RCB vs LSG: ಎಲಿಮಿನೇಟರ್‌ನಲ್ಲಿ ಲಕ್ನೋಗೆ ಸೋಲು ತಂದ ಪಾಟಿದಾರ್‌ಗೆ ಪ್ರಶಸ್ತಿಗಳ ಸುರಿಮಳೆ; ಸಿಕ್ಕ ಹಣವೆಷ್ಟು?

ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ನಿರ್ಣಾಯಕ ಎಲಿಮಿನೇಟರ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಫೀಲ್ಡಿಂಗ್ ಆಯ್ದುಕೊಂಡು ತಮ್ಮ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿ ಕೆಎಲ್ ರಾಹುಲ್ ಪಡೆಗೆ 208 ರನ್‌ಗಳ ಬೃಹತ್ ಗುರಿಯನ್ನು ನೀಡಿತು.
ಇನ್ನು ಈ ಕಠಿಣ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿ 14 ರನ್‌ಗಳ ಸೋಲನ್ನು ಅನುಭವಿಸುವುದರ ಮೂಲಕ ಟೂರ್ನಿಯಿಂದ ಹೊರಬಿತ್ತು. ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಯಶಸ್ವಿಯಾಗಿ ಪ್ರವೇಶ ಪಡೆದುಕೊಂಡಿತು. ಗೆಲ್ಲಲೇಬೇಕಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲನೇ ಓವರ್‌ನಲ್ಲಿಯೇ ಗೋಲ್ಡನ್ ಡಕ್ ಔಟ್ ಆದ ಕಾರಣ ತಂಡ ಆರಂಭಿಕ ಆಘಾತ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿತು.
ದೊಡ್ಡ ಕೊಡುಗೆ ನೀಡುವ ನಿರೀಕ್ಷೆ ಇದ್ದ ಫಾಫ್ ಡು ಪ್ಲೆಸಿಸ್ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರೆ, ವಿರಾಟ್ ಕೊಹ್ಲಿ 25 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 9 ರನ್ ಗಳಿಸಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಹೀಗೆ ಮಹತ್ವದ ಪಂದ್ಯದಲ್ಲಿ ಘಟಾನುಘಟಿ ಆಟಗಾರರೇ ವಿಫಲರಾದರೆ ಫಾಫ್ ಡು ಪ್ಲೆಸಿಸ್ ವಿಕೆಟ್ ಬಿದ್ದ ಕೂಡಲೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಜತ್ ಪಾಟಿದಾರ್ 54 ಎಸೆತಗಳಲ್ಲಿ ಅಜೇಯ 112 ರನ್ ಚಚ್ಚಿ ಅಬ್ಬರಿಸಿದರು. ವಿರಾಟ್ ಕೊಹ್ಲಿ ಜತೆ 66 ರನ್‌ಗಳ ಜತೆಯಾಟವಾಡಿದ ಪಟಿದಾರ್ 49 ಎಸೆತಗಳಿಗೆ 101 ರನ್ ಚಚ್ಚಿ ಐಪಿಎಲ್ ಪ್ಲೇ ಆಫ್ ಸುತ್ತಿನಲ್ಲಿ ವೇಗದ ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದರು ಹಾಗೂ ದಿನೇಶ್ ಕಾರ್ತಿಕ್ ಮತ್ತು ಪಟಿದಾರ್ 92 ರನ್‌ಗಳ ಅಬ್ಬರದ ಜತೆಯಾಟವಾಡಿ ತಂಡ ಬೃಹತ್ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಹೀಗೆ ಅಬ್ಬರಿಸಿದ ಪಾಟಿದಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವುದರ ಜತೆಗೆ ಹಲವು ಪ್ರಶಸ್ತಿ ಮತ್ತು ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ರಜತ್ ಪಾಟಿದಾರ್ ಇದೊಂದೇ ಪಂದ್ಯದಲ್ಲಿ ಗೆದ್ದ ಪ್ರಶಸ್ತಿ ಹಾಗೂ ಸಿಕ್ಕ ಹಣದ ಮೊತ್ತದ ವಿವರ ಈ ಕೆಳಕಂಡಂತಿದೆ.

