ಆ ಕ್ರಿಕೆಟಿಗ 15ನೇ ಮಹಡಿಯಲ್ಲಿ ನನ್ನನ್ನು ನೇತು ಹಾಕಿದ್ದ: ಐಪಿಎಲ್‌ನ ಕರಾಳ ಘಟನೆ ನೆನಪಿಸಿಕೊಂಡ ಚಾಹಲ್

ಟೀಮ್ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕೀಟಲೆ, ತುಂಟಾಟ, ತಮಾಷೆಯ ಪ್ರವೃತ್ತಿಯಿಂದ ಕ್ರಿಕೆಟ್ ಪ್ರಿಯರ ಮನಗೆದ್ದ ಆಟಗಾರ. ಅಂಗಳದಲ್ಲಿ ತಮ್ಮ ಅದ್ಭುತ ಬೌಲಿಂಗ್ ದಾಳಿಯಿಂದ ಎದುರಾಳಿಗಳಿಗೆ ಕಂಟಕವಾಗುವ ಚಾಹಲ್‌ಗೆ ಎಲ್ಲಾ ತಂಡಗಳಲ್ಲೂ ಆಪ್ತ ಗೆಳೆಯರಿದ್ದಾರೆ. ಆದರೆ ಚಾಹಲ್ ವೃತ್ತಿ ಜೀವನದ ಆರಂಭ ಹೀಗಿರಲಿಲ್ಲ. ಸಾಕಷ್ಟು ಕಠಿಣ ಕ್ಷಣಗಳನ್ನು ಎದುರಿಸಿದ್ದನ್ನು ಚಾಹಲ್ ನೆನಪಿಸಿಕೊಂಡಿದ್ದಾರೆ. ಅದರಲ್ಲೂ ಚಾಹಲ್ ಹಂಚಿಕೊಂಡಿರುವ ಒಂದು ಘಟನೆಗೆ ಪ್ರತಿಯೊಬ್ಬರೂ ಬೆಚ್ಚಿಬಿದ್ದಿದ್ದಾರೆ.
ಸುದೀರ್ಘ ಕಾಲದಿಂದ ಆರ್‌ಸಿಬಿ ತಂಡದ ಪರವಾಗಿ ಆಡುತ್ತಿದ್ದ ಯುಜುವೇಂದ್ರ ಚಾಹಲ್ ಅವರನ್ನು ಈ ಬಾರಿಯ ಆವೃತ್ತಿಗೂ ಮುನ್ನ ಆರ್‌ಸಿಬಿ ರೀಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟುಕೊಟ್ಟಿತ್ತು. ಯುಜುವೇಂದ್ರ ಚಾಹಲ್ ಅವರನ್ನು ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಖರೀದಿಸಿತ್ತು. ಆರ್‌ಆರ್ ತಂಡದ ಪರವಾಗಿ ಮಿಂಚುತ್ತಿರುವ ಚಾಹಲ್ ಫ್ರಾಂಚೈಸಿಯ ಕಾರ್ಯಕ್ರಮವೊಂದರಲ್ಲಿ ಐಪಿಎಲ್‌ನಲ್ಲಿ ನಡೆದಿರುವ ಕರಾಳ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
2013ರಲ್ಲಿ ನಡೆದಿದ್ದ ಆ ಘಟನೆ: ಈವರೆಗೂ ಎಲ್ಲೂ ಬಹಿರಂಗಪಡಿಸದ ಈ ಘಟನೆ ನಡೆದಿದ್ದು 2013ರಲ್ಲಿ. ಆಗ ಚಾಹಲ್ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. "ಅದು 2013ರಲ್ಲಿ ನಡೆದ ಘಟನೆ. ಆಗ ನಾನು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದೆ. ಬೆಂಗಳೂರಿನಲ್ಲಿ ಪಂದ್ಯ ನಡೆದ ನಂತರ ಆಟಗಾರರ 'ಗೆಟ್ ಟು ಗೆದರ್' ನಡೆದಿತ್ತು. ಆಗ ಒಬ್ಬ ಆಟಗಾರ ನನ್ನನ್ನು ನೋಡುತ್ತಲೇ ಇದ್ದ. ಕೆಲ ಸಮಯದ ನಂತರ ನನ್ನನ್ನು ಕರೆದ. ನಂತರ ಆತ ನನ್ನನ್ನು ಹಿಂದಿನಿಂದ ಲಾಕ್ ಮಾಡಿದ. 15ನೇ ಫ್ಲೋರ್‌ನಲ್ಲಿ ಆಗಿದ್ದ ಘಟನೆಯದು. ಆತನೇನಾರೂ ಬಿಟ್ಟಿದ್ದರೆ ನಾನು ಅಲ್ಲಿಂದ ಕೆಳಕ್ಕೆ ಬೀಳುತ್ತಿದ್ದೆ. ಇದನ್ನು ಗಮನಿಸಿದರ ಇತರ ಆಟಗಾರರು ತಕ್ಷಣವೇ ಓಡಿ ಬಂದು ನನ್ನನ್ನು ರಕ್ಷಿಸಿದರು. ಇಷ್ಟಾದಾಗ ನನ್ನ ಸ್ಮೃತಿ ತಪ್ಪಿತ್ತು. ನಂತರ ಅಲ್ಲಿದ್ದವರು ನನಗೆ ನೀರು ನೀಡಿದ್ದರು" ಎಂದು ಯುಜುವೇಂದ್ರ ಚಾಹಲ್ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಕ್ರಿಕೆಟ್ ಆಡುವ ಬಹುತೇಕ ಎಲ್ಲಾ ರಾಷ್ಟ್ರಗಳಿಂದಲೂ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುತ್ತಾರೆ. ಭಿನ್ನ ಮನಸ್ಥಿತಿ, ಭಿನ್ನ ಆಲೋಚನೆ, ವಿಭಿನ್ನ ಸಂಸ್ಕೃತಿಯ ಮಧ್ಯೆಯೂ ಒಟ್ಟಾಗಿ ಒಂದು ತಂಡವಾಗಿ ಆಡುವುದು ಈ ಲೀಗ್ ಟೂರ್ನಿಯ ಹೆಗ್ಗಳಿಕೆಯಾಗಿದೆ. ಆದರೆ ಇವುಗಳ ಮಧ್ಯೆ ಈ ರೀತಿಯ ಕೆಟ್ಟ ಘಟನೆಗಳು ಕೂಡ ನಡೆದಿದೆ ಎಂಬುದು ಆಘಾತ ಮೂಡಿಸುತ್ತದೆ.
ಯುಜುವೇಂದ್ರ ಚಾಹಲ್ ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಿಂದ ಹೊರಬಿದ್ದ ವಿಚಾರವಾಗಿಯೂ ಅಚ್ಚರಿಯ ಸಂಗತಿಗಳನ್ನು ಬಿಚ್ಚಿಟ್ಟಿದ್ದರು. ಆರ್‌ಸಿಬಿ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಹರಾಜಿನಲ್ಲಿ ತಂಡಕ್ಕೆ ಸೇರ್ಪಡೆಗೊಳಿಸುವುದಾಗಿ ಹೇಳಿದ್ದರು, ಆದರೆ ಹರಾಜಿನಲ್ಲಿ ತನ್ನನ್ನು ಸೇರ್ಪಡೆಗೊಳಿಸುವ ಪ್ರಯತ್ನವನ್ನೂ ನಡೆಸಲಿಲ್ಲ ಎಂದಿದ್ದರು ಯುಜಿ ಚಾಹಲ್. ಈ ಸಂದರ್ಭದಲ್ಲಿ ಆರ್‌ಸಿಬಿ ಫ್ರಾಂಚೈಸಿಯಿಮದ ತಾನು ಹೆಚ್ಚಿನ ಹಣವನ್ನು ಹೇಳಿದ್ದೆ ಎಂಬ ಮಾತು ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಆದರೆ ನಾನಾಗಲಿ ಆರ್‌ಸಿಬಿ ತಂಡವಾಗಲಿ ಈ ವಿಚಾರವಾಗಿ ಮಾತುಕತೆಯನ್ನೇ ನಡೆಸಿಲ್ಲ ಎಂದು ಇದೇ ಸಂದರ್ಭದಲ್ಲಿ ಚಾಹಲ್ ಹೇಳಿಕೊಂಡಿದ್ದರು.
ಇನ್ನು ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿ ಮೊದಲ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ತಂಡ ಸೋಲು ಅನುಭವಿಸಿದ್ದು ಹಿನ್ನಡೆ ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications