
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್ 26ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಆರಂಭವಾಗಲಿದ್ದು, ಟೂರ್ನಿಗೆ ದಿನಗಣನೆ ಆರಂಭವಾಗಿದೆ.
ಅತ್ತ ನಾಯಕನಿಲ್ಲದೇ ಇದ್ದ ಹಲವು ಫ್ರಾಂಚೈಸಿಗಳು ಈಗಾಗಲೇ ತಮ್ಮ ನೂತನ ನಾಯಕ ಯಾರು ಎಂಬುದನ್ನು ಘೋಷಣೆ ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾತ್ರ ಇನ್ನೂ ಕೂಡ ತನ್ನ ನೂತನ ನಾಯಕ ಯಾರೆಂಬುದನ್ನು ಘೋಷಿಸಿಲ್ಲ. ಹೌದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಧ್ಯಂತರದಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ತಂಡವನ್ನು ತಾನು ಇದೇ ಕೊನೆಯ ಬಾರಿಗೆ ಮುನ್ನಡೆಸುವುದಾಗಿ ಘೋಷಿಸಿದ್ದರು. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ತ್ಯಜಿಸಿದ ನಂತರ ಮುಂದಿನ ನಾಯಕ ಯಾರಾಗಬಹುದು ಎಂಬ ಕುತೂಹಲ ಹಾಗೂ ಚರ್ಚೆಗಳು ಹೆಚ್ಚಾಗಿದ್ದವು.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಂದು ( ಮಾರ್ಚ್ 12 ) ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಮ್ಯೂಸಿಯಂ ಕ್ರಾಸ್ ರಸ್ತೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ತನ್ನ ಮುಂದಿನ ನಾಯಕ ಯಾರೆಂಬುದನ್ನು ಬಹಿರಂಗಪಡಿಸಲಿದೆ. ಮಧ್ಯಾಹ್ನ 12ರಿಂದ ರಾತ್ರಿ 8ರವರೆಗೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಯಾರು ಎಂಬುದನ್ನು ಮಧ್ಯಾಹ್ನ 3.45ಕ್ಕೆ ಘೋಷಿಸಲಾಗುತ್ತಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಯಾರು ಎಂಬುದು ಬಹಿರಂಗವಾಗುವುದಕ್ಕೆ ಕ್ಷಣಗಣನೆ
ಆರಂಭವಾಗಿದೆ.ಯರಾಗಬಹುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕ?
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿ ರಾಜೀನಾಮೆಯನ್ನು ಇನ್ನೂ ಸ್ವೀಕರಿಸಬೇಕಿದ್ದು, ಅತ್ತ ನಾಯಕತ್ವ ಯಾರ ಪಾಲಾಗಬಹುದು ಎಂಬ ಲೆಕ್ಕಾಚಾರದ ಚರ್ಚೆಗಳು ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರ ನಡುವೆ ನಡೆಯುತ್ತಿವೆ. ಕೊಹ್ಲಿ ನಂತರ ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಹಾಗೂ ದಿನೇಶ್ ಕಾರ್ತಿಕ್ ಈ ಮೂವರಲ್ಲಿ ಓರ್ವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕನಾಗಬಹುದು ಎಂಬ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿದ್ದು, ಫಾಫ್ ಡು ಪ್ಲೆಸಿಸ್ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ.