ಪಂಜಾಬ್ ವಿರುದ್ಧ ಡೆಲ್ಲಿ ಹತ್ತೇ ಓವರ್‌ಗೆ ಗೆದ್ದ ನಂತರ ಅಂಕಪಟ್ಟಿ ಹೇಗಿದೆ? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಮುಡಿಗೆ?

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 32ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಏಪ್ರಿಲ್ 20ರ ಬುಧವಾರದಂದು ನಡೆಯಿತು. ಈ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ತಂಡ ನೀಡಿದ್ದ ಗುರಿಯನ್ನು ಇನ್ನೂ 57 ಎಸೆತಗಳು ಬಾಕಿ ಇರುವಾಗಲೇ ಮುಟ್ಟಿ ವೇಗದ ಜಯವನ್ನು ದಾಖಲಿಸಿತು.
ಹೌದು, ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲ್ ಔಟ್ ಆಯಿತು. ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಜಿತೇಶ್ ಶರ್ಮಾ ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರ ಕೂಡ 20 ರನ್ ಮುಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ಶಿಖರ್ ಧವನ್, ಜಾನಿ ಬೈರ್ ಸ್ಟೋ ಮತ್ತು ಲಿಯಾಮ್ ಲಿವಿಂಗ್ ಸ್ಟನ್ ರೀತಿಯ ಸ್ಫೋಟಕ ಆಟಗಾರರು ಎರಡಂಕಿ ಮುಟ್ಟಲಾಗದೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡದ್ದು ಪಂಜಾಬ್ ಕಿಂಗ್ಸ್ ತಂಡ ಸಾಧಾರಣ ಮೊತ್ತ ಕಲೆ ಹಾಕುವಂತೆ ಮಾಡಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್ ಮತ್ತು ಲಲಿತ್ ಯಾದವ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇನ್ನು ಪಂಜಾಬ್ ಕಿಂಗ್ಸ್ ನೀಡಿದ 116 ರನ್‌ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 10.3 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 119 ರನ್ ಚಚ್ಚಿ ಬರೋಬ್ಬರಿ 9 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಜೋಡಿ 83 ರನ್‌ಗಳ ಅಬ್ಬರದ ಜತೆಯಾಟವಾಡಿತು. ಪವರ್ ಪ್ಲೇ ಓವರ್‌ಗಳಲ್ಲಿ ಅಬ್ಬರಿಸಿದ ಈ ಜೋಡಿ ಮೊದಲ 6 ಓವರ್‌ಗಳಲ್ಲಿ 81 ರನ್ ಚಚ್ಚಿತು. ಪೃಥ್ವಿ ಶಾ 20 ಎಸೆತಗಳಲ್ಲಿ 41 ರನ್ ಗಳಿಸಿ ಔಟ್ ಆದರೆ, ಡೇವಿಡ್ ವಾರ್ನರ್ 30 ಎಸೆತಗಳಲ್ಲಿ ಅಜೇಯ 60 ರನ್ ಕಲೆ ಹಾಕಿದರು ಮತ್ತು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಜ್ ಖಾನ್ 13 ಎಸೆತಗಳಲ್ಲಿ 12 ರನ್ ಕಲೆಹಾಕಿ ಅಜೇಯರಾಗಿ ಉಳಿದರು. ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ವೇಗವಾಗಿ ಜಯ ಸಾಧಿಸಿದ ನಂತರ ಅಂಕಪಟ್ಟಿಯಲ್ಲಿ ಯಾವ ತಂಡಗಳು ಟಾಪ್ ಸ್ಥಾನದಲ್ಲಿವೆ ಹಾಗೂ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಯಾವ ಆಟಗಾರರ ಬಳಿಯಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ಓದಿ.

ಅಂಕಪಟ್ಟಿಯಲ್ಲಿ ಟಾಪ್ 4 ಯಾವ ತಂಡಗಳು?
ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿಕೆ ಕಂಡಿದ್ದರೆ, ಗುಜರಾತ್ ಟೈಟನ್ಸ್ ಅಗ್ರಸ್ಥಾನ, ರಾಯಲ್ ಚಾಲೆಂಜರ್ಸ್ ಬೆಂಗಳೂರು ದ್ವಿತೀಯ ಸ್ಥಾನ, ರಾಜಸ್ಥಾನ್ ರಾಯಲ್ಸ್ ಮೂರನೇ ಸ್ಥಾನ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಾಲ್ಕನೇ ಸ್ಥಾನದಲ್ಲಿದೆ. ಹಾಗೂ ಈ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಆರೆಂಜ್ ಕ್ಯಾಪ್ ಯಾರ ಬಳಿಯಿದೆ?
ಈ ಪಂದ್ಯದಲ್ಲಿ 20 ಎಸೆತಗಳಿಗೆ 41 ರನ್ ಚಚ್ಚಿದ ಪೃಥ್ವಿ ಶಾ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿರುವ ಪೃಥ್ವಿ ಶಾ 217 ರನ್ ಕಲೆಹಾಕಿದ್ದಾರೆ. ಇನ್ನುಳಿದಂತೆ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ 6 ಪಂದ್ಯಗಳಲ್ಲಿ 375 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರೆ, 7 ಪಂದ್ಯಗಳನ್ನಾಡಿ 265 ರನ್ ಬಾರಿಸಿರುವ ಕೆಎಲ್ ರಾಹುಲ್ ದ್ವಿತೀಯ ಸ್ಥಾನದಲ್ಲಿದ್ದಾರೆ ಮತ್ತು 7 ಪಂದ್ಯಗಳಲ್ಲಿ 250 ರನ್ ಕಲೆಹಾಕಿರುವ ಫಾಫ್ ಡು ಪ್ಲೆಸಿಸ್ ತೃತೀಯ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?
ಈ ಪಂದ್ಯದಲ್ಲಿ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕುಲ್ದೀಪ್ ಯಾದವ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 6 ಪಂದ್ಯಗಳನ್ನಾಡಿರುವ ಕುಲ್ ದೀಪ್ ಯಾದವ್ 13 ವಿಕೆಟ್ ಪಡೆದಿದ್ದಾರೆ. ಇನ್ನುಳಿದಂತೆ ರಾಜಸ್ಥಾನ್ ರಾಯಲ್ಸ್ ತಂಡದ ಪರ ಅಬ್ಬರಿಸುತ್ತಿರುವ ಯಜುವೇಂದ್ರ ಚಹಲ್ 6 ಪಂದ್ಯಗಳನ್ನಾಡಿ 17 ವಿಕೆಟ್ ಪಡೆಯುವುದರ ಮೂಲಕ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಹಾಗೂ 6 ಪಂದ್ಯಗಳನ್ನಾಡಿ 11 ವಿಕೆಟ್ ಪಡೆದಿರುವ ಟಿ ನಟರಾಜನ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications