
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಳೆದ ಬಾರಿಯ ಆವೃತ್ತಿಯ ರನ್ನರ್ ಅಪ್ ಆಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮಾರ್ಚ್ 26ರಂದು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು ಸಾಕಷ್ಟು ವಿಶೇಷವಾಗಿರಲಿದೆ. ಹಾಗೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನೂ ಮಹಾರಾಷ್ಟ್ರದ ಕ್ರಿಕೆಟ್ ಕ್ರೀಡಾಂಗಣಗಳಲ್ಲಿಯೇ ಆಯೋಜಿಸಲಾಗಿದ್ದು, ವಿವಿಧ ತಂಡಗಳು ಈಗಾಗಲೇ ಮುಂಬೈ ತಲುಪಿ ಅಭ್ಯಾಸಗಳನ್ನು ಆರಂಭಿಸಿವೆ.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರೂ ಕೂಡ ಈಗಾಗಲೇ ಮುಂಬೈ ತಲುಪಿ ಅಭ್ಯಾಸಗಳಲ್ಲಿ ತೊಡಗಿಕೊಂಡಿದ್ದು, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ನೇತೃತ್ವದಲ್ಲಿ ಸನ್ನಿವೇಶ ಅನುಕರಣಾ ಅಭ್ಯಾಸವನ್ನೂ ಕೂಡ ನಡೆಸಿದೆ. ಹೀಗೆ ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್‌ವೊಂದನ್ನು ಮಾಡಿದ್ದು, ತಮಗೆ ಸ್ವಾಗತ ಕೋರಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಟ್ವೀಟ್‌ನಲ್ಲಿ ಧನ್ಯಾವಾದಗಳನ್ನು ಅರ್ಪಿಸಿದೆ. ಹೌದು, ಮುಂಬೈ ನಗರದ ರಸ್ತೆಯಲ್ಲಿ ಎರಡು ದೊಡ್ಡ ಫಲಕಗಳನ್ನು ಅಕ್ಕಪಕ್ಕದಲ್ಲಿ ಹಾಕಲಾಗಿದ್ದು, ಈ ಎರಡು ಫಲಕಗಳ ಪೈಕಿ ಒಂದರಲ್ಲಿ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ ತಂಡದ ವತಿಯಿಂದ ಸುಸ್ವಾಗತ ಎಂಬ ಬರಹವನ್ನು ಬರೆಯಲಾಗಿದ್ದು, ಮತ್ತೊಂದು ಫಲಕದಲ್ಲಿ ಸುಸ್ವಾಗತ ಕೋರಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಡೆಯಿಂದ ಧನ್ಯವಾದಗಳು ಎಂದು ಬರೆಯಲಾಗಿದೆ. ಇನ್ನು ಈ ಫಲಕಗಳ ಚಿತ್ರವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್‌ನ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಮುಂಬೈನಲ್ಲೂ ಸ್ವಂತ ಊರಿನಲ್ಲಿ ಇರುವ ಭಾವನೆಯನ್ನು ಸೃಷ್ಟಿಸಿದ್ದಕ್ಕೆ ಧನ್ಯವಾದಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಟ್ವೀಟ್ ಮೂಲಕ ತಿಳಿಸಿದೆ. ಅಷ್ಟೇ ಅಲ್ಲದೇ ಎಂದಿನಂತೆ ಮೈದಾನದಲ್ಲಿ ಜಿದ್ದಾಜಿದ್ದಿನ ಆಟವನ್ನಾಡಲು ಸಿದ್ಧ ಎಂದೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೆದುಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್ ( ನಾಯಕ ), ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್‌ಫೋರ್ಡ್, ಜೇಸನ್ ಬೆಹ್ರೆಂಡ್, ಜೇಸನ್ ಬೆಹ್ರಾಯ್ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್