MI vs LSG: ಲಕ್ನೋ ವಿರುದ್ಧವೂ ನಡೆಯದ ರೋಹಿತ್ ಬಾಯ್ಸ್ ಆಟ; ಸತತ 6ನೇ ಸೋಲುಂಡ ಮುಂಬೈ ಇಂಡಿಯನ್ಸ್!

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 5 ಬಾರಿ ಟ್ರೋಫಿ ಗೆದ್ದ ಬಲಿಷ್ಠ ತಂಡ ಎಂಬ ಬೃಹತ್ ಹೆಸರನ್ನು ಹೊಂದಿರುವಂತಹ ಮುಂಬೈ ಇಂಡಿಯನ್ಸ್ ಕಳೆದ ಬಾರಿಯ ಐಪಿಎಲ್ ಟೂರ್ನಿಯ ಹಾಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕೂಡ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬೀಳುವತ್ತ ಮುಖ ಮಾಡಿದೆ.
ಹೌದು, ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ 5 ಪಂದ್ಯಗಳಲ್ಲಿ ಸೋಲುಂಡಿದ್ದ ಮುಂಬೈ ಇಂಡಿಯನ್ಸ್ ಇಂದು ( ಏಪ್ರಿಲ್ 16 ) ನಡೆದ ತನ್ನ ಆರನೇ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಸೋಲನ್ನು ಅನುಭವಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು, ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ನಾಯಕ ಕೆ ಎಲ್ ರಾಹುಲ್ ಅಜೇಯ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ 200 ರನ್‌ಗಳ ಕಠಿಣ ಗುರಿಯನ್ನು ನೀಡಿತು.
ಇತ್ತ ಈ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿದ್ದು, ಲಕ್ನೋ ಸೂಪರ್ ಜೈಂಟ್ಸ್ 18 ರನ್‌ಗಳ ಅಂತರದಿಂದ ಭರ್ಜರಿ ಜಯವನ್ನು ಸಾಧಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಆರನೇ ಪಂದ್ಯದಲ್ಲಿ ಸೋತು ಮಕಾಡೆ ಮಲಗಿದೆ.

ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಕಣಕ್ಕಿಳಿದರು. ಕ್ವಿಂಟನ್ ಡಿ ಕಾಕ್ 24 ರನ್ ಗಳಿಸಿ ಔಟ್ ಆದರೆ, ನಾಯಕ ಕೆಎಲ್ ರಾಹುಲ್ ಮಾತ್ರ ಇನ್ನಿಂಗ್ಸ್ ಮುಕ್ತಾಯವಾಗುವವರೆಗೂ ಬ್ಯಾಟ್ ಬೀಸಿ ತಮ್ಮ ನೂರನೇ ಐಪಿಎಲ್ ಪಂದ್ಯದಲ್ಲಿ ಶತಕ ಬಾರಿಸಿ, ಐಪಿಎಲ್ ಇತಿಹಾಸದಲ್ಲಿ ನೂರನೇ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 60 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ ಅಜೇಯ 103 ರನ್ ಗಳಿಸಿದರು. ಇನ್ನುಳಿದಂತೆ ಮನೀಷ್ ಪಾಂಡೆ 38 ರನ್ ಗಳಿಸಿದರೆ, ಮಾರ್ಕಸ್ ಸ್ಟಾಯಿನಿಸ್ 10 ರನ್, ದೀಪಕ್ ಹೂಡಾ 15 ರನ್ ಮತ್ತು ಕೃಣಾಲ್ ಪಾಂಡ್ಯ ಅಜೇಯ ಅಜೇಯ 1 ರನ್ ಕಲೆ ಹಾಕಿದರು.
ಮುಂಬೈ ಇಂಡಿಯನ್ಸ್ ತಂಡದ ಪರ ಜಯದೇವ್ ಉನಾದ್ಕತ್ 2 ವಿಕೆಟ್ ಪಡೆದರೆ, ಮುರುಗನ್ ಅಶ್ವಿನ್ ಮತ್ತು ಫ್ಯಾಬಿಯನ್ ಅಲೆನ್ ತಲಾ ಒಂದೊಂದು ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್
ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ ಕಠಿಣ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 13 ರನ್, ರೋಹಿತ್ ಶರ್ಮಾ 6 ರನ್, ಡಿವಾಲ್ಡ್ ಬ್ರೆವಿಸ್ 31 ರನ್, ಸೂರ್ಯಕುಮಾರ್ ಯಾದವ್ 37 ರನ್, ತಿಲಕ್ ವರ್ಮಾ 26 ರನ್, ಕೀರನ್ ಪೊಲಾರ್ಡ್ 25 ರನ್, ಫ್ಯಾಬಿಯನ್ ಅಲೆನ್ 8 ರನ್, ಜಯದೇವ್ ಉನಾದ್ಕತ್ 14 ರನ್ ಮತ್ತು ಮುರುಗನ್ ಅಶ್ವಿನ್ 6 ರನ್ ಗಳಿಸಿದರೆ, ಜಸ್ ಪ್ರೀತ್ ಬೂಮ್ರಾ ಮತ್ತು ಟೈಮಲ್ ಮಿಲ್ಸ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.


ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ದಾಳಿ
ಮುಂಬೈ ಇಂಡಿಯನ್ಸ್ ತಂಡವನ್ನು ಆರಂಭದಲ್ಲಿಯೇ ಕಟ್ಟಿಹಾಕುವಲ್ಲಿ ಕೊಂಚ ಯಶಸ್ಸು ಕಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲಿಂಗ್ ವಿಭಾಗ ಅಂತಿಮ ಹಂತದಲ್ಲಿ ಮುಂಬೈ ಇಂಡಿಯನ್ಸ್ ದಾಂಡಿಗರು ಅಬ್ಬರಿಸಲು ಯತ್ನಿಸಿದರೂ ಸಹ ಅದಕ್ಕೆ ಅವಕಾಶ ನೀಡಲಿಲ್ಲ. ತಂಡದ ಪರ ಅವೇಶ್ ಖಾನ್ 3 ವಿಕೆಟ್ ಪಡೆದರೆ, ಜೇಸನ್ ಹೋಲ್ಡರ್, ದುಷ್ಮಂತ ಚಮೀರ, ರವಿ ಬಿಷ್ಣೋಯಿ ಮತ್ತು ಮಾರ್ಕಸ್ ಸ್ಟಾಯಿನಿಸ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications