದ ಬರದಲ್ಲಿ ಕೃನಾಲ್ ಪಾಂಡ್ಯ ಸಂಭ್ರಮಿಸಿದ ರೀತಿ ವಿವಾದದ ರೂಪ ಪಡೆದುಕೊಂಡಿದೆ.

ಕೃನಾಲ್ ನಡೆಗೆ ಕೋಪಗೊಂಡ ಪೊಲಾರ್ಡ್
ಇನ್ನು ಕೃನಾಲ್ ಪಾಂಡ್ಯ ನಡೆಗೆ ಕೀರನ್ ಪೊಲಾರ್ಡ್ ಕೋಪಗೊಂಡಿದ್ದಾರೆ. ಕಳೆದ ಆವೃತ್ತಿಗಳಲ್ಲಿ ಈ ಇಬ್ಬರೂ ಒಂದೇ ತಂಡದ ಪರ ಕಣಕ್ಕಿಳಿದು ಪರಸ್ಪರ ಉತ್ತಮ ಸ್ನೇಹವನ್ನು ಹೊಂದಿದ್ದರೂ ಸಹ ಈ ಬಾರಿ ಮುಂಬೈ ಇಂಡಿಯನ್ಸ್ ಸಾಲು ಸಾಲು ಸೋಲು ಕಂಡಿರುವ ಕಾರಣ ಕೀರನ್ ಪೊಲಾರ್ಡ್ ಮೊದಲೇ ಬೇಸರದಲ್ಲಿದ್ದರು. ಇಂಥ ಸಂದರ್ಭದಲ್ಲಿ ಕೃನಾಲ್ ಪಾಂಡ್ಯ ಈ ರೀತಿ ನಡೆದುಕೊಂಡದ್ದು ಪೊಲಾರ್ಡ್‌ಗೆ ಇಷ್ಟವಾಗಲಿಲ್ಲ ಎಂಬುದು ಪೊಲಾರ್ಡ್ ಮುಖದ ಹಾವಭಾವದಲ್ಲೇ ತಿಳಿಯುತ್ತಿತ್ತು. ಸಾಮಾನ್ಯವಾಗಿ ಎದುರಾಳಿ ತಂಡದ ಆಟಗಾರ ಕೆಣಕಿದಾಗಲೆಲ್ಲಾ ಸ್ಥಳದಲ್ಲಿಯೇ ಸರಿಯಾದ ಉತ್ತರ ನೀಡುವ ಪೊಲಾರ್ಡ್ ಯಾವುದೇ ಪ್ರತಿಕ್ರಿಯೆ ನೀಡದೇ ಕೋಪದ ಮುಖ ಹೊತ್ತು ಮೈದಾನದಿಂದ ಹೊರನಡೆದರು.

ಇದು ತಪ್ಪು ಎಂದ ಸುನಿಲ್ ಗವಾಸ್ಕರ್
ಇದೇ ಸಂದರ್ಭದಲ್ಲಿ ಕಾಮೆಂಟರಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೃನಾಲ್ ಪಾಂಡ್ಯ ಈ ರೀತಿ ಮಾಡಬಾರದಿತ್ತು, ಖಂಡಿತ ಇದು ಪೊಲಾರ್ಡ್‌ಗೆ ಇಷ್ಟವಾಗಿಲ್ಲ ಎಂದು ಹೇಳಬಲ್ಲೆ, ಸ್ನೇಹವನ್ನು ಮೈದಾನದಿಂದ ಹೊರಗಿಟ್ಟುಕೊಳ್ಳಬೇಕು ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications