ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ನಂತರ ಅಂಕಪಟ್ಟಿಯಲ್ಲಿ ಯಾರು ಟಾಪ್? ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ತನ್ನ ನಾಲ್ಕನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ್ದು, ಹ್ಯಾಟ್ರಿಕ್ ಗೆಲುವನ್ನು ಕಂಡಿದೆ.
ಹೌದು, ಈ ಬಾರಿಯ ಐಪಿಎಲ್ ಟೂರ್ನಿಯ 18ನೇ ಪಂದ್ಯ ಪುಣೆಯ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಸೆಣಸಾಡಿದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಪೈಕಿ ಟಾಸ್ ಗೆದ್ದ ಫಾಫ್ ಡು ಪ್ಲೆಸಿಸ್ ಎದುರಾಳಿ ಮುಂಬೈ ಇಂಡಿಯನ್ಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ 50 ರನ್‌ಗಳ ಜೊತೆಯಾಟವನ್ನು ಆಡಿದರು. ಇನ್ನು ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ತಲಾ 26 ರನ್ ಕಲೆಹಾಕಿ ಔಟ್ ಆದರೆ, ನಂತರ ಕಣಕ್ಕಿಳಿದ ಡಿವಾಲ್ಡ್ ಬ್ರೆವಿಸ್ 8 ರನ್, ತಿಲಕ್ ವರ್ಮಾ 0, ಕೀರನ್ ಪೊಲಾರ್ಡ್ 0 ಮತ್ತು ರಮಣ್ ದೀಪ್ ಸಿಂಗ್ 6 ರನ್ ಕಲೆ ಹಾಕಿದರು. ಹೀಗೆ 79 ರನ್‌ಗಳಿಗೆ ತನ್ನ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಆಸರೆಯಾದರು. ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ ಅಜೇಯ 68 ರನ್ ಬಾರಿಸಿ ಮಿಂಚಿದರೆ, ಸೂರ್ಯಕುಮಾರ್ ಯಾದವ್ ಅವರಿಗೆ ಸಾಥ್ ಕೊಟ್ಟ ಜಯದೇವ್ ಉನಾದ್ಕತ್ ಅಜೇಯ 13 ರನ್ ಕಲೆ ಹಾಕಿದರು. ಹೀಗೆ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 151 ರನ್‌ಗಳನ್ನು ಮುಂಬೈ ಇಂಡಿಯನ್ಸ್ ಕಲೆ ಹಾಕಿತು.
ಅತ್ತ ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 152 ರನ್ ಕಲೆಹಾಕಿ 7 ವಿಕೆಟ್‍ಗಳ ಜಯ ಸಾಧಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಾಫ್ ಡು ಪ್ಲೆಸಿಸ್ 16, ಅನುಜ್ ರಾವತ್ 66 ರನ್, ವಿರಾಟ್ ಕೊಹ್ಲಿ 48, ದಿನೇಶ್ ಕಾರ್ತಿಕ್ ಅಜೇಯ 7 ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅಜೇಯ 8 ರನ್ ಕಲೆ ಹಾಕಿದರು. ಹೀಗೆ ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತು ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲನ್ನು ಕಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಈ ಪಂದ್ಯ ಮುಕ್ತಾಯವಾದ ನಂತರ ಅಂಕಪಟ್ಟಿಯಲ್ಲಾದ ಬದಲಾವಣೆಗಳೇನು ಹಾಗೂ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿ ಹೇಗಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಅಂಕಪಟ್ಟಿಯಲ್ಲಿ ಏರಿಕೆ ಕಂಡ ಬೆಂಗಳೂರು
ಮುಂಬೈ ಇಂಡಿಯನ್ಸ್ ವಿರುದ್ಧದ ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಅಗ್ರಸ್ಥಾನದಲ್ಲಿಯೇ ಉಳಿದುಕೊಂಡಿದ್ದು ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿರುವ ಗುಜರಾತ್ ಟೈಟನ್ಸ್ ದ್ವಿತೀಯ ಸ್ಥಾನದಲ್ಲಿದೆ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಇನ್ನು ಸತತ 4 ಪಂದ್ಯಗಳಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ಒಂಬತ್ತನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಅಂತಿಮ ಸ್ಥಾನದಲ್ಲಿದೆ.

ಆರೆಂಜ್ ಕ್ಯಾಪ್ ಪಟ್ಟಿ ಹೀಗಿದೆ
ಇತ್ತಂಡಗಳ ನಡುವಿನ ಈ ಪಂದ್ಯ ಮುಕ್ತಾಯವಾದ ನಂತರ ಪಂದ್ಯದಲ್ಲಿ 26 ರನ್ ಕಲೆಹಾಕಿದ ಇಶಾನ್ ಕಿಶನ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. 4 ಪಂದ್ಯಗಳನ್ನಾಡಿರುವ ಇಶಾನ್ ಕಿಶನ್ 175 ರನ್ ಕಲೆಹಾಕಿದ್ದಾರೆ. ಇನ್ನು 3 ಪಂದ್ಯಗಳನ್ನಾಡಿ 205 ರನ್ ಕಲೆಹಾಕಿರುವ ಜೋಸ್ ಬಟ್ಲರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 3 ಪಂದ್ಯಗಳನ್ನಾಡಿ 180 ರನ್ ಕಲೆಹಾಕಿರುವ ಶುಬ್ ಮನ್ ಗಿಲ್ ತೃತೀಯ ಸ್ಥಾನದಲ್ಲಿದ್ದಾರೆ.


ಪರ್ಪಲ್ ಕ್ಯಾಪ್ ಪಟ್ಟಿ ಹೀಗಿದೆ
ಈ ಪಂದ್ಯದಲ್ಲಿ 2 ವಿಕೆಟ್ ಪಡೆದ ವನಿಂದು ಹಸರಂಗ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಜಿಗಿದಿದ್ದಾರೆ. 4 ಪಂದ್ಯಗಳನ್ನಾಡಿರುವ ವನಿಂದು ಹಸರಂಗ 8 ವಿಕೆಟ್ ಪಡೆದಿದ್ದಾರೆ. ಇನ್ನು 4 ಪಂದ್ಯಗಳನ್ನಾಡಿ 9 ವಿಕೆಟ್ ಪಡೆದಿರುವ ಉಮೇಶ್ ಯಾದವ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 3 ಪಂದ್ಯಗಳನ್ನಾಡಿ 7 ವಿಕೆಟ್ ಪಡೆದಿರುವ ಯುಜುವೇಂದ್ರ ಚಹಲ್ ತೃತೀಯ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications