RCB vs SRH: ಮಿಂಚಿದ ಫಾಫ್, ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಅಬ್ಬರಿಸಿದ ಡಿಕೆ ; ಸನ್ ರೈಸರ್ಸ್‌ಗೆ ಗೆಲ್ಲಲು 193 ರನ್ ಗುರಿ

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 54ನೇ ಪಂದ್ಯದಲ್ಲಿ ಇಂದು ( ಮೇ 8 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್ ಆಯ್ದುಕೊಂಡರು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಾಫ್ ಡು ಪ್ಲೆಸಿಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಈ ಪೈಕಿ ವಿರಾಟ್ ಕೊಹ್ಲಿ ಪಂದ್ಯದ ಮೊದಲನೇ ಎಸೆತದಲ್ಲಿಯೇ ವಿಕೆಟ್ ಒಪ್ಪಿಸುವ ಮೂಲಕ ಗೋಲ್ಡನ್ ಡಕ್ ಔಟ್ ಆದರೆ, ಫಾಫ್ ಡು ಪ್ಲೆಸಿಸ್ ಉತ್ತಮ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು.
ವಿರಾಟ್ ಕೊಹ್ಲಿ ಶೂನ್ಯ, ನಾಯಕ ಫಾಫ್ ಡು ಪ್ಲೆಸಿಸ್ 50 ಎಸೆತಗಳಲ್ಲಿ ಅಜೇಯ 73 ರನ್ ಕಲೆಹಾಕಿದರು, ಕೊಹ್ಲಿ ಔಟ್ ಆದ ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಒತ್ತಡದಲ್ಲಿ ಬ್ಯಾಟ್ ಬೀಸಿದ ರಜತ್ ಪಟಿದಾರ್ 38 ಎಸೆತಗಳಲ್ಲಿ 48 ರನ್ ಬಾರಿಸಿ ಉತ್ತಮ ಆಟವನ್ನಾಡಿದರು, ಗ್ಲೆನ್ ಮ್ಯಾಕ್ಸ್‌ವೆಲ್ 24 ಎಸೆತಗಳಲ್ಲಿ 33 ರನ್ ಬಾರಿಸಿದರು ಹಾಗೂ ಅಂತಿಮ ಹಂತದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ 8 ಎಸೆತಗಳಲ್ಲಿ ಅಜೇಯ 30 ರನ್ ಬಾರುಸಿ ಅಬ್ಬರಿಸಿದರು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 193 ರನ್‌ಗಳ ಗುರಿಯನ್ನು ನೀಡಿದೆ.
ಸನ್ ರೈಸರ್ಸ್ ಹೈದರಾಬಾದ್ ಪರ ಜಗದೀಶ ಸುಚಿತ್ 2 ವಿಕೆಟ್ ಪಡೆದರೆ, ಕಾರ್ತಿಕ್ ತ್ಯಾಗಿ 1 ವಿಕೆಟ್ ಪಡೆದರು.
ವಿರಾಟ್ ಕೊಹ್ಲಿ ಮತ್ತೆ ಫ್ಲಾಪ್: ಇನ್ನು ಈ ಪಂದ್ಯದ ಮೊದಲನೇ ಎಸೆತದಲ್ಲಿಯೇ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಔಟ್ ಆದರು. ಜಗದೀಶ ಸುಚಿತ್ ಎಸೆದ ಮೊದಲ ಎಸೆತದಲ್ಲಿಯೇ ಕೇನ್ ವಿಲಿಯಮ್ಸನ್ ಅವರಿಗೆ ಕ್ಯಾಚ್ ಹಿಡಿದ ಕೊಹ್ಲಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಗೋಲ್ಡನ್ ಡಕ್ ಔಟ್ ಆಗಿದ್ದಾರೆ.

ದಿನೇಶ್ ಕಾರ್ತಿಕ್ ಹ್ಯಾಟ್ರಿಕ್ ಸಿಕ್ಸರ್: ಗ್ಲೆನ್ ಮ್ಯಾಕ್ಸ್‌ವೆಲ್ ಔಟ್ ಆದ ಬಳಿಕ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ 8 ಎಸೆತಗಳಲ್ಲಿ ಅಜೇಯ 30 ರನ್ ಚಚ್ಚಿ ಅಬ್ಬರಿಸಿದರು. ತಾವು ಎದುರಿಸಿದ ಮೂರನೇ ಎಸೆತಕ್ಕೆ ಮೊದಲನೇ ಸಿಕ್ಸರ್ ಚಚ್ಚಿದ ದಿನೇಶ್ ಕಾರ್ತಿಕ್ ಫಜಲ್ ಹಕ್ ಫರೂಕಿ ಎಸೆದ ಇನ್ನಿಂಗ್ಸ್‌ನ ಅಂತಿಮ ಓವರ್‌ನ ಮೂರನೇ, ನಾಲ್ಕನೇ ಮತ್ತು ಐದನೇ ಎಸೆತಗಳಿಗೆ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಅಬ್ಬರಿಸಿದರು ಹಾಗೂ ಅಂತಿಮ ಎಸೆತದಲ್ಲಿ ಬೌಂಡರಿ ಚಚ್ಚಿದರು.
ಸನ್ ರೈಸರ್ಸ್ ಹೈದರಾಬಾದ್ ಬಳಗ: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಜಗದೀಶ ಸುಚಿತ್, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ, ಉಮ್ರಾನ್ ಮಲಿಕ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications