ಐಪಿಎಲ್ 2022: ಸುದೀರ್ಘ ಕಾಲದ ನಂತರ ಮತ್ತೆ ಆರ್‌ಸಿಬಿ ತೆಕ್ಕೆಗೆ ಬೀಳಲಿದ್ದಾರಾ ಈ ಮೂವರು ಆಟಗಾರರು?

ಐಪಿಎಲ್ ಮಹಾ ಹರಾಜು ಪ್ರಕ್ರಿಯೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರನ್ನು ಘೋಷಿಸಿದ್ದು ರೀಟೈನ್ ಆಗಿರುವ ಆಟಗಾರರು ಯಾರು ಎಂಬುದು ಅಧಿಕೃತವಾಗಿದೆ. ಈಗ ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಯಾವ ತಂಡಗಳು ಯಾವೆಲ್ಲಾ ಆಟಗಾರರನ್ನು ಗುರಿಯಾಗಿರಿಸಿಕೊಂಡು ಹರಾನು ನಡೆಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇನ್ನು ಐಪಿಎಲ್ ಇತಿಹಾಸದಲ್ಲಿ ಈವರೆಗೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಭಾರೀ ಲೆಕ್ಕಾಚಾರದೊಂದಿಗೆ ರೀಟೆನ್ಶನ್ ಪ್ರಕ್ರಿಯೆ ಮುಗಿಸಿದೆ. ಮೂವರು ಆಟಗಾರರನ್ನು ಈ ರೀಟೆನ್ಶನ್‌ನಲ್ಲಿ ಉಳಿಸಿಕೊಂಡಿರುವ ಆರ್‌ಸಿಬಿ ನಡೆ ಈಗ ಕುತೂಹಲಕಾರಿಯಾಗಿದೆ. ವಿರಾಟ್ ಕೊಹ್ಲಿ ತಂಡದ ನಾಯಕತ್ವದಲ್ಲಿ ಮುಂದುವರಿಯುವುದಿಲ್ಲ ಎಂದು ಈಗಾಗಲೇ ಘೊಷಿಸಿದ್ದು ಅವರನ್ನು ನಿರೀಕ್ಷೆಯಂತೆಯೇ ಮೊದಲ ಆಯ್ಕೆಯ ಆಟಗಾರನಾಗಿ ಉಳಿಸಿಕೊಂಡಿದೆ. ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಆರ್‌ಸಿಬಿ ತಮಡದಲ್ಲಿ ಉಳಿದುಕೊಂಡಿರುವ ಉಳಿದ ಇಬ್ಬರು ಆಟಗಾರರಾಗಿದ್ದಾರೆ. ಈ ಮೂಲಕ ಕೇವಲ ಮೂವರು ಆಟಗಾರರನ್ನು ಮಾತ್ರವೇ ಆರ್‌ಸಿಬಿ ರೀಟೆನ್ಶನ್‌ನಲ್ಲಿ ಉಳಿಸಿಕೊಂಡಿದೆ.
ಹಾಗಾದರೆ ಮುಂದಿನ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ಯಾವೆಲ್ಲಾ ಆಟಗಾರರ ಮೇಲೆ ಕಣ್ಣಿಡಬಹುದು? ಈ ಲೆಕ್ಕಾಚಾರಗಳು ಈಗ ಅಭಿಮಾನಿಗಳ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಆರ್‌ಸಿಬಿ ತಂಡದಲ್ಲಿ ಐದು ವರ್ಷಗಳಿಗಿಂತ ಹಿಂದೆ ಆಡಿದ್ದ ಈ ಮೂವರು ಸ್ಟಾರ್ ಆಟಗಾರರು ಮತ್ತೊಮ್ಮೆ ಆರ್‌ಸಿಬಿ ತಂಡಕ್ಕೆ ಮರಳುವ ನಿರೀಕ್ಷೆಗಳಿದೆ. ಹಾಗಾದರೆ ಆ ಮೂವರು ಆಟಗಾರರು ಯಾರು? ಮುಂದೆ ಓದಿ..

ಭುವನೇಶ್ವರ್ ಕುಮಾರ್: 2009ರಲ್ಲಿ ಆರ್‌ಸಿಬಿ ಪರ ಕೊನೆಯ ಪಂದ್ಯ
ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ತಂಡದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಐಪಿಎಲ್‌ನಲ್ಲಿ ತಮ್ಮ ಪದಾರ್ಪಣೆ ಮಾಡಿದ್ದು ಆರ್‌ಸಿಬಿ ಮೂಲಕ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಆದರೆ ಆರ್‌ಸಿಬಿ ಪರವಾಗಿ ಐಪಿಎಲ್‌ನಲ್ಲಿ ಭುವನೇಶ್ವರ್ ಕುಮಾರ್ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಆದರೆ 2009ರಲ್ಲಿ ನಡೆದ ಚಾಂಪಿಯನ್ಸ್ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಆಡಿದ್ದರು ಭುವಿ. ನಂತರ 2011ರ ಆವೃತ್ತಿಗೆ ಪುಣೆ ವಾರಿಯರ್ಸ್ ಪಾಲಾದ ಭುವನೇಶ್ವರ್ ಕುಮಾರ್ ನಂತರ 2014ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪಾಲಾದರು. ಅಲ್ಲಿದ 2021ರ ಐಪಿಎಲ್ ಆವೃತ್ತಿಯವರೆಗೆ ಎಸ್‌ಆರ್‌ಹೆಚ್ ಪರವಾಗಿ ಆಡಿದ್ದ ಭುವಿ ಈ ಬಾರಿಯ ಟೂರ್ನಿಯಲ್ಲಿ ಹರಾಜುಪಟ್ಟಿಗೆ ಬಿದ್ದಿದ್ದಾರೆ. ಈಗ ಆರ್‌ಸಿಬಿ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನವನ್ನು ನಡೆಸಬಹುದು.

