PBKS vs LSG: ಲಕ್ನೋ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್; ಗೆದ್ದ ಲಕ್ನೋ ಪ್ಲೇಆಫ್ ಹಾದಿ ಮತ್ತಷ್ಟು ಸುಲಭ

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 42ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 20 ರನ್‌ಗಳ ಜಯ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ 8 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿ ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ 154 ರನ್ ಗುರಿ ನೀಡಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು.
ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್:
ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 11 ಎಸೆತಗಳಲ್ಲಿ 6 ರನ್ ಕಲೆಹಾಕಿ ಔಟ್ ಆದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ 13 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಇತ್ತ ಕೆಎಲ್ ರಾಹುಲ್ ಜೊತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಮತ್ತೋರ್ವ ಆಟಗಾರ ಕ್ವಿಂಟನ್ ಡಿ ಕಾಕ್ ಹಾಗೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ 85 ರನ್‌ಗಳ ಜತೆಯಾಟವಾಡಿದರು. ಕ್ವಿಂಟನ್ ಡಿ ಕಾಕ್ 46 ರನ್ ಗಳಿಸಿ ಔಟ್ ಆದರೆ, ದೀಪಕ್ ಹೂಡಾ 34 ರನ್ ಗಳಿಸಿ ರನ್ಔಟ್ ಆದರು. ಇನ್ನುಳಿದಂತೆ ಕೃನಾಲ್ ಪಾಂಡ್ಯ 7 ರನ್, ಮಾರ್ಕಸ್ ಸ್ಟಾಯಿನಿಸ್ 1 ರನ್, ಆಯುಷ್ ಬದೋನಿ 4 ರನ್, ಜೇಸನ್ ಹೋಲ್ಡರ್ 11 ರನ್, ದುಷ್ಮಂತ ಚಮೀರ 17 ರನ್ ಕಲೆಹಾಕಿದರೆ, ಮೊಹ್ಸಿನ್ ಖಾನ್ ಅಜೇಯ 13 ರನ್ ಹಾಗೂ ಅವೇಶ್ ಖಾನ್ ಅಜೇಯ 2 ರನ್ ದಾಖಲಿಸಿದರು.
ಪಂಜಾಬ್ ಕಿಂಗ್ಸ್ ಪರ ಕಗಿಸೋ ರಬಾಡ 4 ವಿಕೆಟ್ ಪಡೆದರೆ, ರಾಹುಲ್ ಚಹರ್ 2 ವಿಕೆಟ್ ಮತ್ತು ಸಂದೀಪ್ ಶರ್ಮಾ ಒಂದು ವಿಕೆಟ್ ಪಡೆದರು.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್:
ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ 25 ರನ್ ಮತ್ತು ಶಿಖರ್ ಧವನ್ 5 ರನ್ ಕೆಲಹಾಕಿ ಅಬ್ಬರದ ಆರಂಭ ಮಾಡುವಲ್ಲಿ ವಿಫಲರಾದರು. ಇನ್ನುಳಿದಂತೆ ಭಾನುಕಾ ರಾಜಪಕ್ಸೆ 9 ರನ್ ಗಳಿಸಿದರೆ, ಲಿಯಾಮ್ ಲಿವಿಂಗ್‌ಸ್ಟನ್ 18 ರನ್, ಜಿತೇಶ್ ಶರ್ಮಾ 2 ರನ್, ರಿಷಿ ಧವನ್ 21 ರನ್, ಕಗಿಸೋ ರಬಾಡ 2 ರನ್, ರಾಹುಲ್ ಚಹರ್ 4 ರನ್ ಹಾಗೂ ಅರ್ಷ್‌ದೀಪ್ ಸಿಂಗ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ಇನ್ನು ತಂಡದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಾನಿ ಬೈರ್‌ಸ್ಟೋ 28 ಎಸೆತಗಳಿಗೆ 32 ರನ್ ಕಲೆಹಾಕಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರಾದರೂ ಯಶಸ್ವಿಯಾಗುವಲ್ಲಿ ವಿಫಲರಾದರು.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಮೊಹ್ಸಿನ್ ಖಾನ್ 3 ವಿಕೆಟ್ ಪಡೆದರೆ, ದುಷ್ಮಂತ ಚಮೀರ ಮತ್ತು ಕೃನಾಲ್ ಪಾಂಡ್ಯಾ ತಲಾ 2 ವಿಕೆಟ್ ಪಡೆದರು ಹಾಗೂ ರವಿ ಬಿಷ್ಣೋಯಿ 1 ವಿಕೆಟ್ ಕಬಳಿಸಿದರು. ಪಂಜಾಬ್ ಕಿಂಗ್ಸ್ ತಂಡದ ಜಿತೇಶ್ ಶರ್ಮಾ ಹಾಗೂ ಭಾನುಕ ರಾಜಪಕ್ಷ ಅವರ ಪ್ರಮುಖ ವಿಕೆಟ್ ಪಡೆದ ಕೃನಾಲ್ ಪಾಂಡ್ಯಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಪಂದ್ಯದಲ್ಲಿ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದು, ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಜಯ ಸಾಧಿಸಿ, 3 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿ 12 ಅಂಕಗಳನ್ನು ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications