ಆರ್‌ಸಿಬಿ, ಪಂಜಾಬ್ ಕಣಕ್ಕಿಳಿಯುವ ಡಿವೈಪಿ ಕ್ರೀಡಾಂಗಣದಲ್ಲಿ ಪಂಜಾಬ್‌ಗಿದೆ ಕೆಟ್ಟ ಅನುಭವ; ಆರ್‌ಸಿಬಿ ಕಥೆ?

ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿ ನಿನ್ನೆಯಿಂದ ( ಮಾರ್ಚ್ 26 ) ಆರಂಭವಾಗಿದ್ದು, ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಪ್ರಥಮ ಪಂದ್ಯದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ಗೆ ಕೋಲ್ಕತ್ತಾ ನೈಟ್ ರೈಡರ್ಸ್ ಸೋಲುಣಿಸಿದೆ. ಇನ್ನು ಟೂರ್ನಿಯ ಎರಡನೇ ದಿನದಂದು ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ಸೆಣಸಾಡಿದರೆ, ದ್ವಿತೀಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿವೆ.
ಹೌದು, ಟೂರ್ನಿಯ ಲೀಗ್ ಹಂತದ ಎಲ್ಲಾ 70 ಪಂದ್ಯಗಳನ್ನು ಮಹಾರಾಷ್ಟ್ರದ ಪುಣೆಯ ಎಂಸಿಎ ಕ್ರೀಡಾಂಗಣ ಹಾಗೂ ಮುಂಬೈನ ವಾಂಖೆಡೆ, ಡಿವೈ ಪಾಟೀಲ್ ಮತ್ತು ಬ್ರಬೌರ್ನ್ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿದೆ. ಇನ್ನು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹಲವಾರು ಐಪಿಎಲ್ ಪಂದ್ಯಗಳು ನಡೆದಿದ್ದರೆ, ಉಳಿದ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಐಪಿಎಲ್ ಪಂದ್ಯಗಳು ದೊಡ್ಡ ಸಂಖ್ಯೆಯಲ್ಲೇನೂ ನಡೆದಿಲ್ಲದಿದ್ದರೂ ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣ ಎರಡು ಬಾರಿ ಐಪಿಎಲ್ ಪಂದ್ಯಗಳಿಗೆ ವೇದಿಕೆಯಾಗಿದೆ. ಈ ಕಾರಣದಿಂದಾಗಿ ಉಳಿದ ಕ್ರೀಡಾಂಗಣಗಳಲ್ಲಿ ಇದುವೆರೆಗೂ ನಡೆದಿರುವ ಐಪಿಎಲ್ ಪಂದ್ಯಗಳ ಫಲಿತಾಂಶ ಹೇಗಿದೆ, ಆ ಕ್ರೀಡಾಂಗಣಗಳಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು, ಹೆಚ್ಚು ರನ್ ಗಳಿಸಿರುವ ಆಟಗಾರ ಯಾರು ಎಂಬುದನ್ನು ಪ್ರೇಕ್ಷಕರು ಕುತೂಹಲಕಾರಿ ರೀತಿಯಲ್ಲಿ ಹುಡುಕಲಾರಂಭಿಸಿದ್ದಾರೆ. ಅದರಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಈ ಕ್ರೀಡಾಂಗಣದಲ್ಲಿ ತಂಡದ ಪ್ರದರ್ಶನ ಹೇಗಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಈ ಪ್ರಶ್ನಗಳಿಗೆ ಉತ್ತರವಾಗಿ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿರುವ ಐಪಿಎಲ್ ಪಂದ್ಯಗಳ ಕಿರು ಅಂಕಿಅಂಶ ಈ ಕೆಳಕಂಡಂತಿದೆ.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್‌ಗಿದೆ ಕೆಟ್ಟ ಅನುಭವ
2011ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಏಪ್ರಿಲ್ 10ರಂದು ನಡೆದಿದ್ದ ಪಂಜಾಬ್ ಕಿಂಗ್ಸ್ ಹಾಗೂ ಪುಣೆ ವಾರಿಯರ್ಸ್ ನಡುವಿನ ಲೀಗ್ ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿ ನೀರಸ ಪ್ರದರ್ಶನ ತೋರಿತ್ತು. ಹೀಗೆ ಅಲ್ಪ ಮೊತ್ತ ಕಲೆಹಾಕಿದ್ದು ಮಾತ್ರವಲ್ಲದೇ ಈ ಪಂದ್ಯದಲ್ಲಿ ಪಂಜಾಬ್‌ನ ಬೌಲಿಂಗ್ ಕೂಡ ಮುಗ್ಗರಿಸಿತ್ತು. ಪಂಜಾಬ್ ನೀಡಿದ್ದ ಈ ಗುರಿಯನ್ನು ಬೆನ್ನತ್ತಿದ್ದ ಪುಣೆ ವಾರಿಯರ್ಸ್ 13.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಪಂಜಾಬ್ ಬೌಲರ್‌ಗಳ ಮೇಲೆ ಅಬ್ಬರಿಸಿತ್ತು. ಹೀಗೆ ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಕಳಪೆ ಆಟವನ್ನಾಡಿರುವ ಕೆಟ್ಟ ಅನುಭವವನ್ನು ಹೊಂದಿದೆ.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಆರ್‌ಸಿಬಿ ಕಥೆಯೇನು?
ಈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಪಂದ್ಯವನ್ನಾಡಿರುವ ಅನುಭವವನ್ನು ಹೊಂದಿದೆ. 2010ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಏಪ್ರಿಲ್ 24ರಂದು ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಕ್ಕನ್ ಚಾರ್ಜರ್ಸ್ ತಂಡಗಳು ಸೆಣಸಾಟ ನಡೆಸಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಕ್ಕನ್ ಚಾರ್ಜರ್ಸ್ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿ 82 ರನ್‌ಗಳಿಗೆ ಆಲ್ಔಟ್ ಆಗಿತ್ತು. ಇನ್ನು ಈ ಗುರಿಯನ್ನು ಬೆನ್ನತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 13.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿ 9 ವಿಕೆಟ್‌ಗಳ ಭರ್ಜರಿ ಸಾಧಿಸಿತ್ತು. ಹೀಗೆ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಳ್ಳೆಯ ಅನುಭವವನ್ನು ಹೊಂದಿದೆ. ಇನ್ನು ಈ ಕ್ರೀಡಾಂಗಣದಲ್ಲಿ ಎದುರಾಳಿಗಳನ್ನು ಅತೀ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ ದಾಖಲೆ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನಲ್ಲಿದೆ.

ಡಿವೈ ಪಾಟೀಲ್ ಕ್ರೀಡಾಂಗಣದ ಒಟ್ಟಾರೆ ಐಪಿಎಲ್ ಅಂಕಿಅಂಶ
ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣ 2008ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಹಾಗೂ 2010ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳ ಫೈನಲ್ ಪಂದ್ಯಕ್ಕೆ ವೇದಿಕೆಯಾಗಿದ್ದ ಇತಿಹಾಸವನ್ನೊಂದಿದೆ. ಹೀಗೆ ಈ ಎರಡು ಫೈನಲ್ ಪಂದ್ಯಗಳು ಸೇರಿದಂತೆ ಒಟ್ಟು 17 ಐಪಿಎಲ್ ಪಂದ್ಯಗಳು ಈ ಕ್ರೀಡಾಂಗಣದಲ್ಲಿ ನಡೆದಿದ್ದು, 7 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಜಯ ಸಾಧಿಸಿದ್ದರೆ, 10 ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡಗಳು ಜಯ ಸಾಧಿಸಿವೆ. ಇನ್ನು ಈ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಐಪಿಎಲ್ ತಂಡವೆಂದರೆ ಡೆಲ್ಲಿ ಡೇರ್‌ಡೆವಿಲ್ಸ್. ಪುಣೆ ವಾರಿಯರ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತ್ತು. ಇನ್ನು ಈ ಕ್ರೀಡಾಂಗಣದಲ್ಲಿ ಒಟ್ಟು 226 ರನ್ ಕಲೆಹಾಕಿರುವ ರಾಬಿನ್ ಉತ್ತಪ್ಪ ಅತಿಹೆಚ್ಚು ರನ್ ಬಾರಿಸಿರುವ ಆಟಗಾರ ಎನಿಸಿಕೊಂಡಿದ್ದರೆ, 4 ವಿಕೆಟ್ ಪಡೆದಿರುವ ಡೌಗ್ ಬೊಲಿಂಜರ್ ಈ ಕ್ರೀಡಾಂಗಣದಲ್ಲಿ ಹೆಚ್ಚು ವಿಕೆಟ್ ಪಡೆದ ಐಪಿಎಲ್ ಬೌಲರ್ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications