ಐಪಿಎಲ್‌ನ ಈ ಆಟಗಾರನೇ ಭಾರತದ ಮುಂದಿನ ನಾಯಕ; ಎಲ್ಲಾ ಬಿಟ್ಟು ಫ್ಲಾಪ್ ಆದವರಿಗೆ ಜೈ ಎಂದ ಮಾಜಿ ಕ್ರಿಕೆಟಿಗ!

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಘಟಾನುಘಟಿ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸಾಲು ಸಾಲು ಪಂದ್ಯಗಳಲ್ಲಿ ಸೋಲುವುದರ ಮೂಲಕ ಕೆಟ್ಟ ಆರಂಭವನ್ನು ಪಡೆದುಕೊಂಡಿವೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್ ಮೊದಲ 4 ಪಂದ್ಯಗಳಲ್ಲಿ ಸೋಲನ್ನು ಕಂಡು ನಂತರ ಗೆಲುವಿನ ಖಾತೆ ತೆರೆದರೆ, 5 ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಮಾತ್ರ ಆಡಿರುವ ಒಟ್ಟು 5 ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳಲ್ಲಿಯೂ ಸೋತು ಅತಿ ಕಳಪೆ ಪ್ರದರ್ಶನ ನೀಡಿದೆ.
ಹೀಗೆ ದೊಡ್ಡ ಅನುಭವವನ್ನು ಹೊಂದಿರುವಂತಹ ಬಲಿಷ್ಠ ತಂಡಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಗ್ಗರಿಸಿದ್ದರೆ, ನೂತನವಾಗಿ ಕಾಲಿಟ್ಟಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮಾತ್ರ ಅನುಭವವಿರುವ ತಂಡಗಳೇ ನಾಚುವಂತೆ ಪ್ರದರ್ಶನವನ್ನು ನೀಡುತ್ತಿವೆ. ಗುಜರಾತ್ ಟೈಟನ್ಸ್ ಟೂರ್ನಿಯಲ್ಲಿನ ತನ್ನ ಮೊದಲ 5 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆದ್ದು ಬೀಗಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ 5 ಪಂದ್ಯಗಳನ್ನಾಡಿ ಮೂರರಲ್ಲಿ ಜಯ ಸಾಧಿಸಿದೆ. ಹೀಗೆ ಅಬ್ಬರಿಸುತ್ತಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚುವ ಪ್ರತಿಭೆಗಳಿಗೆ ಭಾರತ ಅಂತರರಾಷ್ಟ್ರೀಯ ತಂಡದ ಕದ ತಟ್ಟುವ ಅವಕಾಶ ಪ್ರತಿ ಆವೃತ್ತಿಯಲ್ಲಿಯೂ ಇರುತ್ತದೆ. ಅದೇ ರೀತಿ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕಳಪೆ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವಂತಹ ಆಟಗಾರರಿಗೆ ಕಮ್ ಬ್ಯಾಕ್ ಮಾಡಿ ಮತ್ತೆ ತಂಡ ಸೇರುವುದಕ್ಕೂ ಸಹ ಈ ಐಪಿಎಲ್ ಟೂರ್ನಿ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಹೀಗೆ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ ಆಟಗಾರರು ಟೀಮ್ ಇಂಡಿಯಾಗೆ ವಾಪಸ್ ಆಗಿರುವ ಹಲವಾರು ಉದಾಹರಣೆಗಳಿದ್ದು, ಈ ಬಾರಿಯೂ ಸಹ ಅದೇ ರೀತಿ ಸ್ಟಾರ್ ಕ್ರಿಕೆಟಿಗನೋರ್ವ ಟೂರ್ನಿಯಲ್ಲಿ ಮಿಂಚುತ್ತಿದ್ದು, ಮರಳಿ ಟೀಮ್ ಇಂಡಿಯಾ ಸೇರುವ ಭರವಸೆ ಹುಟ್ಟುಹಾಕಿದ್ದಾರೆ. ಇದೇ ಆಟಗಾರನ ಕುರಿತಾಗಿ ಇದೀಗ ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಮಾತನಾಡಿದ್ದು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ತಿವಾರಿ
ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಹೊಗಳಿರುವುದು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಸಾಲು ಸಾಲು ಗೆಲುವುಗಳನ್ನು ಕಂಡಿರುವ ಹಾರ್ದಿಕ್ ಪಾಂಡ್ಯ ಕುರಿತು. ಟೂರ್ನಿಯ ಆರಂಭದಲ್ಲಿ ದೊಡ್ಡ ಪ್ರದರ್ಶನ ನೀಡದೆ ಇದ್ದ ಹಾರ್ದಿಕ್ ಪಾಂಡ್ಯ ಇತ್ತೀಚಿನ ಪಂದ್ಯಗಳಲ್ಲಿ ಮಿಂಚುವುದರ ಜತೆಗೆ ನಾಯಕತ್ವದಲ್ಲಿ ಯಶಸ್ಸು ಸಾಧಿಸಿದ್ದು, ಮನೋಜ್ ತಿವಾರಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಂಡ್ಯ ಟೀಮ್ ಇಂಡಿಯಾದ ಮುಂದಿನ ನಾಯಕ
ರಾಜಸ್ತಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಭರ್ಜರಿ ಜಯ ಸಾಧಿಸಿದ ನಂತರ ಟ್ವೀಟ್ ಮಾಡಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ಮನೋಜ್ ತಿವಾರಿ ಹಾರ್ದಿಕ್ ಪಾಂಡ್ಯ ಏಕದಿನ ಹಾಗೂ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾದ ಮುಂದಿನ ನಾಯಕನಾಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

2022ರ ಐಪಿಎಲ್ ಟೂರ್ನಿಯಲ್ಲಿ ಪಾಂಡ್ಯ ಪ್ರದರ್ಶನ
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ 5 ಪಂದ್ಯಗಳನ್ನಾಡಿ 228 ರನ್ ಕಲೆಹಾಕಿದ್ದು, 4 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಗಾಯದ ಸಮಸ್ಯೆಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದಿಂದ ಸ್ಥಾನವನ್ನು ಕಳೆದುಕೊಂಡಿದ್ದರು. ಹಾರ್ದಿಕ್ ಪಾಂಡ್ಯ ಸದ್ಯ ಚೇತರಿಸಿಕೊಂಡು ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಆರಂಭಿಸಿರುವಾಗಲೇ ಮನೋಜ್ ತಿವಾರಿ ಪಾಂಡ್ಯ ಟೀಮ್ ಇಂಡಿಯಾದ ಮುಂದಿನ ನಾಯಕನಾಗಲಿದ್ದಾರೆ ಎಂದು ಹೇಳಿದ್ದು ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆಗಳು ನಡೆಯುತ್ತಿವೆ. ಕೇವಲ ಒಂದೆರಡು ಪಂದ್ಯಗಳಲ್ಲಿ ಮಿಂಚಿದ ಮಾತ್ರಕ್ಕೆ ಅಥವಾ ಒಂದೊಳ್ಳೆ ತಂಡದ ನಾಯಕನಾಗಿ ಪಂದ್ಯಗಳನ್ನು ಗೆಲ್ಲಿಸಿದ ಮಾತ್ರಕ್ಕೆ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ನಾಯಕನಾಗಲು ಸೂಕ್ತ ಎನ್ನುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಟೀಮ್ ಇಂಡಿಯಾದಲ್ಲಿ ಬೌಲಿಂಗ್ ಮಾಡಲಾಗದೇ ಫ್ಲಾಪ್ ಆಗಿ ಹೊರಬಿದ್ದಿರುವ ಪಾಂಡ್ಯ ಐಪಿಎಲ್‌ನಲ್ಲಿ ನಾಯಕನಾಗಿ ಟೂರ್ನಿಯ ಆರಂಭದಲ್ಲಿ ಯಶಸ್ವಿಯಾದ ಮಾತ್ರಕ್ಕೆ ಟೀಮ್ ಇಂಡಿಯಾದ ನಾಯಕನಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಮನೋಜ್ ತಿವಾರಿ ಹೇಳಿಕೆ ಕುರಿತು ಸದ್ಯ ಪ್ರತಿಕ್ರಿಯಿಸುತ್ತಿರುವ ಕೆಲ ಕ್ರಿಕೆಟ್ ಪ್ರೇಮಿಗಳು ಆತುರ ಬೇಡ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫ್ಲಾಪ್ ಆಗಿರುವ ಹಾರ್ದಿಕ್ ಪಾಂಡ್ಯ ಮತ್ತೆ ಅಂತರರಾಷ್ಟ್ರೀಯ ತಂಡದಲ್ಲಿ ಸತತವಾಗಿ ಮಿಂಚಲಿ ಆಮೇಲೆ ನಾಯಕತ್ವದ ಕುರಿತು ಮಾತನಾಡಿದರಾಯಿತು ಎನ್ನುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications