ಐಪಿಎಲ್ 2022: ಮೆಗಾ ಹರಾಜಿನ ನಂತರ ಎಲ್ಲಾ ತಂಡಗಳಿರುವ ಮೈನಸ್ ಪಾಯಿಂಟ್‌ಗಳ ಪಟ್ಟಿ ಇಲ್ಲಿದೆ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರೇಕ್ಷಕರಲ್ಲಿ ಹಲವಾರು ದಿನಗಳಿಂದ ಇದ್ದ ಯಾವ ಆಟಗಾರರು ಯಾವ ಫ್ರಾಂಚೈಸಿಗಳ ಪಾಲಾಗಲಿದ್ದಾರೆ ಎಂಬ ಪ್ರಶ್ನೆ ಹಾಗೂ ಕುತೂಹಲಗಳಿಗೆ ಕಳೆದ ಶನಿವಾರ ಹಾಗೂ ಭಾನುವಾರದಂದು ನಡೆದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಉತ್ತರವನ್ನು ನೀಡಿದೆ. ಹೌದು, ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆದ ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರು ಭಾಗವಹಿಸಿದ್ದು, 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ.
ಹೀಗೆ ಆಟಗಾರರ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ನಂತರ ಯಾವ ತಂಡ ಉತ್ತಮ ಆಟಗಾರರನ್ನು ಹೊಂದಿ ಬಲಿಷ್ಠವಾಗಿದೆ ಮತ್ತು ಯಾವ ತಂಡ ತಪ್ಪಾದ ಆಟಗಾರರನ್ನು ಆಯ್ದುಕೊಂಡು ಹಿನ್ನಡೆ ಅನುಭವಿಸಿದೆ ಎಂಬುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿವೆ. ಇನ್ನು ಬಲಿಷ್ಠ ಆಟಗಾರರನ್ನು ಕೋಟಿ ಕೋಟಿ ಹೂಡಿಕೆ ಮಾಡಿ ವಿವಿಧ ಫ್ರಾಂಚೈಸಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದರೂ ಸಹ ಕೆಲವೊಂದಿಷ್ಟು ಮೈನಸ್ ಪಾಯಿಂಟ್‌ಗಳು ಎಲ್ಲಾ ಫ್ರಾಂಚೈಸಿಗಳಲ್ಲಿಯೂ ಇವೆ. ಹೀಗೆ ಮೆಗಾ ಹರಾಜಿನ ನಂತರ ಎಲ್ಲಾ ಹತ್ತು ಫ್ರಾಂಚೈಸಿಗಳು ಹೊಂದಿರುವ ಮೈನಸ್ ಪಾಯಿಂಟ್‌ಗಳ ವಿವರ ಈ ಕೆಳಕಂಡಂತಿದೆ.

ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಂಡ್ಯ ಬ್ರದರ್ಸ್ ತಂಡದಲ್ಲಿ ಇಲ್ಲದೇ ಇರುವುದು ಮುಂಬೈ ಇಂಡಿಯನ್ಸ್ ಪಾಲಿಗೆ ದೊಡ್ಡ ಮೈನಸ್ ಪಾಯಿಂಟ್ ಎಂದೇ ಹೇಳಬಹುದು. ಹಾಗೂ ತಂಡದಲ್ಲಿ ಭಾರತದ ಸ್ಟಾರ್ ಸ್ಪಿನ್ನರ್ ಇಲ್ಲದೇ ಇರುವುದು ಕೂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಲಿದೆ.
ಫಾಫ್ ಡು ಪ್ಲೆಸಿಸ್, ಜೋಶ್ ಹೇಜಲ್ ವುಡ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಮತ್ತೆ ತಂಡದಲ್ಲಿ ಹೊಂದದೇ ಇರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಬಹುದು. ಆದರೆ ಪರ್ಯಾಯವಾಗಿ ಆ್ಯಡಮ್ ಮಿಲ್ನೆ ಮತ್ತು ಶಿವಂ ದುಬೆ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಂದಿದ್ದರೂ ಸಹ ಫಾಫ್ ಡು ಪ್ಲೆಸಿಸ್ ಅನುಪಸ್ಥಿತಿ ಕಾಡುವುದಂತೂ ಖಚಿತ.

ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್
ಹೆಚ್ಚು ಆಲ್ ರೌಂಡರ್ ಆಟಗಾರರು ಮತ್ತು ವೇಗಿಗಳಿಂದ ಕೂಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೆಚ್ಚೇನೂ ಮೈನಸ್ ಪಾಯಿಂಟ್ ಹೊಂದಿಲ್ಲ. ಆದರೆ ರವಿ ಬಿಷ್ಣೋಯಿ ಮತ್ತು ಕೃಷ್ಣಪ್ಪ ಗೌತಮ್ ರೀತಿಯ ಹಿರಿಯ ಸ್ಪಿನ್ ಬೌಲರ್‌ಗಳು ತಂಡದಲ್ಲಿದ್ದು ಯುವ ಸ್ಪಿನ್ ಬೌಲರ್‌ಗಳು ಇಲ್ಲದೆ ಇರುವುದು ದುರ್ಬಲತೆ ಎಂದು ಹೇಳಬಹುದು.
ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅವೇಶ್ ಖಾನ್, ಕಗಿಸೋ ರಬಾಡ ಮತ್ತು ಅನ್ರಿಕ್ ನೋರ್ಕಿಯಾ ರೀತಿಯ ಮಾರಕ ವೇಗಿಗಳನ್ನು ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಸದ್ಯ ಕೇವಲ ಅನ್ರಿಕ್ ನೋರ್ಕಿಯಾರನ್ನು ಮಾತ್ರ ತಂಡದಲ್ಲಿ ಹೊಂದಿದೆ. ಸದ್ಯ ಖಲೀಲ್ ಅಹ್ಮದ್, ಚೇತನ್ ಸಕಾರಿಯಾ ಮತ್ತು ಶಾರ್ದೂಲ್ ಠಾಕೂರ್ ರೀತಿಯ ವೇಗಿಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ಹೊಂದಿದ್ದರೂ ಸಹ ಕಳೆದ ಬಾರಿ ರೀತಿಯ ಅನುಭವಿ ವೇಗಿಗಳ ಕೊರತೆ ಇರುವುದು ತಂಡಕ್ಕೆ ಹಿನ್ನಡೆಯಾಗಲಿದೆ.

ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್
ಕಳೆದ 2-3 ಆವೃತ್ತಿಗಳ ರೀತಿಯೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕೂಡ ಪಂಜಾಬ್ ಕಿಂಗ್ಸ್ ಮಧ್ಯಮ ಕ್ರಮಾಂಕದ ಭಾರತೀಯ ಬ್ಯಾಟ್ಸ್‌ಮನ್‌ಗಳ ಕೊರತೆಯನ್ನು ಎದುರಿಸಲಿದ್ದು ಇದು ತಂಡಕ್ಕೆ ಸಮಸ್ಯೆಯಾಗಿ ಪರಿಣಮಿಸಬಹುದು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ರನ್ ರೇಟ್ ಹೆಚ್ಚಿಸುವಂಥ ವೇಗದ ಇನ್ನಿಂಗ್ಸ್ ಕಟ್ಟಬಲ್ಲ ಆಟಗಾರನ ಕೊರತೆ ಉಂಟಾಗಬಹುದು. ಆಡುವ ಬಳಗದಲ್ಲಿ ಅಜಿಂಕ್ಯ ರಹಾನೆ ಅಥವಾ ಶ್ರೇಯಸ್ ಅಯ್ಯರ್ ಇರಲಿದ್ದು ಈ ಇಬ್ಬರೂ ಸಹ ರನ್ ರೇಟ್ ಹೆಚ್ಚಿಸುವ ಆಟವನ್ನು ಆಡುವುದು ಅನುಮಾನ ಮೂಡಿಸಿದೆ.

ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಬಾರಿ ಬ್ಯಾಟಿಂಗ್ ಸಮಸ್ಯೆ ಉಂಟಾಗಬಹುದು. ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳಾಗಿರುವ ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ಈ ಮೂವರು ಸಹ ಅಂತರರಾಷ್ಟ್ರೀಯ ಹಿರಿಯರ ತಂಡದಲ್ಲಿ ಇಲ್ಲದೇ ಇರುವುದು ತಂಡಕ್ಕೆ ಹಿನ್ನಡೆಯುಂಟು ಮಾಡಲಿದೆ. ಅಷ್ಟೇ ಅಲ್ಲದೆ ಮಧ್ಯಮ ಕ್ರಮಾಂಕದ ನಂತರ ಕಣಕ್ಕಿಳಿಯಲಿರುವ ಜೇಮ್ಸ್ ನೀಶಮ್, ರಿಯಾನ್ ಪರಾಗ್ ಮತ್ತು ನಾಥನ್ ಕೌಲ್ಟರ್ ನೈಲ್ ಕೂಡ ಬ್ಯಾಟಿಂಗ್ ದುರ್ಬಲತೆಯನ್ನು ಹೊಂದಿದ್ದಾರೆ.
ರಶೀದ್ ಖಾನ್ ಸನ್ ರೈಸರ್ಸ್ ಹೈದ್ರಾಬಾದ್ ತಂಡದಿಂದ ನಿರ್ಗಮಿಸಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಲಿದೆ. ವಾಷಿಂಗ್ಟನ್ ಸುಂದರ್ ಇದ್ದರೂ ಕೂಡ ರಶೀದ್ ಖಾನ್ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲರಾಗಬಹುದು. ಹಾಗೂ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಹೆಚ್ಚೇನೂ ಅನುಭವಿಗಳಲ್ಲದ ಕಾರಣ ಕೇನ್ ವಿಲಿಯಮ್ಸನ್ ಮೇಲೆ ಹೆಚ್ಚಿನ ಒತ್ತಡ ಬೀಳುವುದು ಖಚಿತ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೆಚ್ಚೇನೂ ಹಿನ್ನಡೆಯನ್ನು ಹೊಂದಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ನೆಲಕಚ್ಚಿ ನಿಂತು ಬ್ಯಾಟ್ ಬೀಸಬಲ್ಲ ಆಟಗಾರರ ಕೊರತೆ ಇದೆ. ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೊರ್ ಮತ್ತು ಅನೂಜ್ ರಾವತ್ ಹೆಚ್ಚು ಅಬ್ಬರಿಸದೇ ಇರುವ ಸಾಧ್ಯತೆಗಳು ಹೆಚ್ಚಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಬಹುದು.
ಈ ಬಾರಿಯ ಹತ್ತು ತಂಡಗಳ ಪೈಕಿ ಗುಜರಾತ್ ಟೈಟಾನ್ಸ್ ಅತಿ ಹೆಚ್ಚು ದುರ್ಬಲತೆಯನ್ನು ಹೊಂದಿರುವ ತಂಡ ಎಂದರೆ ತಪ್ಪಾಗಲಾರದು. ಹಾರ್ದಿಕ್ ಪಾಂಡ್ಯ ನಾಯಕತ್ವದ ಈ ತಂಡ ಸ್ಟಾರ್ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೇ ಇರುವ ಹಿನ್ನಡೆಯನ್ನು ಅನುಭವಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications