
ಐಪಿಎಲ್ ಅಂಗಳದಲ್ಲಿ ಮಂಗಳವಾರ ಮಹತ್ವದ ಪಂದ್ಯ ನಡೆಯಲಿದ್ದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈ ಈ ಆವೃತ್ತಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದೆ. ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗೆದ್ದು ಬೀಗಿದ್ದು ಇಂದಿನ ಸೆಣೆಸಾಟದಲ್ಲಿಯೂ ಗೆದ್ದು ಮೇಲುಗೈ ಸಾಧಿಸುವ ಉತ್ಸಾಗದಲ್ಲಿದೆ.
ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಹಿಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅತ್ಯಂತ ಹೀನಾಯ ಪ್ರದರ್ಶನ ನಿಡಿ ಸೋಲು ಅನುಭವಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಆರ್‌ಸಿಬಿ 68 ರನ್‌ಗಳಿಗೆ ತನ್ನ ಹೋರಾಟವನ್ನು ಅಂತ್ಯಗೊಳಿಸಿತು. ಈ ಪ್ರದರ್ಶನದಿಂದಾಗಿ ಆರ್‌ಸಿಬಿ ತಂಡ ಸಹಜವಾಗಿ ಆಘಾತ ಅನುಭವಿಸಿದೆ. ಇಂದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಈ ಹೀನಾಯ ಸೋಲಿನ ನೋವಿನಿಂದ ಹೊರಬರಬೇಕಿದೆ.

ಈ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಆರ್‌ಆರ್ ತಂಡಗಳ ಕೆಲ ಆಟಗಾರರು ಮಹತ್ವದ ಮೈಲಿಗಲ್ಲಿ ಬರೆಯಲು ಸಜ್ಜಾಗಿದ್ದಾರೆ. ಹಾಗಾದರೆ ಈ ಪ್ರಮುಖ ಮೈಲಿಗಲ್ಲುಗಳು ಯಾವುದು? ಮುಂದೆ ಓದಿ..
* ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ 4 ಬೌಂಡರಿ ಸಿಡಿಸಿದರೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ 550 ಬೌಂಡರಿ ಸಿಡಿಸಿದಂತಾಗುತ್ತದೆ.
*ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಇಂದಿನ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿದರೆ ಐಪಿಎಲ್‌ನಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ನೆಟ್ಟಂತಾಗುತ್ತದೆ. ಐಪಿಎಲ್‌ನಲ್ಲಿ 150ಕ್ಕೂ ಹೆಚ್ಚಿನ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಗೆ ಸಂಜು ಸ್ಯಾಮ್ಸನ್ ಸೇರ್ಪಡೆಯಾಗಲಿದ್ದಾರೆ.
*ಆರ್‌ಸಿಬಿ ತಂಡದ ಪ್ರಮುಖ ಬ್ಯಾಟರ್ ದಿನೇಶ್ ಕಾರ್ತಿಕ್ ಇಂದಿನ ಪಂದ್ಯದಲ್ಲಿ 3 ಬೌಂಡರಿ ಗಳಿಸಿದರೆ ಐಪಿಎಲ್‌ನಲ್ಲಿ 400 ಬೌಂಡರಿ ಗಳಿಸಿದಂತಾಗುತ್ತದೆ.
*ರಾಜಸ್ಥಾನ್ ರಾಯಲ್ಸ್ ತಂಡದ ಮಧ್ಯಮ ಕ್ರಮಾಂಕದ ಸ್ಪೋಟಕ ಆಟಗಾರ ಶಿಮ್ರಾನ್ ಹೇಟ್ಮೇಯರ್ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದರೆ ತಲಾ 50 ಬೌಂಡರಿ ಹಾಗೂ 50 ಸಿಕ್ಸರ್ ಸಿಡಿಸಿದಂತಾಗುತ್ತದೆ.
*ರಾಜಸ್ಥಾನ್ ರಾಯಲ್ಸ್ ತಂಡದ ಅನುಭವಿ ಆಟಗಾರ ಆರ್ ಅಶ್ವಿನ್ ಇಂದಿನ ಪಂದ್ಯದಲ್ಲಿ ಒಂದು ವಿಕೆಟ್ ಪಡೆದರೆ ಐಪಿಎಲ್‌ನಲ್ಲಿ 150 ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 8ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ ಆರ್ ಅಶ್ವಿನ್. ಇದಕ್ಕೂ ಮುನ್ ಡ್ವೇಯ್ನ್ ಬ್ರಾವೋ, ಲಸಿತ್ ಮಲಿಂಗಾ, ಅಮಿತ್ ಮಿಶ್ರಾ, ಪಿಯೂಷ್ ಚಾವ್ಲಾ, ಯುಜುವೇಂದ್ರ ಚಾಹಲ್, ಹರ್ಭಜನ್ ಸಿಂಗ್ ಹಾಗೂ ಭುವನೇಶ್ವರ್ ಕುಮಾರ್ ಈ ಸಾಧನೆ ಮಾಡಿದ ಇತರೆ ಬೌಲರ್‌ಗಳಾಗಿದ್ದಾರೆ.
*ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲು ಯುಜುವೇಂದ್ರ ಚಾಹಲ್‌ಗೆ ಇನ್ನು ಕೇವಲ ಒಂದು ವಿಕೆಟ್‌ನ ಅಗತ್ಯವಿದೆ. ಪ್ರಸ್ತುತ ಚಾಹಲ್ ಹಾಗೂ ಚಾವ್ಲಾ 157 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. 166 ವಿಕೆಟ್ ಪಡೆದಿರುವ ಅಮಿತ್ ಮಿಶ್ರಾ, 170 ವಿಕೆಟ್ ಪಡೆದಿರುವ ಲಸಿತ್ ಮಲಿಂಗಾ ಮತ್ತು 179 ವಿಕೆಟ್ ಕಬಳಿಸಿರುವ ಡ್ವೇಯ್ನ್ ಬ್ರಾವೋ ಚಾಹಲ್‌ಗಿಂತ ಮುಂದಿರುವ ಬೌಲರ್‌ಗಳಾಗಿದ್ದಾರೆ.
*ಇನ್ನು ಇಂದಿನ ಪಂದ್ಯದಲ್ಲಿ ಎರಡು ವಿಕೆಟ್ ಪಡೆದರೆ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ದಿಗ್ಗಜ ಆಟಗಾರ ಶೇನ್ ವಾರ್ನ್ ಅವರ 57 ವಿಕೆಟ್‌ಗಳ ಮೈಲಿಗಲ್ಲನ್ನು ಹಿಂದಿಕ್ಕಲಿದ್ದಾರೆ.