RCB vs DC Head to Head : ಇತ್ತಂಡಗಳ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಸೋತಿರುವ ಕಳಪೆ ತಂಡ ಯಾವುದು?

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಲಿವೆ.
ಇತ್ತಂಡಗಳ ನಡುವಿನ ಈ ಪಂದ್ಯ ಏಪ್ರಿಲ್ 16ರ ಶನಿವಾರದಂದು ಸಂಜೆ 7.30ಕ್ಕೆ ಆರಂಭವಾಗಲಿದ್ದು, ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಈ ಬಾರಿ ನೂತನ ನಾಯಕ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಲ್ಲಿನ ತನ್ನ ಮೊದಲ ಪಂದ್ಯ ಸೋತು ನಂತರ ಹ್ಯಾಟ್ರಿಕ್ ಜಯ ಸಾಧಿಸಿ ಕೊನೆಯದಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ತನ್ನ ಐದನೇ ಪಂದ್ಯದಲ್ಲಿ 217 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತುವಲ್ಲಿ ವಿಫಲವಾಗಿ 23 ರನ್‌ಗಳ ಸೋಲನ್ನು ಅನುಭವಿಸಿತು. ಹೀಗೆ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 5 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ಪಂದ್ಯಗಳಲ್ಲಿ ಗೆದ್ದು, ಉಳಿದೆರಡು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಅತ್ತ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 4 ಪಂದ್ಯಗಳನ್ನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ 2 ಪಂದ್ಯಗಳಲ್ಲಿ ಗೆದ್ದಿದ್ದು, ಉಳಿದೆರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದುಕೊಂಡಿದೆ. ಇನ್ನು ತನ್ನ ಅಂತಿಮ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 44 ರನ್‌ಗಳ ಜಯ ಸಾಧಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೂ ಗೆಲ್ಲುತ್ತಾ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸಿ ಗೆಲುವಿನ ಹಾದಿಗೆ ಮರಳುತ್ತಾ ಎಂಬುದನ್ನು ಕಾದು ನೋಡಬೇಕು. ಇನ್ನು ಇತ್ತಂಡಗಳ ನಡುವೆ ಐಪಿಎಲ್ ಇತಿಹಾಸದ ಮುಖಾಮುಖಿಯಲ್ಲಿ ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಜಯ ಸಾಧಿಸಿದೆ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ ಓದಿ.

ಒಟ್ಟಾರೆ ಐಪಿಎಲ್ ಮುಖಾಮುಖಿ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಒಟ್ಟು 26 ಪಂದ್ಯಗಳು ನಡೆದಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 15 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 10 ಪಂದ್ಯಗಳಲ್ಲಿ ಜಯವನ್ನು ಕಂಡಿದೆ ಹಾಗೂ ಉಳಿದೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ. ಈ ಮೂಲಕ ಒಟ್ಟಾರೆ ಐಪಿಎಲ್ ಮುಖಾಮುಖಿ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಪಷ್ಟ ಮೇಲುಗೈ ಸಾಧಿಸಿದೆ.

ಕೊನೆಯ 5 ಪಂದ್ಯಗಳ ಮುಖಾಮುಖಿ
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಕೊನೆಯ 5 ಪಂದ್ಯಗಳ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 3 ಪಂದ್ಯಗಳಲ್ಲಿ ಗೆದ್ದು ಬೀಗಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಇತ್ತಂಡಗಳ ನಡುವಿನ ಕೊನೆಯ 5 ಪಂದ್ಯಗಳ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮೇಲುಗೈ ಸಾಧಿಸಿದೆ.

ಕೊನೆಯ ಆವೃತ್ತಿಯ ಮುಖಾಮುಖಿ
ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೆರಡು ಲೀಗ್ ಹಂತದ 2 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲಿಯೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸಿದೆ. ಈ ಮೂಲಕ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಷ್ಟ ಮೇಲುಗೈ ಸಾಧಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications