ಕೆಜಿಎಫ್ 2 ಕುರಿತು ಕೊಹ್ಲಿ, ಫಾಫ್, ಡಿಕೆ ಮತ್ತು ಮ್ಯಾಕ್ಸ್‌ವೆಲ್ ಮಾಡಿದ ಕೆಲಸ ನೋಡಿದ್ರೆ ಹೆಮ್ಮೆ ಎನಿಸುತ್ತೆ!

ಸದ್ಯ ಭಾರತದಲ್ಲಿ 2 ವಿಷಯಗಳು ಅತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ಪೈಕಿ ಒಂದು ವಿಷಯ ಕ್ರೀಡಾ ಕ್ಷೇತ್ರದ್ದಾಗಿದ್ದರೆ, ಮತ್ತೊಂದು ವಿಷಯ ಸಿನಿಮಾ ಕ್ಷೇತ್ರದ್ದು. ಹೌದು, ಜಗತ್ತಿನ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎಂಬ ದೊಡ್ಡ ಹೆಸರನ್ನು ಹೊಂದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಒಂದೆಡೆ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಕನ್ನಡ ಚಲನಚಿತ್ರರಂಗದ ಹೆಮ್ಮೆಯ ಚಿತ್ರ ಕೆಜಿಎಫ್ 2 ಬಿಡುಗಡೆಯಾಗಿ ಅಬ್ಬರಿಸುತ್ತಿದೆ.
4 ವರ್ಷಗಳ ಹಿಂದೆ ಕೆಜಿಎಫ್ ಚಾಪ್ಟರ್ 1 ಚಿತ್ರ ಬಿಡುಗಡೆಯಾಗಿ ಧೂಳ್ ಎಬ್ಬಿಸಿತ್ತು. ಆ ಚಿತ್ರ ನಿರೀಕ್ಷೆಗೂ ಮೀರಿದ ಸದ್ದನ್ನು ಮಾಡಿದ ಕಾರಣ ಇಡೀ ಭಾರತದ ಸಿನಿಪ್ರೇಕ್ಷಕರು ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಕಾದು ಕುಳಿತಿದ್ದರು. ಹೀಗೆ ಸಾಕಷ್ಟು ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ಚಿತ್ರ ಇದೇ ಏಪ್ರಿಲ್ ತಿಂಗಳ 14ರಂದು ತೆರೆಗೆ ಅಪ್ಪಳಿಸಿ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುವುದರ ಜೊತೆಗೆ ದಾಖಲೆಯ ಮೇಲೆ ದಾಖಲೆಯನ್ನು ಬರೆದು ರಾರಾಜಿಸುತ್ತಿದೆ.
ಹೀಗೆ ಕನ್ನಡ ನಾಡಿನ ಚಿತ್ರವೊಂದು ಭಾರತದಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದು, ವಿವಿಧ ಭಾಷೆಗಳ ಪ್ರೇಕ್ಷಕರು ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ವಿವಿಧ ಚಿತ್ರರಂಗಗಳ ಖ್ಯಾತ ನಿರ್ದೇಶಕರು, ಸ್ಟಾರ್ ನಟರು ಚಿತ್ರವನ್ನು ವೀಕ್ಷಿಸಿ ದೊಡ್ಡ ಮಟ್ಟದ ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದು, ಇದೀಗ ಈ ಚಿತ್ರವನ್ನು ವೀಕ್ಷಿಸುವ ಅವಕಾಶ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಿಗೂ ಕೂಡ ಬಂದುಬಿಟ್ಟಿದೆ. ಈ ಕುರಿತಾದ ಮತ್ತಷ್ಟು ವಿವರ ಕೆಳಕಂಡಂತಿದೆ ಓದಿ.

ಬಯೋ ಬಬಲ್ ಒಳಗೆ ಕೆಜಿಎಫ್ 2 ಪ್ರದರ್ಶನ
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಇಂದು ( ಏಪ್ರಿಲ್ 17 ) ಬಯೋ ಬಬಲ್ ಒಳಗಡೆಯೇ ವೀಕ್ಷಿಸುತ್ತಿದ್ದಾರೆ. ತಂಡದ ಆಟಗಾರರಿಗೆ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪಾಮ್ ಗಾರ್ಡನ್‌ನಲ್ಲಿ ವೇದಿಕೆಯ ಮೇಲೆ ತೆರೆಯನ್ನು ಹಾಕಲಾಗಿದ್ದು, ತಂಡದ ಆಟಗಾರರು ಕುಳಿತು ಚಿತ್ರವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಷಯವನ್ನು ಸ್ವತಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿನ ತನ್ನ ಅಧಿಕೃತ ಖಾತೆಗಳ ಮೂಲಕ ತಿಳಿಸಿದೆ.

ಕೈಜೋಡಿಸಿವೆ ಹೊಂಬಾಳೆ - ಆರ್‌ಸಿಬಿ
ಇನ್ನು ಕನ್ನಡ ಚಿತ್ರರಂಗದ ಬೃಹತ್ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜತೆ ಕೈಜೋಡಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಇದೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಚಾರವನ್ನು ಕೂಡ ಇತ್ತೀಚೆಗಷ್ಟೇ ಮಾಡಿದ್ದರು. ಚಿತ್ರದ ಟೀಸರ್ ದೃಶ್ಯಗಳಿಗೆ ನಟಿಸುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ತಮ್ಮ ಪ್ರೋತ್ಸಾಹ ನೀಡಿದ್ದರು.

ಕನ್ನಡಿಗರಿಗೆ ಹೆಮ್ಮೆ
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಂಚಿಕೊಂಡಿರುವ ಈ ಪೋಸ್ಟ್ ನೋಡಿದರೆ ಪ್ರತಿಯೊಬ್ಬ ಕನ್ನಡಿಗರೂ ಕೂಡ ಹೆಮ್ಮೆ ಪಡಲಿದ್ದಾರೆ. ಇದಕ್ಕೆ ಕಾರಣ ಇದೊಂದು ಕನ್ನಡ ಸಿನಿಮಾ ಎಂಬುದು. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಕನ್ನಡಿಗರು ನಿರ್ಮಿಸಿರುವ ಚಿತ್ರವನ್ನು ವೀಕ್ಷಿಸಲಿದ್ದಾರೆ ಎಂಬುದು ಸಾಮಾನ್ಯ ವಿಷಯವಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ವದೇಶಿ ಹಾಗೂ ಹಲವಾರು ವಿದೇಶಗಳ ಆಟಗಾರರಿದ್ದು, ಈ ಆಟಗಾರರು ನಮ್ಮ ನೆಲದ ಚಿತ್ರವನ್ನು ವೀಕ್ಷಿಸಲಿರುವುದು ಕನ್ನಡಿಗರಿಗೆ ಹೆಮ್ಮೆಯೇ ಸರಿ. ಇನ್ನು ಪ್ರದರ್ಶನ ಮುಗಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಚಿತ್ರದ ಕುರಿತು ಮಾತನಾಡಲಿದ್ದು, ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications