RR vs MI: ಸೂರ್ಯಕುಮಾರ್ ಯಾದವ್ ಅರ್ಧಶತಕ; ಕೊನೆಗೂ ಗೆದ್ದ ಮುಂಬೈ ಇಂಡಿಯನ್ಸ್

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತವಾಗಿ 8 ಪಂದ್ಯಗಳಲ್ಲಿ ಸೋಲುಂಡಿದ್ದ ಮುಂಬೈ ಇಂಡಿಯನ್ಸ್ ಇದೀಗ ತನ್ನ ಒಂಬತ್ತನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಜಯ ಕಂಡು ಕೊನೆಗೂ ಗೆಲುವಿನ ಖಾತೆ ತೆರೆದಿದೆ.
ಮುಂಬೈನ ಡಾ ಡಿ ವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 159 ರನ್‌ಗಳ ಗುರಿಯನ್ನು ನೀಡಿತು.
ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿ 5 ವಿಕೆಟ್‍ಗಳ ಜಯ ಸಾಧಿಸಿ ಗೆಲುವಿನ ನಗೆ ಬೀರಿತು.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್:
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಹೇಳಿಕೊಳ್ಳುವಂತಹ ಉತ್ತಮ ಆರಂಭವನ್ನೇನೂ ಪಡೆದುಕೊಳ್ಳಲಿಲ್ಲ. ಜೋಸ್ ಬಟ್ಲರ್ ಜತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 15 ರನ್ ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಸಂಜು ಸ್ಯಾಮ್ಸನ್ 16 ರನ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡೇರಿಲ್ ಮಿಚೆಲ್ 17 ರನ್ ಗಳಿಸಿ ಔಟ್ ಆದರು. ಹೀಗೆ ತಂಡದ ಆಟಗಾರರು ಒಂದೆಡೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುತ್ತಿದ್ದರೆ ಮತ್ತೊಂದೆಡೆ ಜವಾಬ್ದಾರಿಯುತ ಆಟವನ್ನಾಡಿದ ಜೋಸ್ ಬಟ್ಲರ್ ಅರ್ಧಶತಕ ಬಾರಿಸಿದರು. 52 ಎಸೆತಗಳನ್ನು ಎದುರಿಸಿದ ಬಟ್ಲರ್ 62 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಇನ್ನುಳಿದಂತೆ ರಿಯಾನ್ ಪರಾಗ್ 3 ರನ್ ಕಲೆಹಾಕಿದರೆ, ರವಿಚಂದ್ರನ್ ಅಶ್ವಿನ್ 9 ಎಸೆತಗಳಲ್ಲಿ 21 ರನ್ ಚಚ್ಚಿ ಅಬ್ಬರಿಸಿದರು, ಟ್ರೆಂಟ್ ಬೌಲ್ಟ್ 1 ಎಸೆತಕ್ಕೆ 1 ರನ್ ಕಲೆಹಾಕಿ ಅಜೇಯರಾಗಿ ಉಳಿದರು ಹಾಗೂ ಶಿಮ್ರಾನ್ ಹೆಟ್ಮಾಯೆರ್ 14 ಎಸೆತಗಳನ್ನು ಎದುರಿಸಿ ಕೇವಲ 6 ರನ್ ಕಲೆಹಾಕಿ ದೊಡ್ಡ ಹೊಡೆತಗಳನ್ನು ಬಾರಿಸಲು ವಿಫಲರಾದರು.
ಮುಂಬೈ ಇಂಡಿಯನ್ಸ್ ಪರ ಹೃತಿಕ್ ಶೋಕಿನ್ ಮತ್ತು ರಿಲೇ ಮೆರೆಡಿತ್ ತಲಾ 2 ವಿಕೆಟ್ ಪಡೆದರೆ, ಡೇನಿಯಲ್ ಸ್ಯಾಮ್ಸ್ ಮತ್ತು ಕುಮಾರ್ ಕಾರ್ತಿಕೇಯ ತಲಾ ಒಂದೊಂದು ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್:
ಮುಂಬೈ ಇಂಡಿಯನ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 2 ರನ್ ಗಳಿಸಿ ಔಟ್ ಆಗಿ ಮತ್ತೊಮ್ಮೆ ವಿಫಲರಾದರೆ, ಮತ್ತೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್ 26 ರನ್ ಗಳಿಸಿದರು. ಇನ್ನುಳಿದಂತೆ ತಿಲಕ್ ವರ್ಮಾ 35 ರನ್, ಕೀರನ್ ಪೊಲಾರ್ಡ್ 10 ರನ್ ಕಲೆಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು 39 ಎಸೆತಗಳಲ್ಲಿ 51 ರನ್ ಗಳಿಸಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಟಿಮ್ ಡೇವಿಡ್ 9 ಎಸೆತಗಳಲ್ಲಿ ಅಜೇಯ 20 ರನ್ ಕಲೆಹಾಕಿದರೆ, ಇನ್ನು ತಂಡಕ್ಕೆ ಗೆಲ್ಲಲು 5 ಎಸೆತಗಳಲ್ಲಿ 4 ರನ್ ಬೇಕಿದ್ದಾಗ ಕಣಕ್ಕಿಳಿದ ಡೇನಿಯಲ್ ಸ್ಯಾಮ್ಸ್ ಎದುರಿಸಿದ ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿದರು, ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ರಾಜಸ್ಥಾನ್ ರಾಯಲ್ಸ್ ಪರ ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಲ್ ಮತ್ತು ಕುಲ್‌ದೀಪ್ ಸೇನ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications