
ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 56ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿವೆ.
ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಕೋಲ್ಕತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿದ್ದು,ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 166 ರನ್‌ಗಳ ನೀಡಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಮತ್ತು ಅಜಿಂಕ್ಯ ರಹಾನೆ ಉತ್ತಮ ಆರಂಭವನ್ನೇ ಕಟ್ಟಿಕೊಟ್ಟರು. ವೆಂಕಟೇಶ್ ಅಯ್ಯರ್ 24 ಎಸೆತಗಳಲ್ಲಿ 43 ರನ್ ಚಚ್ಚಿದರೆ, ಅಜಿಂಕ್ಯ ರಹಾನೆ 24 ಎಸೆತಗಳಲ್ಲಿ 25 ರನ್ ಕಲೆ ಹಾಕಿದರು ಹಾಗೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ರಾಣಾ 26 ಎಸೆತಗಳಲ್ಲಿ 43 ರನ್ ಗಳಿಸಿ ಮಿಂಚಿದರು.
ಇನ್ನುಳಿದಂತೆ ತಂಡದ ನಾಯಕ ಶ್ರೇಯಸ್ ಅಯ್ಯರ್ 6 ರನ್, ಆ್ಯಂಡ್ರೆ ರಸೆಲ್ 9 ರನ್, ಶೆಲ್ಡನ್ ಜಾಕ್ಸನ್ 5 ರನ್, ಪ್ಯಾಟ್ ಕಮಿನ್ಸ್, ಟಿಮ್ ಸೌದಿ ಮತ್ತು ಸುನಿಲ್ ನರೈನ್ ಮೂವರೂ ಸಹ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರೆ, ವರುಣ್ ಚಕ್ರವರ್ತಿ ಯಾವುದೇ ರನ್ ಕಲೆ ಹಾಕದೆ ಅಜೇಯರಾಗಿ ಉಳಿದರು ಮತ್ತು ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಂಕು ಸಿಂಗ್ 19 ಎಸೆತಗಳಲ್ಲಿ ಅಜೇಯ 23 ರನ್ ಬಾರಿಸಿದರು. ಹೀಗೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ.
ಇನ್ನು ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಜಸ್ ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದು, ಯಶಸ್ಸಿನ ಹಾದಿಗೆ ಮರಳಿದ್ದಾರೆ. 4 ಓವರ್ ಬೌಲಿಂಗ್ ಮಾಡಿದ ಜಸ್ ಪ್ರೀತ್ ಬುಮ್ರಾ 1 ಮೇಡನ್ ಸಹಿತ ಕೇವಲ 10 ರನ್ ನೀಡಿ 5 ವಿಕೆಟ್ ಪಡೆದರು. ಇನ್ನುಳಿದಂತೆ ಕುಮಾರ್ ಕಾರ್ತಿಕೇಯ 2 ವಿಕೆಟ್ ಪಡೆದರೆ, ಮುರುಗನ್ ಅಶ್ವಿನ್ ಮತ್ತು ಡೇನಿಯಲ್ ಸಾಮ್ಸ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ಇಂದಿನ ಪಂದ್ಯದಲ್ಲಿ ಸೋತರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವನ್ನು ಅಧಿಕೃತವಾಗಿ ಕಳೆದುಕೊಳ್ಳಲಿದ್ದು, ಯಾವ ರೀತಿಯ ಬೌಲಿಂಗ್ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಟಿಮ್ ಸೌಥಿ ಮತ್ತು ವರುಣ್ ಚಕ್ರವರ್ತಿ
ಮುಂಬೈ ಇಂಡಿಯನ್ಸ್ ಆಡುವ ಬಳಗ:
ಇಶಾನ್ ಕಿಶನ್ ( ವಿಕೆಟ್ ಕೀಪರ್), ರೋಹಿತ್ ಶರ್ಮಾ(ನಾಯಕ), ತಿಲಕ್ ವರ್ಮಾ, ಟಿಮ್ ಡೇವಿಡ್, ಕೀರಾನ್ ಪೊಲಾರ್ಡ್, ರಮಣದೀಪ್ ಸಿಂಗ್, ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಕುಮಾರ್ ಕಾರ್ತಿಕೇಯ, ಜಸ್ಪ್ರೀತ್ ಬುಮ್ರಾ ಮತ್ತು ರಿಲೆ ಮೆರೆಡಿತ್