
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡುತ್ತಿದ್ದು, ಐಪಿಎಲ್‌ನಲ್ಲಿ ಅತಿ ದೊಡ್ಡ ಅಭಿಮಾನಿ ಬಳಗಗಳನ್ನು ಹೊಂದಿರುವ ಎರಡು ತಂಡಗಳ ನಡುವಿನ ಈ ಪಂದ್ಯ ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಸೆಣಸಾಟವೆಂದರೆ ಸಾಕಷ್ಟು ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಎರಡೂ ತಂಡಗಳ ಅಭಿಮಾನಿ ಬಳಗ ಟ್ರೋಲ್ ಸಮರವನ್ನೇ ನಡೆಸುತ್ತಿರುತ್ತಾರೆ. ಹೀಗೆ ಪ್ರತೀ ವರ್ಷದಂತೆ ಈ ವರ್ಷವೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಪಂದ್ಯಕ್ಕೂ ಮುನ್ನ ಇತ್ತಂಡಗಳ ಅಭಿಮಾನಿಗಳು ತಮ್ಮ ತಂಡಗಳ ಆಟಗಾರರ ಹೆಸರನ್ನು ದಕ್ಷಿಣ ಭಾರತ ಚಿತ್ರರಂಗಗಳ ಜನಪ್ರಿಯ ಚಿತ್ರಗಳ ಶೀರ್ಷಿಕೆಗೆ ಹೋಲಿಸಿ ಟ್ರೋಲ್ ಮತ್ತು ಮೀಮ್ಸ್ ಸೃಷ್ಟಿಸುತ್ತಿದ್ದಾರೆ.
ಈ ಹಿಂದೆ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಫಾಫ್ ಡು ಪ್ಲೆಸಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ನಂತರ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಸೇರಿದರೆ ಕೆಜಿಎಫ್ ಆಗಲಿದೆ ಎಂದು ಟ್ರೋಲ್ ಮಾಡಲಾಗಿತ್ತು. ಹೀಗೆ ಈ ಹಿಂದೆ ವೈರಲ್ ಆಗಿದ್ದ ಈ ವಿಷಯವನ್ನು ಇಟ್ಟುಕೊಂಡು ಕನ್ನಡದ ಕ್ರೀಡಾ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಗಳಲ್ಲಿ ವಿಶೇಷ ಕೆಜಿಎಫ್ ಪೋಸ್ಟರ್‌ವೊಂದನ್ನು ರಚಿಸಿ ಪೋಸ್ಟ್ ಮಾಡಿದ್ದು, ಈ ಪೋಸ್ಟರ್ ವೈರಲ್ ಆಗಿದೆ.
ಕೆಜಿಎಫ್ ಎಂದರೆ ಕೊಹ್ಲಿ, ಮ್ಯಾಕ್ಸ್‌ವೆಲ್ ಮತ್ತು ಫಾಫ್ ಡು ಪ್ಲೆಸಿಸ್: ಇನ್ನು ಕೆಜಿಎಫ್ ಕನ್ನಡ ಚಲನಚಿತ್ರರಂಗದ ಬೃಹತ್ ಯೋಜನೆಯಾಗಿದ್ದು, ಇಡೀ ಭಾರತವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದು, ಕೆಜಿಎಫ್ ಚಾಪ್ಟರ್ ಒಂದು ಮಾಡಿದ್ದ ಮೋಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಜನ ಇದೀಗ ಕೆಜಿಎಫ್ ಚಾಪ್ಟರ್ ಎರಡನ್ನು ಚಿತ್ರಮಂದಿರದಲ್ಲೇ ವೀಕ್ಷಿಸಬೇಕು ಎಂಬ ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಈ ಕೆಜಿಎಫ್ ಜೊತೆ ಹೋಲಿಸಿ ಪೋಸ್ಟರ್ ಮಾಡುತ್ತಿರುವ ಅಭಿಮಾನಿಗಳು ಕೆ ಎಂದರೆ ಕೊಹ್ಲಿ, ಜಿ ಎಂದರೆ ಗ್ಲೆನ್ ಮತ್ತು ಎಫ್ ಎಂದರೆ ಫಾಫ್ ಎಂದು ಬಣ್ಣಿಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಇತ್ತೀಚೆಗಷ್ಟೆ ಕೆಜಿಎಫ್ ಚಿತ್ರದ ನಿರ್ಮಾಣ ಸಂಸ್ಥೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜೊತೆ ಅಧಿಕೃತವಾಗಿ ಕೈಜೋಡಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರನ್ನು ಬಳಸಿ ಕೆಜಿಎಫ್ ಎರಡನೇ ಭಾಗದ ಟೀಸರ್‌ನ್ನು ವಿಭಿನ್ನವಾಗಿ ಚಿತ್ರೀಕರಿಸಿ ಅಂತರ್ಜಾಲದಲ್ಲಿ ಹರಿಬಿಡಲಾಗಿತ್ತು. ಈ ಟೀಸರ್‌ನ ಕೊನೆಯಲ್ಲಿ ವಿರಾಟ್ ಕೊಹ್ಲಿ "ಬಾರ್ನ್ ಇನ್ ಬ್ಯಾಂಗ್ಳೋರ್ ಟು ಥ್ರಿಲ್ ದ ನೇಷನ್" ಎಂದು ಹೇಳಿದ್ದರು. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನ ಲೆಜೆಂಡರಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ ಹುಟ್ಚಿದ ಕೆಜಿಎಫ್ ಸಿನಿಮಾ ಇಡೀ ದೇಶಕ್ಕೆ ರೋಮಾಂಚಕ ಅನುಭವ ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದು, ಇದು ಇಡೀ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿತ್ತು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಮ್ಮ ಕರ್ನಾಟಕದ ತಂಡ ಎಂದು ಬೆಂಬಲಿಸುವ ಅಭಿಮಾನಿಗಳಿಗೆ ಸಂತಸ ನೀಡಿತ್ತು.