ಇಯಾನ್ ಮಾರ್ಗನ್
ಕಳೆದ ಎರಡು ಆವೃತ್ತಿಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದ ಇಯಾನ್ ಮಾರ್ಗನ್ ಅವರನ್ನು ಈ ಬಾರಿಯ ರೀಟೆನ್ಶನ್‌ನಲ್ಲಿ ಕೆಕೆಆರ್ ಫ್ರಾಂಚೈಸಿ ಹರಾಜಿಗೆ ಬಿಡುಗಡೆಗೊಳಿಸಿದೆ. ಕಳೆದ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನಿಡಿದ್ದ ಇಯಾನ್ ಮಾರ್ಗನ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಹಾಗಿದ್ದರೂ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಇಯಾನ್ ಮಾರ್ಗನ್ ಅದ್ಭುತ ಆಟಗಾರ ಎಂಬುದನ್ನು ಮರೆಯುವಂತಿಲ್ಲ. ಅವರು ಫಾರ್ಮ್‌ಗೆ ಮರಳಿದರೆ ಅದ್ಭುತ ಪ್ರದರ್ಶನವನ್ನು ನೀಡಬಲ್ಲರು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.
ಇಯಾನ್ ಮಾರ್ಗನ್ ಅವರ ಐಪಿಎಲ್‌ನ ಮೊದಲ ತಂಡ ಕೂಡ ಆರ್‌ಸಿಬಿ ಎಂಬುದು ಗಮನಾರ್ಹ ಸಂಗತಿ. 2010ರಲ್ಲಿ ಆರ್‌ಸಿಬಿ ಪರವಾಗಿ ಕಣಕ್ಕಿಳಿದಿದ್ದ ಅವರು ಕೆಲ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಕೂಡ ಪಡೆದುಕೊಂಡಿದ್ದರು. ಈಗ ಆರ್‌ಸಿಬಿ ತಂಡಕ್ಕೆ ನಾಯಕನ ಅಗತ್ಯವೂ ಇರುವ ಕಾರಣದಿಂದಾಗಿ ಆರ್‌ಸಿಬಿ ಈ ಆಟಗಾರನ ಮೇಲೆ ಕಣ್ಣಿಡಬಹುದು.

ದಿನೇಶ್ ಕಾರ್ತಿಕ್
ಒಂದೆಡೆ ಅನುಭವಿ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿದ್ದ ಎಬಿ ಡಿವಿಲಿಯರ್ಸ್ ಐಪಿಎಲ್‌ನಿಂದಲೂ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಅವರ ಸೇವೆ ಆರ್‌ಸಿಬಿ ಮುಂದಿನ ಆವೃತ್ತಿಯಿಂದ ದೊರೆಯುವುದಿಲ್ಲ. ಇನ್ನು ಮತ್ತೋರ್ವ ಯುವ ವಿಕೆಟ್ ಕೀಪರ್ ಶ್ರೀಕರ್ ಭರತ್ ಅವರನ್ನು ಆರ್‌ಸಿಬಿ ರೀಟೆನ್ಶನ್ ಪ್ರಕ್ರಿಯೆಯ ವೇಳೆ ಹರಾಜಿಗೆ ಬಿಟ್ಟುಕೊಟ್ಟಿದೆ. ಹೀಗಾಗಿ ಆರ್‌ಸಿಬಿ ತಂಡಕ್ಕೆ ಸಮರ್ಥ ವಿಕೆಟ್ ಕೀಪರ್ ಬ್ಯಾಟರ್‌ನ ಅಗತ್ಯವಿದೆ. ಈ ಸ್ಥಾನಕ್ಕೆ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರನ್ನು ಸಮರ್ಥ ಆಟಗಾರ ಎಂದು ಪರಿಗಣಿಸಿದರೆ ಅಚ್ಚರಿಯಿಲ್ಲ.
ದಿನೇಶ್ ಕಾರ್ತಿಕ್ 2015ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದರು. ಆದರೆ ಆ ಆವೃತ್ತಿಯಲ್ಲಿ ಡಿಕೆ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಈಗ ಅವರ ಅನುಭವ ಹಾಗೂ ಫಿನಿಷಿಂಗ್ ಕೌಶಲ್ಯವನ್ನು ಪರಿಗಣಿಸಿ ಮತ್ತೊಮ್ಮೆ ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. 213 ಐಪಿಎಲ್ ಪಂದ್ಯಗಳನ್ನು ಆಡಿರುವ ದಿನೇಶ್ ಕಾರ್ತಿಕ್ 4,046 ರನ್‌ಗಳಿಸಿದ್ದಾರೆ. ಇನ್ನು 115 ಕ್ಯಾಚ್ ಹಾಗೂ 32 ಸ್ಟಂಪಿಂಗ್ ದಿನೇಶ್ ಕಾರ್ತಿಕ್ ಅವರ ಹೆಸರಿನಲ್ಲಿದೆ. ಅಲ್ಲದೆ ನಾಯಕತ್ವಕ್ಕೂ ದಿನೇಶ್ ಕಾರ್ತಿಕ್ ಉತ್ತಮ ಅಭ್ಯರ್ಥಿಯಾಗಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications