ಐಪಿಎಲ್ 2022: ಹೆಚ್ಚು ಹಣ ಕೇಳಿರುವ ಈ 5 ಆಟಗಾರರು ಟೂರ್ನಿಯಿಂದ ಹೊರಬೀಳುವುದು ಖಚಿತ!

ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾಗಿ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೌದು, ಈ ಬಾರಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದ್ದು, ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ಏರ್ಪಡಲಿದೆ. ಲಕ್ನೋ ಸೂಪರ್ ಜಯಂಟ್ಸ್ ಮತ್ತು ಅಹ್ಮದಾಬಾದ್ ನೂತನ ತಂಡಗಳಾಗಿ ಸೇರ್ಪಡೆಗೊಂಡಿವೆ.
ಹೀಗೆ ಈ 2 ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗಿರುವುದರಿಂದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸುವುದು ಕಡ್ಡಾಯವಾಗಿದ್ದು, ಇದಕ್ಕೂ ಮುನ್ನ ಕಳೆದ ವರ್ಷ ಬಿಸಿಸಿಐ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯನ್ನು ಏರ್ಪಡಿಸಿತ್ತು. ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳು ಬಿಸಿಸಿಐ ನಿಯಮದ ಪ್ರಕಾರ ತಮಗೆ ಬೇಕಾದ ಆಟಗಾರರನ್ನು (ಗರಿಷ್ಠ 4) ರಿಟೈನ್ ಮಾಡಿಕೊಂಡಿದ್ದು ಉಳಿದ ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ. ಹೀಗೆ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಿಟೈನ್ ಆಗದೇ ಹೊರಬಿದ್ದಿರುವ ಆಟಗಾರರು ಸೇರಿದಂತೆ ಫೆಬ್ರವರಿ 12 ಮತ್ತು 13ರಂದು ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆಗೆ ಒಟ್ಟು 1214 ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಒಟ್ಟು 49 ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂಪಾಯಿಗಳು ಎಂದು ಘೋಷಿಸಿಕೊಂಡಿದ್ದಾರೆ.
ಹೀಗೆ ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂಪಾಯಿಗಳು ಎಂದು ಘೋಷಿಸಿಕೊಂಡಿರುವ ಆಟಗಾರರ ಪೈಕಿ ಬಹುತೇಕ ಆಟಗಾರರು ಹರಾಜಾಗದೇ ಹೊರ ಬೀಳಲಿದ್ದಾರೆ ಎನ್ನುವ ಅಭಿಪ್ರಾಯ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗುತ್ತಿದ್ದು, ಅದರಲ್ಲಿಯೂ ಈ ಕೆಳಕಂಡ 5 ಆಟಗಾರರಿಗೆ ತಮ್ಮ ಮೂಲ ಬೆಲೆಯೇ ಹಿನ್ನಡೆಯನ್ನು ಉಂಟುಮಾಡಲಿದ್ದು ಹರಾಜಿನಲ್ಲಿ ಬಿಕರಿಯಾಗದೇ ಟೂರ್ನಿಯಿಂದ ಹೊರ ಬೀಳಲಿದ್ದಾರೆ ಎನ್ನಲಾಗುತ್ತಿದೆ.

1. ಕ್ರೇಗ್ ಓವರ್‌ಟನ್
ಇಂಗ್ಲೆಂಡ್ ತಂಡದ ಆಲ್ ರೌಂಡರ್ ಕ್ರೇಗ್ ಓವರ್‌ಟನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ತನ್ನ ಮೂಲ ಬೆಲೆಯಾಗಿ 2 ಕೋಟಿಯನ್ನು ನಮೂದಿಸಿದ್ದಾರೆ. ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇದುವರೆಗೂ ಒಟ್ಟು 63 ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಕ್ರೇಗ್ ಓವರ್‌ಟನ್ 58 ವಿಕೆಟ್ ಪಡೆದಿದ್ದಾರೆ. ಹೀಗೆ ಅತ್ಯುನ್ನತ ಯಶಸ್ಸನ್ನು ಸಾಧಿಸದೇ ಇರುವ ಕ್ರೇಗ್ ಓವರ್‌ಟನ್ 2 ಕೋಟಿ ಮೂಲ ಬೆಲೆಯನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಹರಾಜಿನಲ್ಲಿ ಈತನ ಪಾಲಿಗೆ ಮುಳ್ಳಾಗಿ ಪರಿಣಮಿಸುವ ಸಾಧ್ಯತೆಗಳಿವೆ.

2. ದಿನೇಶ್ ಕಾರ್ತಿಕ್
ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ತೊಡಗಿಸಿಕೊಳ್ಳುವ ದಿನೇಶ್ ಕಾರ್ತಿಕ್ ಈ ಹಿಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜಿನಲ್ಲಿ ದೊಡ್ಡ ಮೊತ್ತವನ್ನೇ ಪಡೆದುಕೊಂಡಿದ್ದರು. 2018ರಲ್ಲಿ 7.4 ಕೋಟಿಗೆ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ಪಾಲಾಗಿದ್ದ ದಿನೇಶ್ ಕಾರ್ತಿಕ್ ಕಳೆದ 3 ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಕ್ರಮವಾಗಿ 253, 169 ಮತ್ತು 223 ರನ್ ಗಳಿಸಿದ್ದು ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅಷ್ಟೇ ಅಲ್ಲದೇ 36 ವರ್ಷದ ದಿನೇಶ್ ಕಾರ್ತಿಕ್ ತನ್ನ ಕ್ರಿಕೆಟ್ ಜೀವನದ ಅಂತಿಮ ಘಟ್ಟಕ್ಕೆ ಸಮೀಪಿಸುತ್ತಿದ್ದು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ದಿನೇಶ್ ಕಾರ್ತಿಕ್ ಅವರಿಗೆ 2 ಕೋಟಿ ನೀಡಿ ಖರೀದಿಸುವ ಸಾಹಸಕ್ಕೆ ಯಾವ ತಂಡಗಳೂ ಕೂಡ ಕೈ ಹಾಕುವುದಿಲ್ಲ ಎನ್ನಲಾಗುತ್ತಿದೆ.

3. ಮರ್ಚಂಟ್ ಡಿ ಲಾಂಗ್
ಎತ್ತರದ ವೇಗಿ ಮರ್ಚಂಟ್ ಡಿ ಲಾಂಗ್ ವಿಶ್ವ ಕ್ರಿಕೆಟ್‌ನಲ್ಲಿ 13ಕ್ಕೂ ಹೆಚ್ಚು ತಂಡಗಳ ಪರ ಕಣಕ್ಕಿಳಿದಿದ್ದು, ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿರುವ ಅನುಭವವನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಇದುವರೆಗೂ ಒಟ್ಟು 125 ಟಿ ಟ್ವೆಂಟಿ ಪಂದ್ಯಗಳಲ್ಲಿ ಭಾಗವಹಿಸಿ 142 ವಿಕೆಟ್ ಪಡೆದಿದ್ದಾರೆ. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಅತಿ ವೇಗದ ಎಸೆತಗಳನ್ನು ಹಾಕುವುದರಲ್ಲಿ ಪದೇಪದೇ ವಿಫಲವಾಗುತ್ತಿರುವ ಮರ್ಚಂಟ್ ಡಿ ಲಾಂಗ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿಗೆ ತನ್ನ ಮೂಲ ಬೆಲೆಯನ್ನು 2 ಕೋಟಿ ಎಂದು ಆಯ್ಕೆ ಮಾಡಿಕೊಂಡಿದ್ದು, ಬಿಕರಿಯಾಗದೇ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ.

4. ಇಮ್ರಾನ್ ತಾಹಿರ್
ದಕ್ಷಿಣ ಆಫ್ರಿಕಾ ಮೂಲದ ಸ್ಪಿನ್ ಮಾಂತ್ರಿಕ ಇಮ್ರಾನ್ ತಾಹಿರ್ 42 ವರ್ಷವಾಗಿದ್ದರೂ ಸಹ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಬಯಸಿದ್ದು ಮೆಗಾ ಹರಾಜಿನಲ್ಲಿ 2 ಕೋಟಿ ಮೂಲಬೆಲೆಯೊಂದಿಗೆ ಭಾಗವಹಿಸಲು ಸಿದ್ಧರಾಗಿದ್ದಾರೆ. 344 ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿರುವ ಇಮ್ರಾನ್ ತಾಹಿರ್ 435 ವಿಕೆಟ್ ಪಡೆದುಕೊಂಡಿದ್ದರೂ ಕೂಡ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ನೀಡಿ ತಾಹಿರ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದಾಗದೇ ಇರುವ ಸಾಧ್ಯತೆಗಳು ಹೆಚ್ಚಿವೆ.

5. ಓಡಿಯನ್ ಸ್ಮಿತ್
2018ರಲ್ಲಿ ವೆಸ್ಟ್ ಇಂಡೀಸ್ ಅಂತರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದರ ಮೂಲಕ ಪದಾರ್ಪಣೆ ಮಾಡಿದ್ದ ಓಡಿಯನ್ ಸ್ಮಿತ್ ಪಾಕಿಸ್ತಾನದ ವಿರುದ್ಧದ ಸರಣಿಯಲ್ಲಿ ಮಿಂಚುವುದರ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡಿದ್ದರು. ಹಾಗೂ ಕಳೆದ ವರ್ಷ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿ 18 ವಿಕೆಟ್ ಪಡೆದಿದ್ದ ಓಡಿಯನ್ ಸ್ಮಿತ್ ಇತ್ತೀಚಿಗಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಮಂಕಾಗಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಓಡಿಯನ್ ಸ್ಮಿತ್ ತಮ್ಮ ಮೂಲಬೆಲೆಯಾದ 2 ಕೋಟಿಗೆ ಬಿಡ್ ಪಡೆದುಕೊಳ್ಳುವುದು ಅನುಮಾನ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications