
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಟ ನಡೆಸಿದವು. ಟೂರ್ನಿಯಲ್ಲಿ ಈ ಎರಡೂ ತಂಡಗಳೂ ಸಹ ಸಾಲು ಸಾಲು ಸೋಲನ್ನು ಕಂಡು ನೆಲಕಚ್ಚಿದ್ದ ಕಾರಣ ಈ ಪಂದ್ಯ ಎರಡೂ ತಂಡಗಳಿಗೂ ಅತಿಮುಖ್ಯವಾಗಿತ್ತು. ಅದರಲ್ಲಿಯೂ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯದೇ ಇದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬತ್ತಾಗಿತ್ತು ಎನ್ನಬಹುದು. ಹೀಗೆ ಈ ಪಂದ್ಯದಲ್ಲಿ ಗೆದ್ದು ಗೆಲುವಿನ ಖಾತೆ ತೆರೆಯಲೇಬೇಕು ಎಂಬ ಯೋಜನೆಯೊಂದಿಗೆ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡದ ಯೋಜನೆಗೆ ಎಂಎಸ್ ಧೋನಿ ತಣ್ಣೀರನ್ನು ಎರಚಿದರು.
ಹೌದು, ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 156 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಪರ ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು, ಡ್ವೇಯ್ನ್ ಪ್ರೆಟೋರಿಯಸ್ ಮತ್ತು ಎಂಎಸ್ ಧೋನಿ ಜವಾಬ್ದಾರಿಯುತ ಪ್ರದರ್ಶನ ನೀಡಿ ತಂಡ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಅದರಲ್ಲಿಯೂ ಎಂಎಸ್ ಧೋನಿ ಅಂತಿಮವಾಗಿ ಪಂದ್ಯವನ್ನು ಫಿನಿಷ್ ಮಾಡಿ ಅಬ್ಬರಿಸಿದರು.
13 ಎಸೆತಗಳಲ್ಲಿ 28 ರನ್ ಬಾರಿಸಿದ ಎಂಎಸ್ ಧೋನಿ 3 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲ್ಲಲು 4 ಎಸೆತಗಳಲ್ಲಿ 16 ರನ್ ಬಾರಿಸಬೇಕಾದ ಅಗತ್ಯವಿತ್ತು. ಈ ಸಂದರ್ಭದಲ್ಲಿ ಜಯದೇವ್ ಉನಾದ್ಕತ್ ಎಸೆದ ಅಂತಿಮ 4 ಎಸೆತಗಳಿಗೆ ಎಂಎಸ್ ಧೋನಿ ಕ್ರಮವಾಗಿ 6, 4, 2, 4 ಬಾರಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ತಂದುಕೊಟ್ಟರು. ಕೊನೆಯ ಎಸೆತದಲ್ಲಿ ಗೆಲ್ಲಲು 4 ರನ್ ಬೇಕಿದ್ದಾಗ ಎಂಎಸ್ ಧೋನಿ ಬೌಂಡರಿ ಚಚ್ಚಿ ಮತ್ತೊಮ್ಮೆ ತಾನು ಬೆಸ್ಟ್ ಫಿನಿಷರ್ ಎಂಬುದನ್ನು ಸಾಬೀತುಪಡಿಸಿದರು.
ಹೀಗೆ ಅಂತಿಮ ಓವರ್‌ನಲ್ಲಿ ಅಬ್ಬರಿಸಿದ ಎಂಎಸ್ ಧೋನಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪ್ರೇಮಿಗಳು ಈ ಕೆಳಕಂಡಂತೆ ಎಂಎಸ್ ಧೋನಿ ಪ್ರದರ್ಶನದ ಕುರಿತು ಟ್ವಿಟರ್ ಮೂಲಕ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಬಹುನಿರೀಕ್ಷಿತ ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಎಂಎಸ್ ಧೋನಿ ಅತ್ಯಮೂಲ್ಯ ಇನ್ನಿಂಗ್ಸ್ ಆಡಿದ್ದು, ಯಾವಾಗಲೂ ಧೋನಿಯವರ ಇಂಥ ಇನ್ನಿಂಗ್ಸ್ ನೋಡಲು ಇಚ್ಛಿಸುತ್ತೇನೆ ಎಂದು ಸುರೇಶ್ ರೈನಾ ಬರೆದುಕೊಂಡಿದ್ದಾರೆ. ಹಾಗೂ ಇದೇ ಟ್ವೀಟ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಜಯ ಸಾಧಿಸಿದ್ದಕ್ಕೆ ಶುಭಾಶಯವನ್ನೂ ಸಹ ರೈನಾ ತಿಳಿಸಿದ್ದಾರೆ.
ಎಂಎಸ್ ಧೋನಿ ಉತ್ತಮ ಪ್ರದರ್ಶನಕ್ಕೆ ಮನ ಸೋತಿರುವ ಆರ್ ಪಿ ಸಿಂಗ್ ನಿವೃತ್ತಿಯನ್ನು ವಾಪಸ್ ಪಡೆದು ಟಿ ಟ್ವೆಂಟಿ ವಿಶ್ವಕಪ್ ಆಡುವಂತೆ ಎಂಎಸ್ ಧೋನಿಯವರ ಬಳಿ ಮನವಿ ಮಾಡೋಣವೇ ಎಂದು ಬರೆದುಕೊಂಡಿದ್ದಾರೆ.
ಎಂಎಸ್ ಧೋನಿ ಪ್ರದರ್ಶನದ ಕುರಿತು ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದು, ಲಾಸ್ಟ್ ಓವರ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಎಸ್ ಧೋನಿಯಿಂದ ಎಂಥ ಗೆಲುವು, ಯಾವುದೇ ದೋಷವಿಲ್ಲದ ಆಟ ಎಂದು ಕೊಂಡಾಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ದಿಗ್ಗಜ ಕೆವಿನ್ ಪೀಟರ್ಸನ್ ಕೂಡ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ ಎಂಎಸ್ ಧೋನಿ ಕುರಿತು ಟ್ವೀಟ್ ಮಾಡಿದ್ದು, 'ಹೀಸ್ ನೇಮ್ ಈಸ್ ಎಂಎಸ್' ಎಂದು ಬರೆದುಕೊಂಡಿದ್ದಾರೆ.
ಧೋನಿ ಪ್ರದರ್ಶನದ ಕುರಿತು ವಿಭಿನ್ನವಾಗಿ ಟ್ವೀಟ್ ಮಾಡಿರುವ ವಿರೇಂದ್ರ ಸೆಹ್ವಾಗ್ 'ಎಂಎಸ್ ಧೋನಿ ಓಂ ಫಿನಿಷಾಯಾ ನಮಃ.. ಎಂಥಹ ಗೆಲುವು' ಎಂದು ಬರೆದುಕೊಂಡಿದ್ದಾರೆ.