IPL 2022 ಕ್ವಾಲಿಫೈಯರ್ 2: ಹೀನಾಯವಾಗಿ ಸೋತ ಆರ್‌ಸಿಬಿ; ಫೈನಲ್‌ಗೆ ಎಂಟ್ರಿ ಕೊಟ್ಟ ರಾಜಸ್ಥಾನ ರಾಯಲ್ಸ್

ಹದಿನೈದನೇ ಐಪಿಎಲ್ 2022ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಣಿಸಿ ಮತ್ತೊಮ್ಮೆ ಫೈನಲ್‌ಗೆ ಪ್ರವೇಶ ಪಡೆದಿದೆ. ಭಾನುವಾರ (ಮೇ 29) ರಂದು ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಲಿದೆ.
ಇಂದು (ಶುಕ್ರವಾರ ಮೇ 27) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತ್ತು. 158 ರನ್‌ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ವಿಕೆಟ್ ಕಳೆದುಕೊಂಡು ನಿಗದಿತ ಗುರಿ ತಲುಪಿತು. ಈ ಮೂಲಕ ಆರ್‌ಸಿಬಿಯ ಚೊಚ್ಚಲ ಟ್ರೋಫಿ ಕನಸು ನುಚ್ಚುನೂರಾಯಿತು.

ಜೋಸ್ ಬಟ್ಲರ್ (106 ) ಮತ್ತೊಂದು ಅಮೋಘ ಶತಕ
157 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ (106 ) ಅವರ ಮತ್ತೊಂದು ಅಮೋಘ ಶತಕ ರಾಜಸ್ಥಾನ ತಂಡವು ಗೆಲ್ಲಲು ಸಹಕಾರಿಯಾಯಿತು. ಆರಂಭದಲ್ಲಿ ಬಟ್ಲರ್‌ಗೆ ಯಶಸ್ವಿ ಜೈಸ್ವಾಲ್ (21) ಉತ್ತಮ ಸಾಥ್ ನೀಡಿದರು. ಜೈಸ್ವಾಲ್ ಔಟಾದ ನಂತರ ಬಂದ ಸಂಜು ಸ್ಯಾಮ್ಸನ್ (23) ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಆರ್‌ಸಿಬಿ ಬೌಲಿಂಗ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬೌಲಿಂಗ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರೆ, ಸ್ಪಿನ್ನರ್ ವನಿಂದು ಹಸರಂಗಾ 4 ಓವರ್‌ಗಳಲ್ಲಿ 26 ರನ್ ನೀಡಿ 1 ವಿಕೆಟ್ ಪಡೆದರು. ಉಳಿದಂತೆ ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ದುಬಾರಿಯಾದರು ಮತ್ತು ವಿಕೆಟ್ ಪಡೆಯಲು ವಿಫಲರಾದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ, ರಜತ್ ಪಾಟಿದಾರ್ (58) ಅರ್ಧ ಶತಕದ ಸಹಾಯ ಹಾಗೂ ಮಾಕ್ಸ್‌ವೆಲ್ ಅವರ ಬ್ಯಾಟಿಂಗ್ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ, ರಾಜಸ್ಥಾನ ರಾಯಲ್ಸ್ ತಂಡಕ್ಕೆ 158 ರನ್‌ಗಳ ಸಾಧಾರಣ ಮೊತ್ತದ ಟಾರ್ಗೆಟ್ ನೀಡಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ (7) ಮತ್ತು ಫಾಫ್ ಡು ಪ್ಲೆಸಿಸ್ (25) ನಿರ್ಣಾಯಕ ಪಂದ್ಯದಲ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕೊಟ್ಟು ಹೋದರು.
ಉತ್ತಮವಾಗಿ ಆಡುತ್ತಿರುವಾಗಲೇ ಫಾಫ್ ಡು ಪ್ಲೆಸಿಸ್ ಅವರು ಮಕಾಯ್ ಬೌಲಿಂಗ್‌ನಲ್ಲಿ ವಿಕೆಟ್ ನೀಡಿ ಪೆವಿಲಿಯನ್ ಕಡೆ ಮುಖ ಮಾಡಿದರು. ನಂತರ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಎರಡು ಸಿಕ್ಸರ್ ಬಾರಿಸಿ, ಅಬ್ಬರಿಸುವ ಮುನ್ಸೂಚನೆ ನೀಡಿದರೂ, ಸಿಕ್ಸರ್ ಬಾರಿಸಲು ಹೋಗಿ ಕ್ಯಾಚ್ ನೀಡಿದರು.

ರಾಜಸ್ಥಾನ ರಾಯಲ್ಸ್ ತಂಡದ ಉತ್ತಮ ಬೌಲಿಂಗ್
ಇನ್ನು ಬೌಲಿಂಗ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಪ್ರಸಿದ್ಧ ಕೃಷ್ಣ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರೆ, ಮಕಾಯ್ 4 ಓವರ್‌ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಟ್ರೆಂಟ್ ಬೌಲ್ಟ್ ಮತ್ತು ಆರ್ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications