
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಇನ್ನೂ 3 ತಿಂಗಳು ಬಾಕಿ ಇದ್ದು ಟೂರ್ನಿ ತನ್ನದೇ ಆದ ವಿಶೇಷತೆಗಳಿಂದ ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದ ಸದ್ದು ಮಾಡಲು ಆರಂಭಿಸಿದೆ. ಹೌದು, ಕಳೆದ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಿಂದಲೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾದ ಚಟುವಟಿಕೆಗಳು ಆರಂಭವಾಗಿದ್ದು, ಹೊಸದಾಗಿ ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆಯಾಯಿತು. ಹೀಗೆ ಈ ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗಿರುವುದರಿಂದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಟ್ರೋಫಿಗಾಗಿ 8 ತಂಡಗಳ ಬದಲಾಗಿ ಹತ್ತು ತಂಡಗಳ ನಡುವೆ ಪೈಪೋಟಿ ನಡೆಯಲಿದೆ.
ಇನ್ನು ನೂತನ ತಂಡಗಳ ಸೇರ್ಪಡೆಯಾಗಿರುವುದರಿಂದ ಇದೇ ತಿಂಗಳ 12 ಮತ್ತು 13ರಂದು ಬಿಸಿಸಿಐ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಲು ತೀರ್ಮಾನಿಸಿದ್ದು, ಈ ದೊಡ್ಡ ಕಾರ್ಯಕ್ರಮ ಬೆಂಗಳೂರು ನಗರದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ ಪಾಲ್ಗೊಳ್ಳಲು ವಿಶ್ವದ ಹಲವಾರು ದೇಶಗಳ 1214 ಕ್ರಿಕೆಟಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಹೀಗೆ ನೋಂದಾಯಿಸಿಕೊಂಡಿದ್ದ ಆಟಗಾರರ ಪೈಕಿ ಒಟ್ಟು 590 ಆಟಗಾರರನ್ನು ಅಂತಿಮವಾಗಿ ಬಿಸಿಸಿಐ ಆಯ್ಕೆ ಮಾಡಿದೆ.
ಹೀಗೆ ಬಿಸಿಸಿಐ ಬಿಡುಗಡೆಗೊಳಿಸಿರುವ ಪರಿಷ್ಕರಿಸಿದ ಆಟಗಾರರ ಪಟ್ಟಿಯಲ್ಲಿನ 590 ಆಟಗಾರರ ಪೈಕಿ ಕೇರಳ ಮೂಲದ ಶ್ರೀಶಾಂತ್ ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2013ರಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಶ್ರೀಶಾಂತ್ 7 ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು. ಹೀಗೆ 7 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ಶ್ರೀಶಾಂತ್ ಕ್ರಿಕೆಟ್‌ನಿಂದ ದೂರ ಉಳಿದು ಮನರಂಜನಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹಾಗೂ 7 ವರ್ಷಗಳ ನಿಷೇಧ ಮುಗಿದ ನಂತರ ತಮ್ಮ ಹೆಸರನ್ನು ಕಳೆದ ಬಾರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜೊಂದರಲ್ಲಿ ಶ್ರೀಶಾಂತ್ ನೋಂದಾಯಿಸಿಕೊಂಡಿದ್ದರು. ಹೀಗೆ ಕಳೆದ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದ ಶ್ರೀಶಾಂತ್ ಅವರಿಗೆ ಹಿನ್ನಡೆಯುಂಟಾಗಿತ್ತು. ಪರಿಷ್ಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದ ಬಿಸಿಸಿಐ ಶ್ರೀಶಾಂತ್ ಅವರ ಹೆಸರನ್ನು ಕೈಬಿಟ್ಟಿತ್ತು.
ಹೀಗೆ 7 ವರ್ಷಗಳ ಕಾಲದ ನಿಷೇಧ ಹಾಗೂ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ತಿರಸ್ಕಾರಗೊಂಡಿದ್ದ ಶ್ರೀಶಾಂತ್ ಈ ಬಾರಿಯ ಮೆಗಾ ಹರಾಜಿಗೆ ಮತ್ತೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. 50 ಲಕ್ಷ ಮೂಲಬೆಲೆಯೊಂದಿಗೆ ತಮ್ಮ ಹೆಸರನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ನೋಂದಾಯಿಸಿಕೊಂಡಿದ್ದ ಶ್ರೀಶಾಂತ್ ಇದೀಗ ಬಿಸಿಸಿಐ ಬಿಡುಗಡೆಗೊಳಿಸಿರುವ ಪರಿಷ್ಕೃತ ಪಟ್ಟಿಯಲ್ಲಿಯೂ ಕೂಡ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಬಿಸಿಸಿಐ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಶ್ರೀಶಾಂತ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡಿದ್ದು ತನಗೆ ಬೆಂಬಲ ನೀಡಿದ ಅನುಯಾಯಿಗಳು ಹಾಗೂ ಸ್ನೇಹಿತ ವೃಂದಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮೆಗಾ ಹರಾಜಿನ ವೇಳೆ ಕೂಡ ಇದೇ ರೀತಿಯ ಪ್ರೋತ್ಸಾಹವನ್ನು ನೀಡಿ ಎಂದು ಕೇಳಿಕೊಂಡಿದ್ದಾರೆ.
ಇನ್ನು ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗುವುದಕ್ಕೂ ಮುನ್ನ ಶ್ರೀಶಾತ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ರಾಜಸ್ಥಾನ್ ರಾಯಲ್ಸ್, ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ಪರ ಕಣಕ್ಕಿಳಿದಿದ್ದರು. ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಟ್ಟು 44 ಪಂದ್ಯಗಳನ್ನಾಡಿರುವ ಶ್ರೀಶಾಂತ್ 44 ವಿಕೆಟ್‍ಗಳನ್ನು ಪಡೆದಿದ್ದಾರೆ.