DC vs PBKS: ಪಂದ್ಯಶ್ರೇಷ್ಠ ಪ್ರಶಸ್ತಿ ನನಗಲ್ಲ, ಚೆನ್ನಾಗಿ ಆಡಿದ ಆತನಿಗೆ ಸೇರಬೇಕು ಎಂದ ಕುಲದೀಪ್ ಯಾದವ್!

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಟವನ್ನು ನಡೆಸಿದವು. ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಸೆಣಸಾಟದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್‍ಗಳ ಬೃಹತ್ ಗೆಲುವನ್ನು ದಾಖಲಿಸಿತು.
ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲ್ ಔಟ್ ಆಗಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 116 ರನ್‌ಗಳ ಗುರಿಯನ್ನು ನೀಡಿತು. ಇನ್ನು ಪಂಜಾಬ್ ಕಿಂಗ್ಸ್ ತಂಡ ನೀಡಿದ ಈ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 10.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119 ರನ್ ಚಚ್ಚಿ ಇನ್ನೂ 57 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಕೇಕೆ ಹಾಕಿತು.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕರಾದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಅಬ್ಬರದ ಬ್ಯಾಟಿಂಗ್ ನಡೆಸಿ ಮಿಂಚಿದರೆ, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಆಟಗಾರರನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಯಶಸ್ವಿಯಾದದ್ದು ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳು. ಹೌದು, ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಅಕ್ಷರ್ ಪಟೇಲ್ ಮತ್ತು ಲಲಿತ್ ಯಾದವ್ ತಲಾ 2 ವಿಕೆಟ್ ಪಡೆದರೆ, ಮುಸ್ತಫಿಜರ್ ರಹಮಾನ್ 1 ವಿಕೆಟ್ ಪಡೆದರು. ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ ಕಾರಣದಿಂದಲೇ ತಂಡ ಸುಲಭ ಜಯ ಸಾಧಿಸಿತು ಎಂದರೆ ತಪ್ಪಾಗಲಾರದು. ಇನ್ನು ಪಂದ್ಯದಲ್ಲಿ 2 ವಿಕೆಟ್ ಪಡೆದು ಮಿಂಚಿದ ಕುಲದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆದರೆ, ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅವರು ಈ ಪ್ರಶಸ್ತಿಗೆ ತಂಡದ ಮತ್ತೋರ್ವ ಆಟಗಾರ ಅರ್ಹ ಎಂದು ಈ ಕೆಳಕಂಡಂತೆ ಹೇಳಿಕೆ ನೀಡಿ ಹೃದಯ ಗೆದ್ದರು.

ಕುಲದೀಪ್ ಯಾದವ್ ಹೇಳಿದ್ದಿಷ್ಟು
ಮೊದಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ನಂತರ ಧನ್ಯವಾದಗಳನ್ನು ತಿಳಿಸಿದ ಕುಲದೀಪ್ ಯಾದವ್ ಈ ಪ್ರಶಸ್ತಿಗೆ ನನಗಿಂತ ತನ್ನ ಸಹ ಆಟಗಾರ ಅಕ್ಷರ್ ಪಟೇಲ್ ಹೆಚ್ಚು ಅರ್ಹ ಎಂದು ಹೇಳಿಕೆ ನೀಡಿದರು. ಮಧ್ಯಮ ಓವರ್‌ಗಳಲ್ಲಿ ಎದುರಾಳಿ ತಂಡದ ಪ್ರಮುಖ ವಿಕೆಟ್‍ಗಳನ್ನು ಪಡೆದ ಅಕ್ಷರ್ ಪಟೇಲ್ ಜತೆ ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ ಎಂದು ಕುಲದೀಪ್ ಯಾದವ್ ಹೇಳಿದರು. ಈ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಸ್ಸನ್ನು ಕುಲದೀಪ್ ಯಾದವ್ ಗೆದ್ದಿದ್ದಾರೆ.

ಸ್ಫೋಟಕ ಆಟಗಾರರ ವಿಕೆಟ್ ಪಡೆದ ಅಕ್ಷರ್ ಪಟೇಲ್
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಅಕ್ಷರ್ ಪಟೇಲ್ ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಎದುರಾಳಿ ಪಂಜಾಬ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಬಲಿಷ್ಠ ಆಟಗಾರರಾದ ಲಿಯಾಮ್ ಲಿವಿಂಗ್ ಸ್ಟನ್ ಮತ್ತು ಜಿತೇಶ್ ಶರ್ಮಾ ಅವರ ವಿಕೆಟ್‍ಗಳನ್ನು ಪಡೆದರು. ಅದರಲ್ಲಿಯೂ 30 ರನ್‌ಗಳ ಗಡಿ ದಾಟಿ ತಂಡಕ್ಕೆ ಆಸರೆಯಾಗುತ್ತಿದ್ದ ಜಿತೇಶ್ ಶರ್ಮಾ ಅವರ ವಿಕೆಟ್ ಪಡೆದ ಅಕ್ಷರ್ ಪಟೇಲ್ ಬ್ರೇಕ್ ನೀಡಿದರು. ಒಟ್ಟಾರೆ 4 ಓವರ್ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ ಕೇವಲ 10 ರನ್ ನೀಡಿ 2 ವಿಕೆಟ್ ಪಡೆದರು.

ಕುಲದೀಪ್ ಯಾದವ್ ಪ್ರದರ್ಶನ
ಇನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕುಲದೀಪ್ ಯಾದವ್ ಈ ಪಂದ್ಯದಲ್ಲಿ ಒಟ್ಟು 4 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ 2 ವಿಕೆಟ್‍ಗಳನ್ನು ಪಡೆದುಕೊಂಡರು. ಎದುರಾಳಿ ತಂಡದ ಕಗಿಸೋ ರಬಾಡ ಮತ್ತು ನಾಥನ್ ಎಲ್ಲಿಸ್ ಅವರ ವಿಕೆಟ್‍ಗಳನ್ನು ಕುಲದೀಪ್ ಯಾದವ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications