
ಮುಂಬರುವ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತು ಕಳೆದ ವರ್ಷಗಳಿಂದಲೇ ಚಟುವಟಿಕೆಗಳು ಆರಂಭವಾಗಿದ್ದು ಕುತೂಹಲಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಇದೇ ತಿಂಗಳ 12 ಹಾಗೂ 13ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಈ ಬಾರಿಯ ಟೂರ್ನಿಯ ಮೇಲಿನ ನಿರೀಕ್ಷೆ ಹಾಗೂ ಕುತೂಹಲವನ್ನು ದುಪ್ಪಟ್ಟು ಮಾಡಿತು. ಹಾಗೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿಗಾಗಿ ಹತ್ತು ತಂಡಗಳು ಸೆಣಸಾಟ ನಡೆಸಲಿರುವುದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಹೀಗೆ ಸಾಕಷ್ಟು ಅಂಶಗಳಿಂದ ದಿನದಿಂದ ದಿನಕ್ಕೆ ಕುತೂಹಲದ ಮಟ್ಟವನ್ನು ಹೆಚ್ಚಿಸುತ್ತಾ ಇರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್ 26ರಿಂದ ಆರಂಭವಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಶೀಘ್ರದಲ್ಲಿಯೇ ವಿವಿಧ ತಂಡಗಳ ಆಟಗಾರರು ಕ್ರಿಕೆಟ್ ಮೈದಾನಗಳನ್ನು ತಲುಪಿ ಅಭ್ಯಾಸವನ್ನು ಆರಂಭಿಸಲಿದ್ದಾರೆ.
ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಮಣ್ಣುಮುಕ್ಕಿಸುವ ಮೂಲಕ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈ ಬಾರಿಯ ಐಪಿಎಲ್ ಟೂರ್ನಿಗಾಗಿ ಸೂರತ್ ಕಂಟ್ರ್ಯಾಕ್ಟರ್ ಕ್ರೀಡಾಂಗಣದಲ್ಲಿ ಶೀಘ್ರದಲ್ಲಿಯೇ ಅಭ್ಯಾಸವನ್ನು ಆರಂಭಿಸಲಿದೆ. ಹೀಗೆ ಚೆನ್ನೈ ನಗರದ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುವ ಬದಲು ಸೂರತ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಮುಂದಾಗುವುದರ ಮೂಲಕ ಸದ್ದು ಮಾಡಿರುವ ಎಂಎಸ್ ಧೋನಿ ಇದೀಗ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಬಿಡುಗಡೆ ಮಾಡಿರುವ ಈ ಬಾರಿಯ ಐಪಿಎಲ್ ಟೂರ್ನಿಯ ಟೀಸರ್‌ನ ಪ್ರೋಮೋವೊಂದರಲ್ಲಿ ಉದ್ದುದ್ದಾ ಮೀಸೆ ಬಿಟ್ಟುಕೊಂಡು ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. 5 ಸೆಕೆಂಡಿನ ಈ ಪ್ರೋಮೋವನ್ನು ಸ್ಟಾರ್ ಸ್ಪೋರ್ಟ್ ನೆಟ್‌ವರ್ಕ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಭಿನ್ನವಾಗಿ ಕಾಣಿಸಿಕೊಂಡಿರುವ ಎಂಎಸ್ ಧೋನಿ ಲುಕ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ: ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ಅಂಬಟಿ ರಾಯುಡು, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಶ್, ಭಗದೀಸನ್, ಭಗದೀಶ್ ವರ್ದನ್, ರಾಬಿನ್ ಉತ್ತಪ್ಪ, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಮರ್ಜಿತ್ ಸಿಂಗ್, ಡೆವೊನ್ ಕಾನ್ವೇ.