RR vs KKR: ಕೆಕೆಆರ್‌ಗೆ ಯುಜಿ ಹ್ಯಾಟ್ರಿಕ್ ಆಘಾತ: ಸತತ 3ನೇ ಪಂದ್ಯ ಸೋತ ಕೊಲ್ಕತ್ತಾ!

ಈ ಬಾರಿಯ ಐಪಿಎಲ್‌ನಲ್ಲಿ ಮತ್ತೊಂದು ಪಂದ್ಯ ಅತ್ಯಂತ ರೋಚಕವಾಗಿ ಅಂತ್ಯವಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಕೂಡ ಅದ್ಭುತ ಹೋರಾಟವನ್ನು ಪ್ರದರ್ಶಿಸಿದ್ದು ಅಂತಿಮ ಹಂತದವರೆಗೂ ಎರಡೂ ತಂಡಗಳಿಗೂ ಗೆಲ್ಲುವ ಅವಕಾಶಗಳಿದ್ದವು. ಆದರೆ ಅಂತಿಮ ಹಂತದಲ್ಲಿ ಚಾಹಲ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಕೆಕೆಆರ್ ತಂಡದ ಗೆಲುವಿನ ಕನಸಿಗೆ ತಣ್ಣೀರೆರಚಿತು. ಈ ಮೂಲಕ ಕೆಕೆಆರ್ ತಂಡ ಈ ಪಂದ್ಯದಲ್ಲಿ 7 ರನ್‌ಗಳ ಸೋಲು ಅನುಭವಿಸಿದೆ. ಈ ಮೂಲಕ ಸತತ 3ನೇ ಸೋಲು ಅನುಭವಿಸಿದೆ ಶ್ರೇಯಸ್ ಐಯ್ಯರ್ ಬಳಗ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಜೋಸಸ್ ಬಟ್ಲರ್ ಅವರ ಅಮೋಘ ಪ್ರದರ್ಶನದಿಂದಾಗಿ ಬೃಹತ್ ಮೊತ್ತವನ್ನು ಕಲೆ ಹಾಕಿತು. ಈ ಬಾರಿಯ ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಜೋಸ್ ಬಟ್ಲರ್ ಎರಡನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಈ ಪಂದ್ಯದಲ್ಲಿ 217 ರನ್‌ಗಳನ್ನು ಗಳಿಸಲು ಯಶಸ್ವಿಯಾಯಿತು.

ಹ್ಯಾಟ್ರಿಕ್ ವಿಕೆಟ್ ಪಡೆದ ಚಾಹಲ್
ಈ ಬೃಹತ್ ಮೊತ್ತವನ್ನು ಬೆನ್ನನಟ್ಟಿದ ಕೆಕೆಆರ್ ತಂಡದ ಪರವಾಗಿ ಅನುಭವಿ ಆರೋನ್ ಫಿಂಚ್ ಹಾಗೂ ನಾಯಕ ಶ್ರೇಯಸ್ ಐಯ್ಯರ್ ಅವರಿಂದ ಭರ್ಜರಿ ಪ್ರದರ್ಶನ ಬಂತು. ಲೀಲಾಜಾಲವಾಗಿ ಬ್ಯಾಟ್ ಬೀಸಿದ ಶ್ರೇಯಸ್ ಐಯ್ಯರ್ ಕೆಕೆಆರ್ ತಂಡಕ್ಕೆ ಜಯವನ್ನು ನೀಡಲಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ದಾಳಿಗಿಳಿದ ಯುಜುವೇಂದ್ರ ಚಾಹಲ್ ಕೆಕೆಆರ್ ತಂಡದ ಯೋಜನೆಯನ್ನು ಬುಡಮೇಲು ಮಾಡಿದರು. ಶ್ರೇಯಸ್ ಐಯ್ಯರ್ ಅವರ ವಿಕೆಟ್ ಸಹಿತ ನಾಲ್ಕು ವಿಕೆಟ್‌ಗಳನ್ನು ಒಂದೇ ಓವರ್‌ನಲ್ಲಿ ಚಾಹಲ್ ಕಬಳಿಸಿದರು. ಇದರಲ್ಲಿ ಭರ್ಜರಿ ಹ್ಯಾಟ್ರಿಕ್ ಕೂಡ ಸೇರಿತ್ತು ಎಂಬುದು ವಿಶೇಷ. ಈ ಮೂಲಕ ಈ ಭಾರಿಯ ಟೂರ್ನಿಯ ಮೊದಲ ಹ್ಯಾಟ್ರಿಕ್ ವಿಕೆಟ್ ಸಂಪಾದಿಸಿದ್ದಾರೆ ಯುಜುವೇಂದ್ರ ಚಾಹಲ್.

ಮತ್ತೆ ಸಿಡಿದ ಜೋಸ್ ಬಟ್ಲರ್
ಈ ಬಾರಿಯ ಆವೃತ್ತಿಯಲ್ಲಿ ಆರಂಭದಿಂದಲೂ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಈ ಕೆಕೆಆರ್ ವಿರುದ್ಧವೂ ತಮ್ಮ ಅಬ್ಬರವನ್ನು ಮುಂದುವರಿಸಿದ್ದಾರೆ. ಈ ಪಂದ್ಯದಲ್ಲಿ ಬಟ್ಲರ್ ಭರ್ಜರಿ ಶತಕ ಸಿಡಿಸಿದ್ದು 61 ಎಸೆತಗಳಲ್ಲಿ ಭರ್ಜರಿ 103 ರನ್‌ಗಳಿಸಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡಿತ್ತು. ಬಟ್ಲರ್ ಹೊರತುಪಡಿಸಿ ಆರ್‌ಆರ್ ಪರವಾಗಿ ಪಡಿಕ್ಕಲ್ 24 ರನ್‌ಗಳಿಸಿದರೆ ಸಂಜು ಸ್ಯಾಮ್ಸನ್ 38 ರನ್‌ಗಳಿಸಿದರು. ಶಿಮ್ರಾನ್ ಹೇಟ್ಮೇಯರ್ 26 ರನ್‌ಗಳಿಸಿ ಅಜೇಯವಾಗುಳಿದರು.

ಫಿಂಚ್, ಐಯ್ಯರ್ ಅಬ್ಬರ
ಆರ್‌ಆರ್ ಪಡೆ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಸುನಿಲ್ ನರೈನ್ ಅವರನ್ನು ಮೊದಲ ಎಸೆತದಲ್ಲಿಯೇ ರನೌಟ್ ಆಗುವ ಮೂಲಕ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಆರೋನ್ ಫಿಂಚ್ ಹಾಗೂ ನಾಯಕ ಶ್ರೇಯಸ್ ಐಯ್ಯರ್ ಕೆಕೆಆರ್ ಪರವಾಗಿ ಅಮೋಘ ಆಟವನ್ನು ಪ್ರದರ್ಶಿಸಿದರು. ಭರ್ಜರಿ 107 ರನ್‌ಗಳ ಜೊತೆಯಾಟ ಈ ಜೋಡಿಯಿಂದ ಬಂದಿತು. ಆರೋನ್ ಫಿಂಚ್ 58 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ನಂತರವೂ ಐಯ್ಯರ್ ಅಬ್ಬರ ಮುಂದುವರಿದಿತ್ತು. ಆದರೆ ಇತರ ಆಟಗಾರರಿಂದ ಉತ್ತಮ ಬೆಂಬಲ ದೊರೆಯಲಿಲ್ಲ. ನಿತೀಶ್ ರಾಣಾ 18 ರನ್‌ಗಳ ಕೊಎಉಗೆ ನೀಡಿ ವಿಕೆಟ್ ಕಳೆದುಕೊಂಡರು. ಆದರೆ 17 ಓವರ್‌ನಲ್ಲಿ ಬೌಲಿಂಗ್ ದಾಳಿಗಿಳಿಸಿದ ಯುಜುವೇಂದ್ರ ಮೊದಲ ಎಸೆತದಲ್ಲಿ ವೆಂಕಟೇಶ್ ಐಯ್ಯರ್ ವಿಕೆಟ್ ಕಬಳಿಸಿದರೆ ನಂತರ ನಾಲ್ಕನೇ ಎಸೆತದಲ್ಲಿ ಶ್ರೇಯಸ್ ಐಯ್ಯರ್, ಐದನೇ ಎಸೆತದಲ್ಲಿ ಶಿವಂ ಮಾವಿ ಹಾಗೂ ಆರನೇ ಎಸೆತದಲ್ಲಿ ಪ್ಯಾಟ್ ಕಮ್ಮಿನ್ಸ್ ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.

ಅಂತಿಮ ಹಂತದಲ್ಲಿ ಉಮೇಶ್ ಯಾದವ್ ಅಬ್ಬರ
ಪ್ರಮುಖ ಎಲ್ಲಾ ವಿಕೆಟ್ ಕಳೆದುಕೊಂಡಿದ್ದರೂ ಅಂತಿಮ ಹಂತದಲ್ಲಿ ಉಮೇಶ್ ಯಾದವ್ ಆರ್‌ಆರ್ ಪಡೆಗೆ ಒಂದು ಹಂತದ ಶಾಕ್ ನೀಡುವಲ್ಲಿ ಯಶಸ್ವಿಯಾದರು. ಟ್ರೆಂಟ್ ಬೋಲ್ಟ್ ಓವರ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಉಮೇಶ್ ಯಾದವ್ ಕೆಕೆಆರ್ ತಂಡವನ್ನು ಹೋರಾಟದಲ್ಲಿ ಮುಂದುವರಿಯುವಂತೆ ನೋಡಿಕೊಮಡರು. 9 ಎಸೆತಗಳನ್ನು ಎದುರಿಸಿದ ಉಮೇಶ್ ಯಾದವ್ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 21 ರನ್‌ಗಳಿಸಿದರು. ಅಂತಿಮ ಓವರ್ ಎಸೆದ ಒಬೆಡ್ ಮೆಕ್‌ಕಾಯ್ ಎರಡು ವಿಕೆಟ್ ಕಬಳಿಸುವ ಮೂಲಕ ಕೆಕೆಆರ್ ಇನ್ನಿಂಗ್ಸ್ ಮುಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications