
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 22ನೇ ಪಂದ್ಯ ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಏಪ್ರಿಲ್ 12 ) ನಡೆಯುತ್ತಿದ್ದು, ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಣಕ್ಕಿಳಿದಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಫೀಲ್ಡಿಂಗ್ ಆಯ್ದುಕೊಂಡಿದ್ದು, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ.
ಆಡುವ ಬಳಗಗಳು:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗಾ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್
ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ: ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗದಲ್ಲಿ ಎರಡು ಪ್ರಮುಖ ಬದಲಾವಣೆಗಳಾಗಿದ್ದು, ಜೋಶ್ ಹೇಜಲ್‌ವುಡ್ ತಂಡ ಸೇರಿದ್ದು, ಡೇವಿಡ್ ವಿಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಹಾಗೂ ಹರ್ಷಲ್ ಪಟೇಲ್ ಅಲಭ್ಯರಾಗಿರುವ ಕಾರಣ ಗೋವಾದ ಸುಯಶ್ ಪ್ರಭುದೇಸಾಯಿ ತಂಡ ಸೇರಿದ್ದಾರೆ.
ಇತ್ತಂಡಗಳ ನಡುವಿನ ಈ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶ ಎಂದೇ ಹೇಳಬಹುದು. ಹೌದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲೀಗ್ ಹಂತದಲ್ಲಿನ ಎರಡೂ ಪಂದ್ಯಗಳಲ್ಲೂ ಸೋಲನ್ನು ಉಣಿಸಿತ್ತು. ಹೀಗೆ ಕಳೆದ ಬಾರಿಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿದು ಉತ್ತಮ ಅವಕಾಶವಾಗಿದೆ.
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ರೀತಿಯ ಕೆಟ್ಟ ಆರಂಭವನ್ನು ಪಡೆದುಕೊಂಡಿದ್ದು, ಇದೇ ಮೊದಲ ಬಾರಿಗೆ ಸತತ ನಾಲ್ಕು ಪಂದ್ಯಗಳಲ್ಲಿ ಸೋತ ಹೀನಾಯ ಅನುಭವವನ್ನು ಹೊಂದಿದೆ. ಹಾಗೂ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೂತನ ನಾಯಕ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಕಣಕ್ಕಿಳಿದಿದ್ದು, ಸಾಲು ಸಾಲು ಸೋಲನ್ನು ಕಂಡು ಟ್ರೋಲ್‌ಗೆ ತುತ್ತಾಗಿದೆ. ಇತ್ತ ಟೂರ್ನಿಯಲ್ಲಿನ ತನ್ನ ಮೊದಲ ಪಂದ್ಯದಲ್ಲಿ ಸೋಲನ್ನುಂಡು ಕಹಿ ಆರಂಭವನ್ನು ಪಡೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂತರ ನಡೆದ ತನ್ನ ಮೂರು ಪಂದ್ಯಗಳಲ್ಲಿ ಸಾಲು ಸಾಲು ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್ ಜಯ ಸಾಧಿಸಿದೆ.