ಹೈದರಾಬಾದ್ ವಿರುದ್ಧ ಸಿಎಸ್‌ಕೆ ಗೆದ್ದ ನಂತರ ಅಂಕಪಟ್ಟಿ ಹೇಗಿದೆ? ಪರ್ಪಲ್, ಆರೆಂಜ್ ಕ್ಯಾಪ್ ಯಾರ ಮುಡಿಗೆ?

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೇ 1ರ ಭಾನುವಾರದಂದು ನಡೆದ 2 ಪಂದ್ಯಗಳು ಕ್ರೀಡಾಭಿಮಾನಿಗಳಿಗೆ ರೋಚಕ ಮನರಂಜನೆಯನ್ನು ನೀಡಿವೆ.
ನಿನ್ನೆ ( ಮೇ 1 ) ನಡೆದ ಮೊದಲನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಿದರೆ, ದ್ವಿತೀಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾದವು. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿದರೆ, ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿತು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 6 ರನ್‌ಗಳ ಜಯ ಸಾಧಿಸಿತು.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆದ ದ್ವಿತೀಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿದರೆ, ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 13 ರನ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿ ತನ್ನ ಮೂರನೇ ಗೆಲುವನ್ನು ಕಂಡಿದೆ. ಹೀಗೆ ನಿನ್ನೆ ನಡೆದ 2 ಪಂದ್ಯಗಳ ಪೈಕಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಜಯಭೇರಿ ಬಾರಿಸಿದರೆ, ಎಂಎಸ್ ಧೋನಿ ನಾಯಕತ್ವವನ್ನು ವಹಿಸಿಕೊಂಡ ನಂತರ ಚೆನ್ನೈ ಸೂಪರ್ ಕಿಂಗ್ಸ್ ಕಣಕ್ಕಿಳಿದಿರುವ ಮೊದಲನೇ ಪಂದ್ಯದಲ್ಲಿಯೇ ಗೆದ್ದು ಬೀಗಿದೆ. ಈ 2 ಗೆಲುವುಗಳ ನಂತರ ಅಂಕಪಟ್ಟಿ, ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿ ಹೇಗಿದೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ..

ಅಂಕ ಪಟ್ಟಿ ಹೀಗಿದೆ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿಕೆ ಕಂಡಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 10 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್ ಜೈಂಟ್ಸ್ 7 ಪಂದ್ಯಗಳಲ್ಲಿ ಗೆದ್ದು, 3 ಪಂದ್ಯಗಳಲ್ಲಿ ಸೋತಿದ್ದು, 14 ಅಂಕಗಳನ್ನು ಪಡೆದುಕೊಂಡಿದೆ. ಇನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಇನ್ನುಳಿದಂತೆ ಗುಜರಾತ್ ಟೈಟನ್ಸ್ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 12 ಅಂಕಗಳನ್ನು ಪಡೆದುಕೊಂಡಿರುವ ರಾಜಸ್ಥಾನ್ ರಾಯಲ್ಸ್ ತೃತೀಯ ಸ್ಥಾನ, ತಲಾ 10 ಅಂಕಗಳನ್ನು ಪಡೆದುಕೊಂಡಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕ್ರಮವಾಗಿ 4 ಮತ್ತು ಐದನೇ ಸ್ಥಾನದಲ್ಲಿವೆ.

ಆರೆಂಜ್ ಕ್ಯಾಪ್
ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 51 ಎಸೆತಗಳಲ್ಲಿ 77 ರನ್ ಚಚ್ಚಿದ ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 10 ಪಂದ್ಯಗಳನ್ನಾಡಿರುವ ಕೆಎಲ್ ರಾಹುಲ್ 451 ರನ್ ಗಳಿಸಿದ್ದಾರೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ 9 ಪಂದ್ಯಗಳನ್ನಾಡಿ 566 ರನ್ ಕಲೆ ಹಾಕಿದ್ದು, ಅಗ್ರಸ್ಥಾನದಲ್ಲಿದ್ದಾರೆ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ 9 ಪಂದ್ಯಗಳನ್ನಾಡಿ 324 ರನ್ ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್ ಪಡೆದ ಟಿ ನಟರಾಜನ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ತೃತೀಯ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಟೂರ್ನಿಯಲ್ಲಿ ಒಟ್ಟು 9 ಪಂದ್ಯಗಳನ್ನಾಡಿರುವ ನಟರಾಜನ್ 17 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ಯುಜುವೇಂದ್ರ ಚಾಹಲ್ 9 ಪಂದ್ಯಗಳನ್ನಾಡಿ 19 ವಿಕೆಟ್ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 9 ಪಂದ್ಯಗಳನ್ನಾಡಿ 17 ವಿಕೆಟ್ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕುಲದೀಪ್ ಯಾದವ್ ದ್ವಿತೀಯ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications