ಸನ್‌ರೈಸರ್ಸ್ ಹ್ಯಾಟ್ರಿಕ್ ಗೆಲುವಿನಿಂದ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ; ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

ಜಗತ್ತಿನ ಅತಿ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎಂದು ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿ ನಡೆಯುತ್ತಿದ್ದು, ಟೂರ್ನಿಯ 25ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಿದವು.
ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ ಸನ್ ರೈಸರ್ಸ್ ಹೈದರಾಬಾದ್ ಈ ಗೆಲುವಿನ ಮೂಲಕ ಹ್ಯಾಟ್ರಿಕ್ ಜಯದ ಸಾಧನೆಯನ್ನು ಮಾಡಿದೆ. ಇನ್ನು ಟೂರ್ನಿಯ ಆರಂಭದ ತನ್ನ 2 ಪಂದ್ಯಗಳಲ್ಲಿ ಸೋಲುಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ಕಳೆದ ಬಾರಿಯ ಐಪಿಎಲ್ ಆವೃತ್ತಿಯಂತೆ ಈ ಬಾರಿಯೂ ಕೂಡ ಬಹುತೇಕ ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರ ಬೀಳಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ಹ್ಯಾಟ್ರಿಕ್ ಗೆಲುವು ಸಾಧಿಸುವುದರ ಮೂಲಕ ಪುಟಿದೆದ್ದಿರುವ ಸನ್ ರೈಸರ್ಸ್ ಹೈದರಾಬಾದ್ ಟೂರ್ನಿಯಲ್ಲಿನ ಇತರೆ ತಂಡಗಳಿಗೆ ಪೈಪೋಟಿ ನೀಡಲು ಸಜ್ಜಾಗಿ ನಿಂತಿದೆ.
ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 176 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ಪರ ರಾಹುಲ್ ತ್ರಿಪಾಠಿ ಮತ್ತು ಏಡನ್ ಮಾರ್ಕ್ರಮ್ ಅಬ್ಬರಿಸಿದ ಪರಿಣಾಮ 17.5 ಓವರ್‌ಗಳಲ್ಲಿಯೇ 3 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿ ಗೆಲುವಿನ ಕೇಕೆ ಹಾಕಿದೆ. ಹೀಗೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಜಯ ಸಾಧಿಸಿದ ನಂತರ ಅಂಕಪಟ್ಟಿಯಲ್ಲಿ ಆದ ಬದಲಾವಣೆಗಳೇನು ಹಾಗೂ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿ ಹೇಗಿದೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

ಅಂಕಪಟ್ಟಿಯಲ್ಲಿ ಆದ ಬದಲಾವಣೆಗಳು
ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಅತ್ತ ಏಳನೇ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಎಂಟನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಈ ಪಂದ್ಯದಲ್ಲಿ ಸೋತ ಕೋಲ್ಕತ್ತಾ ನೈಟ್ ರೈಡರ್ಸ್ ದ್ವಿತೀಯ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ. ಹಾಗೂ ಅಂಕಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ ಅಗ್ರಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ ದ್ವಿತೀಯ ಸ್ಥಾನ ಮತ್ತು ಪಂಜಾಬ್ ಕಿಂಗ್ಸ್ ತೃತೀಯ ಸ್ಥಾನದಲ್ಲಿದೆ.

ಆರೆಂಜ್ ಕ್ಯಾಪ್ ಪಟ್ಟಿ ಹೀಗಿದೆ
ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 5 ಪಂದ್ಯಗಳನ್ನಾಡಿ 272 ರನ್ ಕಲೆ ಹಾಕಿರುವ ಜೋಸ್ ಬಟ್ಲರ್ ಅಗ್ರಸ್ಥಾನದಲ್ಲಿದ್ದರೆ, 5 ಪಂದ್ಯಗಳನ್ನಾಡಿ 228 ರನ್ ಕಲೆ ಹಾಕಿರುವ ಹಾರ್ದಿಕ್ ಪಾಂಡ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ ಮತ್ತು 5 ಪಂದ್ಯಗಳನ್ನಾಡಿ 207 ರನ್ ಕಲೆಹಾಕಿರುವ ಶಿವಂ ದುಬೆ ತೃತೀಯ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ 5 ಪಂದ್ಯಗಳನ್ನಾಡಿ 200 ರನ್ ಗಳಿಸಿರುವ ಶುಬ್ ಮನ್ ಗಿಲ್ ನಾಲ್ಕನೇ ಸ್ಥಾನ ಮತ್ತು 5 ಪಂದ್ಯಗಳನ್ನಾಡಿ 197 ರನ್ ಕಲೆ ಹಾಕಿರುವ ಶಿಮ್ರಾನ್ ಹೆಟ್ಮಾಯೆರ್ ಐದನೇ ಸ್ಥಾನದಲ್ಲಿದ್ದಾರೆ.

ಪರ್ಪಲ್ ಕ್ಯಾಪ್ ಪಟ್ಟಿ ಹೀಗಿದೆ
ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ 3 ವಿಕೆಟ್ ಪಡೆದ ಟಿ ನಟರಾಜನ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಜಿಗಿತವನ್ನು ಕಂಡಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 5 ಪಂದ್ಯಗಳನ್ನಾಡಿ 12 ವಿಕೆಟ್ ಪಡೆದಿರುವ ಚಹಲ್ ಅಗ್ರಸ್ಥಾನದಲ್ಲಿದ್ದರೆ, 5 ಪಂದ್ಯಗಳನ್ನಾಡಿ 11 ವಿಕೆಟ್ ಪಡೆದಿರುವ ಟಿ ನಟರಾಜನ್ ದ್ವಿತೀಯ ಸ್ಥಾನದಲ್ಲಿದ್ದಾರೆ ಮತ್ತು 4 ಪಂದ್ಯಗಳನ್ನಾಡಿ 10 ವಿಕೆಟ್ ಪಡೆದಿರುವ ಕುಲ್ ದೀಪ್ ಯಾದವ್ ತೃತೀಯ ಸ್ಥಾನದಲ್ಲಿದ್ದಾರೆ. ಇನ್ನು ಈ ಪಂದ್ಯ ಆರಂಭಕ್ಕೂ ಮುನ್ನ ಎರಡನೇ ಸ್ಥಾನದಲ್ಲಿದ್ದ ಉಮೇಶ್ ಯಾದವ್ ಈ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆದುಕೊಳ್ಳಲಾಗದೇ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. 6 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಉಮೇಶ್ ಯಾದವ್ 10 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications