ಕೊನೆಗೂ ಐಪಿಎಲ್‌ನ ಬೃಹತ್ ದಾಖಲೆ ಮುರಿಯುವಲ್ಲಿ ವಿಫಲರಾದ ಎಂಎಸ್ ಧೋನಿ; ರೋಹಿತ್ ನಂ.1!

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ. ಇತ್ತಂಡಗಳ ನಡುವಿನ ಈ ಪಂದ್ಯ ಇದೇ ಶನಿವಾರ ( ಮಾರ್ಚ್ 26 ) ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡೂ ತಂಡಗಳನ್ನು ನೂತನ ನಾಯಕರು ಮುನ್ನಡೆಸಲಿದ್ದಾರೆ.
ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಇಯಾನ್ ಮಾರ್ಗನ್ ಮುನ್ನಡೆಸಿದ್ದರೆ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಐಯ್ಯರ್ ಮುನ್ನಡೆಸುತ್ತಿದ್ದಾರೆ ಹಾಗೂ ಕಳೆದ ಬಾರಿ ಎಂಎಸ್ ಧೋನಿ ಮುನ್ನಡೆಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಈ ಬಾರಿ ನೂತನ ನಾಯಕ ರವೀಂದ್ರ ಜಡೇಜಾ ಮುನ್ನೆಡೆಸಲಿದ್ದಾರೆ. ಹೌದು, ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಎಂಎಸ್ ಧೋನಿ ಕೆಳಗಿಳಿದಿದ್ದು ನಾಯಕತ್ವವನ್ನು ತಂಡದ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಎಂಎಸ್ ಧೋನಿ ನಾಯಕತ್ವದ ಪಯಣವನ್ನು ಮುಗಿಸಿ ಈ ಬಾರಿ ಓರ್ವ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ತಮ್ಮದೇ ಆದ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಎಂ ಎಸ್ ಧೋನಿ ಹೀಗೆ ದಿಢೀರನೆ ನಾಯಕತ್ವಕ್ಕೆ ರಾಜೀನಾಮೆ ನೀಡುವುದರ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬೃಹತ್ ದಾಖಲೆಯೊಂದನ್ನು ಮುರಿಯುವಲ್ಲಿ ವಿಫಲರಾಗಿದ್ದಾರೆ. ಹೀಗೆ ಎಂಎಸ್ ಧೋನಿ ಮುರಿಯಲು ವಿಫಲರಾಗಿರುವ ದಾಖಲೆ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

'ಅತಿ ಹೆಚ್ಚು ಟ್ರೋಫಿ' ದಾಖಲೆ ಕೈತಪ್ಪಿಸಿಕೊಂಡ ಧೋನಿ
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇಲ್ಲಿಯವರೆಗೂ ಒಟ್ಟು 4 ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ನಾಯಕನಾಗಿ ಎಂಎಸ್ ಧೋನಿ ಗೆಲ್ಲಿಸಿಕೊಟ್ಟಿದ್ದು, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ನಾಯಕನ ದಾಖಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು 5 ಬಾರಿ ಮುಂಬೈ ಇಂಡಿಯನ್ಸ್ ನಾಯಕನಾಗಿ ಟ್ರೋಫಿ ಗೆದ್ದಿರುವ ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದಿರುವ ನಾಯಕ ಎಂಬ ದಾಖಲೆಯನ್ನು ಹೊಂದಿದ್ದಾರೆ. ಹೀಗೆ ಈ ದಾಖಲೆಯಲ್ಲಿ ರೋಹಿತ್ ಶರ್ಮಾಗಿಂತ ಕೇವಲ ಒಂದು ಹೆಜ್ಜೆ ಹಿಂದೆ ಇದ್ದ ಎಂಎಸ್ ಧೋನಿ ಇದೀಗ ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದು, ರೋಹಿತ್ ಶರ್ಮಾ ದಾಖಲೆಯನ್ನು ಸರಿದೂಗಿಸುವಲ್ಲಿ ವಿಫಲರಾಗಿದ್ದಾರೆ ಹಾಗೂ ರೋಹಿತ್ ಶರ್ಮಾ ನಂಬರ್ ಒನ್ ಆಗಿ ಉಳಿದುಕೊಂಡಿದ್ದಾರೆ. ಪ್ರಮುಖವಾಗಿ ರೋಹಿತ್ ಶರ್ಮಾ ನಿರ್ಮಿಸಿರುವ ಈ ದೊಡ್ಡ ಮಟ್ಟದ ದಾಖಲೆಯನ್ನು ಮುರಿಯುವ ಅವಕಾಶಗಳು ಎಂಎಸ್ ಧೋನಿಗೆ ಹೆಚ್ಚಿದ್ದವು ಹಾಗೂ ಮುಂಬರುವ ನಾಯಕರು ಈ ದಾಖಲೆಯನ್ನು ಸರಿಗಟ್ಟುವುದು ತೀರಾ ಕಷ್ಟಸಾಧ್ಯ.

ಅತಿ ಹೆಚ್ಚು ಗೆಲುವಿನಲ್ಲಿ ಧೋನಿಯೇ ಬಾಸ್
ಅತಿ ಹೆಚ್ಚು ಟ್ರೋಫಿ ಗೆದ್ದಿರುವ ನಾಯಕರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದರೆ, ಅತಿಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿರುವ ದಾಖಲೆಯಲ್ಲಿ ಎಂಎಸ್ ಧೋನಿ ಅಗ್ರ ಸ್ಥಾನದಲ್ಲಿದ್ದಾರೆ. ಹೌದು, ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೂ ಎಂ ಎಸ್ ಧೋನಿ ನಾಯಕನಾಗಿ 121 ಪಂದ್ಯಗಳಲ್ಲಿ ಜಯ ಸಾಧಿಸಿ ಅಗ್ರ ಸ್ಥಾನದಲ್ಲಿದ್ದರೆ, 75 ಪಂದ್ಯಗಳಲ್ಲಿ ನಾಯಕನಾಗಿ ಗೆದ್ದಿರುವ ರೋಹಿತ್ ಶರ್ಮಾ ದ್ವಿತೀಯ ಸ್ಥಾನದಲ್ಲಿದ್ದಾರೆ.

ಗೆಲುವಿನ ಶೇಕಡಾಂಶದಲ್ಲಿ ರೋಹಿತ್ ಶರ್ಮಾ ಮುಂದು!
ಇನ್ನು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ನಾಯಕರ ಪಟ್ಟಿಯಲ್ಲಿ ಎಂ ಎಸ್ ಧೋನಿ ಅಗ್ರಸ್ಥಾನದಲ್ಲಿರಬಹುದು. ಆದರೆ ನಾಯಕರಾಗಿ ತಂಡವನ್ನು ಮುನ್ನಡೆಸಿರುವ ಪಂದ್ಯಗಳ ಪೈಕಿ ಹೆಚ್ಚು ಗೆಲುವಿನ ಶೇಕಡಾಂಶ ಹೊಂದಿರುವ ದಾಖಲೆಯಲ್ಲಿ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಹೌದು, ಒಟ್ಟು 204 ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ 121 ಪಂದ್ಯಗಳಲ್ಲಿ ಜಯವನ್ನು ತಂದಿರುವ ಎಂ ಎಸ್ ಧೋನಿ 59.60ರಷ್ಟು ಗೆಲುವಿನ ಶೇಕಡಾಂಶವನ್ನು ಹೊಂದಿದ್ದರೆ, 129 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 75 ಪಂದ್ಯಗಳಲ್ಲಿ ಜಯ ಸಾಧಿಸಿರುವ ರೋಹಿತ್ ಶರ್ಮಾ 59.68ರಷ್ಟು ಗೆಲುವಿನ ಶೇಕಡಾಂಶವನ್ನು ಹೊಂದಿ ಎಂಎಸ್ ಧೋನಿಗಿಂತ ಮುಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications