
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿಯ 44ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ಡಾ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ.
ಆಡುವ ಬಳಗಗಳು:
ರಾಜಸ್ಥಾನ್ ರಾಯಲ್ಸ್ ಆಡುವ ಬಳಗ: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ ( ವಿಕೆಟ್ ಕೀಪರ್/ ನಾಯಕ), ಡೇರಿಲ್ ಮಿಚೆಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಕುಲದೀಪ್ ಸೇನ್
ಮುಂಬೈ ಇಂಡಿಯನ್ಸ್ ಆಡುವ ಬಳಗ: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಹೃತಿಕ್ ಶೋಕೀನ್, ಡೇನಿಯಲ್ ಸಾಮ್ಸ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ರಿಲೆ ಮೆರೆಡಿತ್
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ ಎಲ್ಲಾ ಪಂದ್ಯಗಳಲ್ಲಿಯೂ ಸೋಲುಂಡಿರುವ ಮುಂಬೈ ಇಂಡಿಯನ್ಸ್ ಇಂದಿನ ಪಂದ್ಯದಲ್ಲಿ ಜಯ ಸಾಧಿಸಿ ರೋಹಿತ್ ಶರ್ಮಾ ಹುಟ್ಟುಹಬ್ಬದ ಪ್ರಯುಕ್ತ ಗೆಲುವಿನ ಖಾತೆ ತೆರೆದು ತಮ್ಮ ನಾಯಕನಿಗೆ ಉಡುಗೊರೆ ನೀಡುತ್ತಾ ಅಥವಾ ಈ ಪಂದ್ಯದಲ್ಲಿಯೂ ಸೋತು ಮತ್ತೊಂದು ಕೆಟ್ಟ ದಾಖಲೆ ನಿರ್ಮಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇತ್ತ ಮುಂಬೈ ಇಂಡಿಯನ್ಸ್ ಗೆಲುವಿನ ಖಾತೆ ತೆರೆಯುವತ್ತ ಚಿತ್ತ ನೆಟ್ಟಿದ್ದರೆ, ಪ್ಲೇ ಆಫ್ ರೇಸ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ಈ ಪಂದ್ಯದಲ್ಲಿ ಗೆದ್ದು ಪ್ಲೇ ಆಫ್ ಪ್ರವೇಶದ ಹಾದಿಯನ್ನು ಮತ್ತಷ್ಟು ಸುಲಭ ಮಾಡಿಕೊಳ್ಳುವತ್ತ ಕಣ್ಣಿಟ್ಟಿದೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 8 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ ಎಲ್ಲಾ ಪಂದ್ಯಗಳಲ್ಲಿಯೂ ಸೋತು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದರೆ, 8 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋತಿರುವ ರಾಜಸ್ಥಾನ್ ರಾಯಲ್ಸ್ 12 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಇದೇ ಆವೃತ್ತಿಯಲ್ಲಿ ಈ ಹಿಂದೆ ಏಪ್ರಿಲ್ 2ರಂದು ನಡೆದಿದ್ದ ಪಂದ್ಯದಲ್ಲಿ ಇತ್ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು ಹಾಗೂ ಆ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 23 ರನ್‌ಗಳ ಜಯ ಸಾಧಿಸಿತ್ತು. ಇನ್ನು ವಿಶೇಷವೆಂದರೆ ಇತ್ತಂಡಗಳ ನಡುವಿನ ಆ ಪಂದ್ಯ ಕೂಡ ಡಾ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲೇ ನಡೆದಿತ್ತು.