ರಜರ್ ಪಾಟಿದಾರ್ ಪಡೆದ ಪ್ರಶಸ್ತಿಗಳು
ಈ ಒಂದು ಪಂದ್ಯದಲ್ಲಿಯೇ ರಜತ್ ಪಾಟಿದಾರ್ ತನ್ನ ಅಬ್ಬರದ ಆಟದಿಂದ ಒಟ್ಟು ಆರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವುಗಳ ಪಟ್ಟಿ ಈ ಕೆಳಕಂಡಂತಿದೆ.
ಪಂದ್ಯಶ್ರೇಷ್ಠ - ರಜತ್ ಪಾಟಿದಾರ್
ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್ - ರಜತ್ ಪಾಟಿದಾರ್
ಗೇಮ್ ಚೇಂಜರ್ ಆಫ್ ದಿ ಮ್ಯಾಚ್ - ರಜತ್ ಪಾಟಿದಾರ್
ಹೆಚ್ಚಿನ ಸಿಕ್ಸರ್‌ಗಳು - ರಜತ್ ಪಾಟಿದಾರ್
ಮೋಸ್ಡ್ ವ್ಯಾಲ್ಯುಯೆಬಲ್ ಅಸೆಟ್ ಆಫ್ ದಿ ಮ್ಯಾಚ್ - ರಜತ್ ಪಾಟಿದಾರ್
ಹೆಚ್ಚಿನ ಬೌಂಡರಿಗಳು - ರಜತ್ ಪಾಟಿದಾರ್

ಸಿಕ್ಕ ಹಣವೆಷ್ಟು?
ಟಾಟಾ ಐಪಿಎಲ್ ಪಂದ್ಯಶ್ರೇಷ್ಠ ಪ್ರಶಸ್ತಿ - 5 ಲಕ್ಷ
ಹೆಚ್ಚು ಬೌಂಡರಿಗಳು - 1 ಲಕ್ಷ
ಮೋಸ್ಡ್ ವ್ಯಾಲ್ಯುಯೆಬಲ್ ಅಸೆಟ್ ಆಫ್ ದಿ ಮ್ಯಾಚ್ - 1 ಲಕ್ಷ
ಹೆಚ್ಚಿನ ಸಿಕ್ಸರ್‌ಗಳು - 1 ಲಕ್ಷ
ಗೇಮ್ ಚೇಂಜರ್ ಆಫ್ ದಿ ಮ್ಯಾಚ್ - 1 ಲಕ್ಷ
ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್ - 1 ಲಕ್ಷ
ಹೀಗೆ ರಜತ್ ಪಾಟಿದಾರ್ 10 ಲಕ್ಷ ರೂಪಾಯಿಗಳನ್ನು ಇದೊಂದೇ ಪಂದ್ಯದಿಂದ ಬಹುಮಾನವಾಗಿ ಪಡೆದುಕೊಂಡಿದ್ದಾರೆ.

ವೇಗದ ಶತಕದ ದಾಖಲೆ
ಇನ್ನು ರಜತ್ ಪಾಟಿದಾರ್ ಈ ಪಂದ್ಯದಲ್ಲಿ 49 ಎಸೆತಗಳಿಗೆ 101 ರನ್ ಚಚ್ಚುವುದರ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಪ್ಲೇಆಫ್ ಪಂದ್ಯಗಳಲ್ಲಿ ಅತಿವೇಗದ ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ಈ ಹಿಂದೆ ಈ ದಾಖಲೆ ಮಾಡಿದ್ದ ವೃದ್ಧಿಮಾನ್ ಸಹಾರನ್ನು ಪಾಟಿದಾರ್ ಹಿಂದಿಕ್ಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications