IPL 2022 ಕ್ವಾಲಿಫೈಯರ್ 2: RCB vs RR; ರಾಜಸ್ಥಾನ ಪರವಾಗಿವೆ ಅಂಕಿ-ಅಂಶಗಳು

ಐಪಿಎಲ್ 2022ರ ಕ್ವಾಲಿಫೈಯರ್ 2 ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಜಯ ಗಳಿಸಿದ ತಂಡ ಭಾನುವಾರ ಇದೇ ಮೈದಾನದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.
ಐಪಿಎಲ್ 2022ರ ಫೈನಲ್‌ಗೆ ಈಗಾಗಲೇ ಲಗ್ಗೆ ಇಟ್ಟಿರುವ ಗುಜರಾತ್ ಟೈಟನ್ಸ್ ಭಾನುವಾರಕ್ಕಾಗಿ ಕಾಯುತ್ತಿದೆ. ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಮಂಡಿಯೂರಿತ್ತು. ಈ ಸೋಲಿನ ಹಿನ್ನಲೆಯಲ್ಲಿ ರಾಜಸ್ಥಾನ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದ ಆರ್‌ಸಿಬಿ ತಂಡವನ್ನು ಎದುರಿಸುತ್ತಿದೆ. ಸದ್ಯದ ತಂಡಗಳ ಬಲಾಬಲ ಗಮನಿಸಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ಸಮನಾಗಿವೆ.

ಕ್ವಾಲಿಫೈಯರ್ 2ರಲ್ಲಿ ಆಡಿದ 11 ಪಂದ್ಯಗಳಲ್ಲಿ ಎಂಟನ್ನು ಗೆದ್ದಿದೆ
ಆದರೆ ಐಪಿಎಲ್ ಇತಿಹಾಸವನ್ನು ತಿರುವಿ ನೋಡಿದಾಗ, ಕ್ವಾಲಿಫೈಯರ್ ಅಂಕಿ-ಅಂಶಗಳು ರಾಜಸ್ಥಾನ ರಾಯಲ್ಸ್ ಪರವಾಗಿವೆ. ಇದು ಆರ್‌ಸಿಬಿ ತಂಡಕ್ಕೆ ಹಿನ್ನಡೆ ಎನ್ನಬಹುದು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಕ್ವಾಲಿಫೈಯರ್ 1ರಲ್ಲಿ ಸೋತಿರುವ ತಂಡವು ಕ್ವಾಲಿಫೈಯರ್ 2ರಲ್ಲಿ ಆಡಿದ 11 ಪಂದ್ಯಗಳಲ್ಲಿ ಎಂಟನ್ನು ಗೆದ್ದಿದೆ. ಅಂದರೆ ಗೆಲುವಿನ ಶೇಕಡಾವಾರು 72.73. ಈ ಅಂಕಿ-ಅಂಶಗಳು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬಲ ತಂದುಕೊಡಲಿದೆ.
ಐಪಿಎಲ್ 2022ರ 15ನೇ ಋತುವಿನಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಡಲಾಗುವ ಮೊದಲ ಪಂದ್ಯವಾಗಿದೆ. ಅಹಮದಾಬಾದ್ ಕೊನೆಯದಾಗಿ 2021ರಲ್ಲಿ ಟಿ20 ಪಂದ್ಯಗಳನ್ನು ಆಯೋಜಿಸಿತ್ತು. ಇಂಗ್ಲೆಂಡ್ ವಿರುದ್ಧ 5 ಟಿ20 ಪಂದ್ಯಗಳು ಮತ್ತು ಐಪಿಎಲ್ 2021ರಲ್ಲಿ ಐದು ಪಂದ್ಯಗಳು ನಡೆದಿದ್ದವು.

ಅಹಮದಾಬಾದ್ ಸ್ಟೇಡಿಯಂನಲ್ಲಿ ಟಾಸ್ ನಿರ್ಣಾಯಕ
ಈ ಸ್ಟೇಡಿಯಂನಲ್ಲಿ ದೊಡ್ಡ ಪಾತ್ರವನ್ನು ವಹಿಸುವ ಮತ್ತೊಂದು ನಿರ್ಣಾಯಕ ಅಂಶವೆಂದರೆ ಅದು ಟಾಸ್. 2021ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಟಿ20 ಪಂದ್ಯಗಳಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡಗಳು 170ಕ್ಕಿಂತ ಹೆಚ್ಚಿನ ಗುರಿಯನ್ನು ಹೊಂದಿದ್ದಾಗ ಒಂದೇ ಒಂದು ಪಂದ್ಯವನ್ನು ಗೆಲ್ಲಲು ವಿಫಲವಾಗಿವೆ.
170ಕ್ಕಿಂತ ಕಡಿಮೆ ಗುರಿಯನ್ನು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ತಂಡವು ಆರು ಸಂದರ್ಭಗಳಲ್ಲಿ ಬೆನ್ನಟ್ಟಿದೆ. 2021ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 170ಕ್ಕಿಂತ ಹೆಚ್ಚು ಗುರಿಯನ್ನು ಹೊಂದಿದ್ದ ನಾಲ್ಕು ನಿದರ್ಶನಗಳಿವೆ, ಆದರೆ ಅವುಗಳಲ್ಲಿ ಯಾವುದನ್ನೂ ಚೇಸ್ ಮಾಡಲಾಗಿಲ್ಲ.

ಬೆಂಗಳೂರು ತಂಡ ಏಳು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದೆ
ಐಪಿಎಲ್ 2022ರಲ್ಲಿ ರಾಜಸ್ಥಾನ್ ರಾಯಲ್ಸ್ ಮೂರು ಪಂದ್ಯಗಳಲ್ಲಿ ಎರಡನೇ ಬಾರಿ ಬ್ಯಾಟಿಂಗ್ ಮಾಡಿದೆ, ಅವುಗಳಲ್ಲಿ ಎರಡು ಬಾರಿ 170 ಪ್ಲಸ್ ಗುರಿಗಳನ್ನು ಬೆನ್ನಟ್ಟಿ ಗೆದ್ದಿದೆ. ಅವರು ಒಂದು ಪಂದ್ಯದಲ್ಲಿ ಸೋತರು. ಮತ್ತೊಂದೆಡೆ ಐಪಿಎಲ್ 2022ರಲ್ಲಿ ಚೇಸಿಂಗ್ ಮಾಡುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಳು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದೆ.
ಫೈನಲ್ ತಲುಪಲು ರಾಜಸ್ಥಾನ ರಾಯಲ್ಸ್‌ಗೆ ಎರಡನೇ ಅವಕಾಶ ಸಿಕ್ಕಿದ್ದು, ಅದನ್ನು ಈ ಬಾರಿ ಸದುಪಯೋಗಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಇನ್ನು ಲೀಗ್ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ತಲಾ ಒಂದೊಂದು ಬಾರಿ ಗೆದ್ದಿವೆ.

ರಾಜಸ್ಥಾನ್ ರಾಯಲ್ಸ್ ಮತ್ತು ಆರ್‌ಸಿಬಿ ಆಡುವ 11ರ ಬಳಗ
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ರವಿಚಂದ್ರನ್ ಅಶ್ವಿನ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ, ಒಬೆದ್ ಮೆಕಾಯ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications