IPL 2022: ಲಕ್ನೋ ತಂಡದ ಕೋಚ್ ಆಗಿ ಆ್ಯಂಡಿ ಫ್ಲವರ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಮುಂಬರುವ ಸೀಸನ್‌ನಲ್ಲಿ ಹೊಸ ಫ್ರಾಂಚೈಸಿ ಆಗಿ ಗುರುತಿಸಿಕೊಂಡಿರುವ ಲಕ್ನೋ, ತನ್ನ ತಂಡದ ಮುಖ್ಯ ಕೋಚ್ ಆಗಿ ಆ್ಯಂಡಿ ಫ್ಲವರ್‌ರನ್ನು ಆಯ್ಕೆಮಾಡಿಕೊಂಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ ತಯಾರಿ ಈಗಾಗಲೇ ಚುರುಕುಗೊಂಡಿದ್ದು, ರೀಟೈನ್ ಪ್ರಕ್ರಿಯೆಯು ಮುಗಿದಿದೆ. ಕೆಲವು ವರದಿ ಪ್ರಕಾರ ಈಗಾಗಲೇ ಪಂಜಾಬ್ ತಂಡ ತೊರೆದಿರುವ ಪ್ರಮುಖ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಲಕ್ನೋ ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ. ಇವರ ಜೊತೆಗೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಸಹಾಯಕ ಕೋಚ್ ಆಗಿದ್ದ ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಲಕ್ನೋ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಆಯ್ಕೆಗೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಿಂದ ಅಧಿಕೃತವಾಗಿ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಕೋಚ್ ಆಯ್ಕೆಯನ್ನು ಲಕ್ನೋ ಫ್ರಾಂಚೈಸಿ ಘೋಷಿಸಿದೆ.
"ಆ್ಯಂಡಿ ಆಟಗಾರನಾಗಿ ಮತ್ತು ಕೋಚ್ ಆಗಿ ಕ್ರಿಕೆಟ್ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ನಾವು ಅವರ ವೃತ್ತಿಪರತೆಯನ್ನು ಗೌರವಿಸುತ್ತೇವೆ. ಅವರು ನಮ್ಮ ದೃಷ್ಟಿಕೋನದಿಂದ ಉತ್ತಮ ಕೆಲಸ ಮಾಡುತ್ತಾರೆ ಮತ್ತು ನಮ್ಮ ತಂಡಕ್ಕೆ ಮೌಲ್ಯವನ್ನು ಹೆಚ್ಚಿಸುತ್ತಾರೆ ಎಂದು ಭಾವಿಸುತ್ತೇವೆ. " ಎಂದು ಲಕ್ನೋ ಐಪಿಎಲ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಹೇಳಿದ್ದಾರೆ.
ಫ್ರಾಂಚೈಸ್ ತನ್ನ ಹರಾಜಿನ ನೇಮಕಾತಿಗಳಲ್ಲಿ ಒಂದಾಗಿ ಕೆಎಲ್ ರಾಹುಲ್‌ರನ್ನು ಹೊಂದಲು ಸಜ್ಜಾಗಿರುವುದರಿಂದ ಆ್ಯಂಡಿ ಫ್ಲವರ್ ಕೂಡ ತಂಡಕ್ಕೆ ಬರಬಹುದು ಎಂದು ಅಂದಾಜಿಸಲಾಗಿತ್ತು. ಐಪಿಎಲ್ 2021 ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದ ರಾಹುಲ್ ಮತ್ತು ಫ್ಲವರ್ ಅವರನ್ನು ಲಕ್ನೋ ಮತ್ತೆ ಒಂದುಗೂಡಿಸುತ್ತದೆ. ರಾಹುಲ್ ತಂಡದ ನಾಯಕರಾಗಿದ್ದರು ಮತ್ತು ಫ್ಲವರ್ ಸಹಾಯಕ ಕೋಚ್ ಆಗಿದ್ದರು.
ಲಕ್ನೋ ಮತ್ತು ಅಹಮದಾಬಾದ್ ಎರಡಕ್ಕೂ ಮೂಲತಃ ಗರಿಷ್ಠ ಮೂರು ಆಟಗಾರರನ್ನು ಪಡೆದುಕೊಳ್ಳಲು ಡಿಸೆಂಬರ್ 25 ರವರೆಗೆ ಸಮಯ ನೀಡಲಾಗಿತ್ತು. ಈಗ ಸದ್ಯಕ್ಕೆ ಎರಡನೇ ಹೊಸ ತಂಡದ ಬಗ್ಗೆ ಸ್ಪಷ್ಟತೆ ಬಂದ ನಂತರ ಈ ಗಡುವನ್ನು ವಿಸ್ತರಿಸುವುದು ಬಹುತೇಕ ಖಚಿತವಾಗಿದೆ.
ಲಕ್ನೋ ಮತ್ತು ಅಹಮದಾಬಾದ್‌ಗಳನ್ನು ಎರಡು ಹೊಸ ಐಪಿಎಲ್ ಫ್ರಾಂಚೈಸಿಗಳಾಗಿ ಆಯ್ಕೆ ಮಾಡಲಾಗಿದ್ದು, ಒಟ್ಟು 10 ತಂಡಗಳು ಐಪಿಎಲ್ 15ನೇ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿವೆ.
ಲಕ್ನೋ ಐಪಿಎಲ್ ತಂಡವು 7 ಶತಕೋಟಿ ಡಾಲರ್ ಮೌಲ್ಯದ RPSG ಗ್ರೂಪ್‌ನ ಭಾಗವಾಗಿದೆ. ಅದು ಈ ಹಿಂದೆ ಪುಣೆ ಸೂಪರ್‌ಜೈಂಟ್ಸ್ ಅನ್ನು ಎರಡು ವರ್ಷಗಳ ಮಾಲಿಕತ್ವ ಹೊಂದಿತ್ತು. 2016 ಮತ್ತು 2017 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಎರಡನ್ನೂ ಅಮಾನತುಗೊಳಿಸಿದ್ದ ಅವಧಿಯಲ್ಲಿ ಪುಣೆ ಸೂಪರ್‌ಜೈಂಟ್ಸ್ ಚಾಲನೆಯಲ್ಲಿತ್ತು.
ಕ್ರಿಕ್‌ಬಝ್ ವರದಿಯ ಪ್ರಕಾರ, ಮುಂದಿನ ಐಪಿಎಲ್ ಸೀಸನ್ ಅನ್ನು ಅಂತಿಮಗೊಳಿಸಲಾಗಿಲ್ಲ. ಆದರೆ ಬಿಸಿಸಿಐ ಆಂತರಿಕವಾಗಿ ಪ್ರಮುಖ ಮಧ್ಯಸ್ಥಗಾರರಿಗೆ ತಿಳಿಸಿದ್ದು, ಮಂಡಳಿಯು ಐಪಿಎಲ್ 2022 ಅನ್ನು ಏಪ್ರಿಲ್ 2 ರಂದು ಚೆನ್ನೈನಲ್ಲಿ ಪ್ರಾರಂಭಿಸಲು ಯೋಜಿಸುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಚಾಂಪಿಯನ್ ಆಗಿರುವುದರಿಂದ, ಉದ್ಘಾಟನಾ ಪಂದ್ಯಕ್ಕೆ ಚೆನ್ನೈ ಸ್ಪಷ್ಟ ಆಯ್ಕೆಯಾಗಿದೆ. ಆದರೆ ಅವರ ಎದುರಾಳಿಗಳು ಮತ್ತೆ ಮುಂಬೈ ಇಂಡಿಯನ್ಸ್ ಆಗುತ್ತಾರೆಯೇ ಎಂಬ ಯಾವುದೇ ನಿರ್ಧಾರ ಹೊರಬಿದ್ದಿಲ್ಲ.
ಇದುವರೆಗೂ ಐಪಿಎಲ್ ಸೀಸನ್‌ನಲ್ಲಿ ಎಂಟು ತಂಡಗಳು ಒಟ್ಟು 60 ಪಂದ್ಯಗಳನ್ನ ಆಡುತ್ತಿದ್ದವು. ಆದ್ರೆ ಈ ಸೀಸನ್‌ನಲ್ಲಿ ಎರಡು ಹೆಚ್ಚುವರಿ ತಂಡಗಳು ಸೇರ್ಪಡೆಯಾಗುವುದರಿಂದ ಒಟ್ಟು 74 ಪಂದ್ಯಗಳು ನಡೆಯಲಿದೆ. ಅಂತಿಮ ಪಂದ್ಯವು ಜೂನ್‌ನ ಮೊದಲ ವಾರದಲ್ಲಿ ನಡೆಯಬಹುದು. ಅಂದರೆ ಜೂನ್ 4 ಇಲ್ಲವೆ 5ರಂದು ಫೈನಲ್ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications