ಮೆಗಾ ಹರಾಜು: ಬೆಂಗಳೂರಿಗೆ ಬಂದಿಳಿದ ಪ್ರೊಫೆಸರ್; ವರ್ಷಗಳ ಬಳಿಕ ಕೊಹ್ಲಿ ಇಲ್ಲದ ಹರಾಜಿನಲ್ಲಿ ಆರ್‌ಸಿಬಿ

ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾಗಿ ಕಳೆದ ವರ್ಷದಿಂದಲೇ ಚಟುವಟಿಕೆಗಳು ಆರಂಭವಾಗಿದ್ದು, ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆಯಾಗಿರುವುದರಿಂದ ಕುತೂಹಲ ಮತ್ತು ನಿರೀಕ್ಷೆ ಮಟ್ಟ ಹೆಚ್ಚಿದೆ. ಈ ಬಾರಿ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು, ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದೆ. ಇನ್ನು ಟೂರ್ನಿಯ ಆರಂಭಕ್ಕೂ ಮುನ್ನ ಇದೇ ಫೆಬ್ರವರಿ 12 ಮತ್ತು 13ರಂದು ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಹರಾಜಿನಲ್ಲಿ ಪಾಲ್ಗೊಳ್ಳಲು ವಿಶ್ವದ ಹಲವಾರು ದೇಶಗಳ 1214 ಕ್ರಿಕೆಟಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಹೀಗೆ ನೋಂದಾಯಿಸಿಕೊಂಡಿದ್ದ ಆಟಗಾರರ ಪೈಕಿ ಒಟ್ಟು 590 ಆಟಗಾರರನ್ನು ಅಂತಿಮವಾಗಿ ಬಿಸಿಸಿಐ ಆಯ್ಕೆ ಮಾಡಿದೆ.
ಇನ್ನು ಬೆಂಗಳೂರಿನಲ್ಲಿ 2 ದಿನಗಳ ಕಾಲ ನಡೆಯಲಿರುವ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಯೊಂದರ 10 ಸದಸ್ಯರು ಭಾಗವಹಿಸಲು ಅನುಮತಿಯನ್ನು ನೀಡಲಾಗಿದ್ದು, ಹರಾಜಿನ ಟೇಬಲ್‌ನಲ್ಲಿ 8 ಸದಸ್ಯರಿಗೆ ಹಾಜರಾಗುವ ಅವಕಾಶವನ್ನು ಮಾತ್ರ ನೀಡಲಾಗಿದೆ. ಇನ್ನು ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿರುವ ಭಾರತದ ಯಾವುದೇ ಸದಸ್ಯರೂ ಕೂಡ ಕ್ವಾರಂಟೈನ್ ನಿಯಮವನ್ನು ಅನುಸರಿಸಬೇಕಾಗಿಲ್ಲ ಎಂದು ಬಿಸಿಸಿಐ ನಿರ್ಧಾರವನ್ನು ಕೈಗೊಂಡಿದೆ. ಆದರೆ, ಹರಾಜು ಪ್ರಕ್ರಿಯೆ ಆರಂಭವಾಗುವುದಕ್ಕೂ ಹಿಂದಿನ 72 ಗಂಟೆಗಳಲ್ಲಿ ಕೊವಿಡ್ ಪರೀಕ್ಷೆ ನಡೆಸಿದ ನೆಗೆಟಿವ್ ವರದಿಯನ್ನು ಎಲ್ಲಾ ಸದಸ್ಯರೂ ಸಲ್ಲಿಸಬೇಕು ಹಾಗೂ ಇತ್ತೀಚಿನ ದಿನಗಳಲ್ಲಿ ಆ ಸದಸ್ಯರು ಯಾವುದೇ ವಿದೇಶ ಪ್ರಯಾಣವನ್ನು ಕೈಗೊಂಡಿರಬಾರದು ಎನ್ನಲಾಗಿದೆ. ಆದರೆ ವಿದೇಶದಿಂದ ಆಗಮಿಸಲಿರುವ ಸದಸ್ಯರು ಕಡ್ಡಾಯವಾಗಿ 7 ದಿನಗಳ ಕ್ವಾರಂಟೈನ್ ನಿಯಮವನ್ನು ಅನುಸರಿಸಬೇಕು ಎಂದು ಬಿಸಿಸಿಐ ಇದೇ ವೇಳೆ ತಿಳಿಸಿದೆ.
ಅದರಂತೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕ ಮೈಕ್ ಹೆಸನ್ ಬೆಂಗಳೂರು ತಲುಪಿದ್ದು, ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ನಿಯಮಕ್ಕೆ ಒಳಗಾಗಲಿದ್ದಾರೆ. ಫೆಬ್ರವರಿ 2ರ ಬುಧವಾರದಂದು ಮೈಕ್ ಹೆಸನ್ ಬೆಂಗಳೂರು ತಲುಪಿರುವ ಚಿತ್ರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರೊಫೆಸರ್ ಮೈಕ್ ಹೆಸನ್ ಇದೀಗ ತಾನೇ ಬೆಂಗಳೂರಿಗೆ ಆಗಮಿಸಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಅಂತಿಮ ರೂಪವನ್ನು ಕೊಡುವ ಸಮಯ ಬಂದಿದೆ ಎಂದು ಬರೆದುಕೊಂಡಿದೆ.
ಇನ್ನು ಕಳೆದ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಧ್ಯಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ರಾಜಿನಾಮೆಯನ್ನು ಘೋಷಿಸಿದ್ದ ವಿರಾಟ್ ಕೊಹ್ಲಿ ಈ ಬಾರಿ ತಂಡದಲ್ಲಿ ರಿಟೈನ್ ಆಗಿ ಕೇವಲ ಆಟಗಾರನಾಗಿ ಮಾತ್ರ ಉಳಿದುಕೊಂಡಿದ್ದಾರೆ. ಈ ಮೂಲಕ ಕಳೆದ 8 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಈ ಬಾರಿಯ ಮೆಗಾ ಹರಾಜಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 8 ವರ್ಷಗಳ ನಂತರ ನಾಯಕ ವಿರಾಟ್ ಕೊಹ್ಲಿ ಇಲ್ಲದೇ ಮೆಗಾ ಹರಾಜೊಂದರಲ್ಲಿ ಭಾಗವಹಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications