
ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಇನ್ನು ಕೇವಲ 10 ದಿನಗಳು ಮಾತ್ರವೇ ಟೂರ್ನಿಯ ಆರಂಭಕ್ಕೆ ಬಾಕಿಯಿದೆ. ಎಲ್ಲಾ ತಂಡಗಳ ಆಟಗಾರರು ಕೂಡ ಇದೀಗ ತಮ್ಮ ತಮ್ಮ ಫ್ರಾಂಚೈಸಿಗಳನ್ನು ಸೇರಿಕೊಳ್ಳುತ್ತಿದ್ದು ಕೆಲ ಆಟಗಾರರು ಕ್ವಾರಂಟೈನ್ ಅವಧಿಯನ್ನು ಪೂರೈಸುತ್ತಿದ್ದಾರೆ. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಪ್ರಮುಖ ಆಟಗಾರನನ್ನು ಈ ಬಾರಿಯ ಟೂರ್ನಿಯಲ್ಲಿ ಕಳೆದುಕೊಳ್ಳುವ ಸಾಧ್ಯತೆಯಿದೆ.
ದೀಪಕ್ ಚಾಹರ್ ಗಾಯದ ಕಾರಣದಿಂದಾಗಿ ಬೆಂಗಳೂರಿನ ಎನ್‌ಸಿಎನಲ್ಲಿ ರಿಹ್ಯಾಬಿಲಿಟೇಶನ್‌ನಲ್ಲಿ ಭಾಗಿಯಾಗಿದ್ದಾರೆ. ಎನ್‌ಸಿಎ ಮುಂದಿನ 24 ಗಂಟೆಯಲ್ಲಿ ಅಂದರೆ ಶುಕ್ರವಾರದಂದು ದೀಪಕ್ ಚಾಹರ್ ಅವರ ಫಿಟ್‌ನೆಸ್ ಬಗ್ಗೆ ವರದಿಯನ್ನು ನೀಡಲಿದೆ. ಈ ವರದಿ ದೀಪಕ್ ಚಾಹರ್ ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸುವ ಭವಿಷ್ಯವನ್ನು ನಿರ್ಧರಿಸಲಿದೆ. ಈ ವಿಚಾರವಾಗಿ ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಪ್ರತಿಕ್ರಿಯಿಸಿದ್ದು ಬಿಸಿಸಿಐ ಅಥವಾ ಎನ್‌ಸಿಎ ಕಡೆಯಿಂದ ದೀಪಕ್ ಚಾಹರ್ ಗಾಯದ ವಿಚಾರವಾಗಿ ನಮಗೆ ಯಾವುದೇ ಮಾಹಿತಿಗಳು ಬಂದಿಲ್ಲ ಎಂದಿದ್ದಾರೆ.
"ದೀಪಕ್ ಚಾಹರ್ ಅವರ ಗಾಯದ ವಿಚಾರವಾಗಿ ನಾವು ಈವರೆಗೂ ಬಿಸಿಸಿಐ ಅಥವಾ ಎನ್‌ಸಿಎ ಕಡೆಯಿಂದ ಯಾವುದೇ ಮಾಹಿತಿಯನ್ನು ಸ್ವೀಕರಿಸಿಲ್ಲ. ಈ ಹಂತದಲ್ಲಿ ನಾವು ಯಾವುದೇ ಆಟಗಾರನನ್ನು ಬದಲಿಯಾಗಿ ನೇಮಕ ಮಾಡಿಕೊಂಡಿಲ್ಲ. ಒಂದು ಹಂತದಲ್ಲಿ ಅವರು ಟೂರ್ನಿಗೆ ಲಭ್ಯವಾಗಲಿದ್ದಾರೆ ಎಂದು ನಾವು ವಿಶ್ವಾಸದಲ್ಲಿದ್ದೇವೆ" ಎಂದಿದ್ದಾರೆ ಕಾಸಿ ವಿಶ್ವನಾಥನ್.
ಈ ಹಿಂದಿನ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದ ದೀಪಕ್ ಚಾಹರ್ ಅವರನ್ನು ಈ ಬಾರಿಯ ಹರಾಜಿಗೆ ಮುನ್ನ ಸಿಎಸ್‌ಕೆ ರೀಟೈನ್ ಮಾಡಿಕೊಳ್ಳದೆ ಬಿಡುಗಡೆಗೊಳಿಸಿತ್ತು. ಆದರೆ ಹರಾಜಿನಲ್ಲಿ ದೀಪಕ್ ಚಾಹರ್ ಅವರನ್ನು ಕೊಂಡುಕೊಳ್ಳಲೇಬೇಕೆಂದು ಜಿದ್ದಿಗೆ ಬಿದ್ದ ಸಿಎಸ್‌ಕೆ ಬರೊಬ್ಬರಿ 14 ಕೋಟಿ ನೀಡಿ ತಂಡಕ್ಕೆ ಸೇರ್ಪಡೆಗೊಳಿಸಿದೆ. ಆದರೆ ಈ ಹರಾಜು ಪ್ರಕ್ರಿಯೆ ನಡೆದ ಒಂದೇ ವಾರದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಸಂದರ್ಭದಲ್ಲಿ ಗಾಯಕ್ಕೆ ಒಳಗಾದರು. ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಯಿಂದಲೂ ಚಾಹರ್ ಹೊರಗುಳಿದಿದ್ದರು.
ಋತುರಾಜ್ ಗಾಯಕ್ವಾಡ್‌ಗೆ ಕೂಡ ಗಾಯ: ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಂಡಿದ್ದ ಪ್ರತಿಭಾನ್ವಿತ ಆಟಗಾರ ಋತುರಾಜ್ ಗಾಯಕ್ವಾಡ್ ಕೂಡ ಗಾಯಗೊಂಡಿದ್ದಾರೆ. ಶ್ರೀಲಂಕಾ ವಿರುದ್ಧಧ ಟಿ20 ಸರಣಿಯ ಸಂದರ್ಭದಲ್ಲಿ ಗಾಯಕ್ವಾಡ್ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಎಂಎಸ್ ಧೋನಿ ನೇತೃತ್ವದ ತಂಡಕ್ಕೆ ಟೂರ್ನಿಯ ಆರಂಭಕ್ಕೂ ಮುನ್ನವೇ ಆಘಾತ ಉಂಟಾಗಿದೆ. ಋತುರಾಜ್ ಗಾಯಕ್ವಾಡ್ ಕೂಡ ಆರಂಭಿಕ ಪಂದ್ಯದಿಮದ ಹೊರಗುಳಿಯುವ ಸಾಧ್ಯತೆಯಿದ್ದು ಪ್ರಸ್ತುತ ಬೆಂಗಳೂರಿನ ಎನ್‌ಸಿಎನಲ್ಲಿ ರಿಹ್ಯಾಬಿಲಿಟೇಶನ್‌ನಲ್ಲಿ ಭಾಗಿಯಾಗಿದ್ದಾರೆ.
ಸಿಎಸ್‌ಕೆ ಸ್ಕ್ವಾಡ್ ಹೀಗಿದೆ: ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ, ಋತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಮರ್ಜಿತ್ ಸಿಂಗ್, ಡೆವೊನ್ ಕಾನ್ವೇ, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡಾನ್, ಕೆ ಭಗತ್ ವರ್ಮಾ.