
ಜವಾಬ್ದಾರಿಯುತ ಆರಂಭ ನೀಡಿದ ಆರಂಭಿಕರು, ಕೈಕೊಟ್ಟ ಮಧ್ಯಮ ಕ್ರಮಾಂಕ
ಇನ್ನು ರಾಜಸ್ತಾನ್ ರಾಯಲ್ಸ್ ನೀಡಿದ ಪೈಪೋಟಿಯುತ 170 ರನ್‌ಗಳ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಫಾಫ್ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ 55 ರನ್‌ಗಳ ಜೊತೆಯಾಟವನ್ನು ಆಡಿದರು. ಡು ಪ್ಲೆಸಿಸ್ 29 ರನ್ ಗಳಿಸಿ ಔಟ್ ಆದರೆ ಅನುಜ್ ರಾವತ್ 26 ರನ್ ಗಳಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕರು ಜವಾಬ್ದಾರಿಯುತ ಆರಂಭವನ್ನು ಕಟ್ಟಿಕೊಟ್ಟರೆ ತಂಡದ ಮಧ್ಯಮ ಕ್ರಮಾಂಕ ಅಕ್ಷರಶಃ ನೆಲಕಚ್ಚಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 5 ರನ್ ಗಳಿಸಿ ರನ್ ಔಟ್ ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡೇವಿಡ್ ವಿಲ್ಲಿ ಶೂನ್ಯ ಮತ್ತು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರುದರ್ ಫೋರ್ಡ್ 5 ರನ್ ಗಳಿಸಿದರು. ಹೀಗೆ 6.6 ಓವರ್‌ಗಳಲ್ಲಿ 55 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 12.3 ಓವರ್‌ಗಳಲ್ಲಿ 87 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಮತ್ತೆ ಕೈ ಹಿಡಿದ ದಿನೇಶ್ ಕಾರ್ತಿಕ್, ಅಬ್ಬರಿಸಿದ ಶಹಬಾಜ್ ಅಹ್ಮದ್
ಹೀಗೆ 12.3 ಓವರ್‌ಗಳಲ್ಲಿ 87 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಹಬಾಜ್ ಅಹ್ಮದ್ ಮತ್ತು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಆಸರೆಯಾದರು. 67 ರನ್‌ಗಳ ಜತೆಯಾಟವಾಡಿದ ಈ ಜೋಡಿ ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳ ಆರ್ಭಟವನ್ನು ತಗ್ಗಿಸಿದರು. ಶಹಬಾಜ್ ಅಹ್ಮದ್ 26 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 45 ರನ್ ಕಲೆಹಾಕಿದರೆ, ಅಜೇಯರಾಗಿ ಉಳಿದ ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 44 ರನ್ ಚಚ್ಚಿದರು. ಇನ್ನು ಶಹಬಾಜ್ ಅಹ್ಮದ್ ಔಟ್ ಆದ ಬಳಿಕ ಕಣಕ್ಕಿಳಿದ ಹರ್ಷಲ್ ಪಟೇಲ್ 4 ಎಸೆತಗಳಲ್ಲಿ 1 ಸಿಕ್ಸರ್ ಸಹಿತ 9 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಬಾರಿಯ ಟೂರ್ನಿಯಲ್ಲಿ ಪ್ರಥಮ ಸೋಲನ್ನು ಉಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.


ಇತ್ತಂಡಗಳ ಬೌಲಿಂಗ್
ಮೊದಲು ಬ್ಯಾಟಿಂಗ್ ಮಾಡಿ 18 ಓವರ್‌ಗಳ ತನಕ 127 ರನ್ ಕಲೆ ಹಾಕಿದ್ದ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ ಮತ್ತು ಶಿಮ್ರಾನ್ ಹೆಟ್ಮಾಯೆರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 169 ರನ್ ಗಳಿಸಿತು. 19ನೇ ಓವರ್ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ 19 ರನ್ ನೀಡಿದರೆ, ಅಂತಿಮ ಓವರ್ ಬೌಲಿಂಗ್ ಮಾಡಿದ ಆಕಾಶ್ ದೀಪ್ 23 ರನ್ ನೀಡಿದರು. ಇನ್ನುಜೋಸ್ ಬಟ್ಲರ್ ಅಜೇಯ 70 ರನ್ ಮತ್ತು ಶಿಮ್ರಾನ್ ಹೆಟ್ಮಾಯೆರ್ ಅಜೇಯ 42 ರನ್ ಗಳಿಸಿದ ಪರಿಣಾಮ ಕೇವಲ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಡೇವಿಡ್ ವಿಲ್ಲಿ, ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ 5 ವಿಕೆಟ್‍ಗಳನ್ನು ಬೇಗನೆ ಉರುಳಿಸಿದ ರಾಜಸ್ಥಾನ್ ರಾಯಲ್ಸ್ ಪರ ಟ್ರೆಂಟ್ ಬೌಲ್ಟ್ ಮತ್ತು ಯುಜುವೇಂದ್ರ ಚಾಹಲ್ ತಲಾ 2 ವಿಕೆಟ್ ಪಡೆದರೆ ನವದೀಪ್ ಸೈನಿ 1 ವಿಕೆಟ್ ಪಡೆದರು.


Click it and Unblock the Notifications
