MI vs RCB: ಆರ್‌ಸಿಬಿ ಪರ ಅಬ್ಬರಿಸಿದ ಅನುಜ್ ರಾವತ್, ಕೊಹ್ಲಿ; ಸತತ ನಾಲ್ಕನೇ ಸೋಲುಂಡ ಮುಂಬೈ ಇಂಡಿಯನ್ಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 18ನೇ ಪಂದ್ಯ ಏಪ್ರಿಲ್ 9ರ ಶನಿವಾರದಂದು ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗುಬಡಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್‍ಗಳ ಗೆಲುವನ್ನು ಸಾಧಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದ್ದು, ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ತಂಡದ ಪರ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ದೊಡ್ಡ ಮಟ್ಟದ ಆರಂಭ ಕಟ್ಟಿ ಕೊಡುವಲ್ಲಿ ವಿಫಲರಾದರು ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು ಸಾಲಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ತಲಾ 26 ರನ್ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡೆವಾಲ್ಡ್ ಬ್ರೆವಿಸ್ 8 ರನ್ ಗಳಿಸಿ ಔಟ್ ಆದರು, ನಂತರ ಕಣಕ್ಕಿಳಿದ ತಿಲಕ್ ವರ್ಮಾ ಮತ್ತು ಕೀರನ್ ಪೊಲಾರ್ಡ್ ಶೂನ್ಯ ಸುತ್ತಿ ನೆಲಕಚ್ಚಿದರು ಹಾಗೂ ರಮಣ್ ದೀಪ್ ಸಿಂಗ್ 6 ರನ್ ಗಳಿಸಿ ಔಟ್ ಆದರು.
ಹೀಗೆ ಮುಂಬೈ ಇಂಡಿಯನ್ಸ್ ಆಟಗಾರರು ಸಾಲಾಗಿ ವಿಕೆಟ್ ಒಪ್ಪಿಸಿದರೆ ಸೂರ್ಯಕುಮಾರ್ ಯಾದವ್ 37 ಎಸೆತಗಳಿಗೆ ಅಜೇಯ 68 ರನ್ ಚಚ್ಚಿದರು ಹಾಗೂ ಸೂರ್ಯಕುಮಾರ್ ಯಾದವ್ ಅವರಿಗೆ ಸಾಥ್ ನೀಡಿದ ಜಯದೇವ್ ಉನಾದ್ಕತ್ ಅಜೇಯ 13 ರನ್ ಕಲೆಹಾಕಿದರು. ಹೀಗೆ ಆರಂಭದಲ್ಲಿ ವೇಗವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಅಬ್ಬರಿಸಿದ ಕಾರಣದಿಂದಾಗಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 151 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 152 ರನ್‌ಗಳ ಗುರಿಯನ್ನು ನೀಡಿತು.

ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು , ನಾಲ್ಕನೇ ಸೋಲುಂಡ ಮುಂಬೈ ಇಂಡಿಯನ್ಸ್
ಇನ್ನು ಮುಂಬೈ ಇಂಡಿಯನ್ಸ್ ತಂಡ ನೀಡಿದ 152 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನುಜ್ ರಾವತ್ ಮತ್ತು ವಿರಾಟ್ ಕೊಹ್ಲಿ ಜವಾಬ್ದಾರಿಯುತ ಆಟದ ನೆರವಿನಿಂದ 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿ 7 ವಿಕೆಟ್‍ಗಳ ಜಯ ಸಾಧಿಸಿದೆ. ಹಾಗೂ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲುಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರ ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ ತಂಡ ನೀಡಿದ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಫಾಫ್ ಡು ಪ್ಲೆಸಿಸ್ 16 ರನ್ ಕಲೆಹಾಕಿದರೆ ಮತ್ತೋರ್ವ ಆರಂಭಿಕ ಆಟಗಾರ ಅನುಜ್ ರಾವತ್ 47 ಎಸೆತಗಳಲ್ಲಿ 66 ರನ್ ಚಚ್ಚಿ ಮಿಂಚಿದರು. ಇನ್ನು 36 ಎಸೆತಗಳಲ್ಲಿ 48 ರನ್ ಬಾರಿಸಿದ ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಹಾಗೂ ಅಂತಿಮವಾಗಿ ದಿನೇಶ್ ಕಾರ್ತಿಕ್ ಅಜೇಯ 7 ರನ್ ಬಾರಿಸಿದರೆ, ಕೊಹ್ಲಿ ಔಟ್ ಆದ ಬೆನ್ನಲ್ಲೇ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ 2 ಎಸೆತಗಳಲ್ಲಿ 2 ಬೌಂಡರಿ ಬಾರಿಸಿ ಅಜೇಯ 8 ರನ್ ಕಲೆ ಹಾಕಿದರು.


ಇತ್ತಂಡಗಳ ಬೌಲರ್‌ಗಳು ವಿಕೆಟ್ ಪಡೆದಿದ್ದೆಷ್ಟು?
ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಆರಂಭದಲ್ಲಿ ಯಶಸ್ವಿಯಾಗಿ ಕಟ್ಟಿಹಾಕಿ ನಂತರ ಸೂರ್ಯಕುಮಾರ್ ಯಾದವ್ ಎದುರು ಮಂಕಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದರೆ ಆಕಾಶ್ ದೀಪ್ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇತ್ತ ಪಂದ್ಯದಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ಪರ ಡಿವಾಲ್ಡ್ ಬ್ರೆವಿಸ್ ಮತ್ತು ಜಯದೇವ್ ಉನಾದ್ಕತ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications