IPL 2022: ಹಿಂದೆಂದೂ ಕಂಡಿರದ ರೀತಿ ಡಕ್ಔಟ್ ಆದ ಆಟಗಾರರು; ಹೆಚ್ಚು ಬಾರಿ ಡಕ್ಔಟ್ ಆಗಿದ್ಯಾರು?

ವಿಶ್ವದ ಅತಿದೊಡ್ಡ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿ ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭಗೊಂಡು ಮೇ ತಿಂಗಳಾಂತ್ಯದಲ್ಲಿ ಮುಕ್ತಾಯಗೊಂಡಿತು. ಈ ಬಾರಿ ನೂತನ ತಂಡಗಳಾದ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೇರ್ಪಡೆಗೊಂಡ ಕಾರಣ ಟೂರ್ನಿಯಲ್ಲಿ ಬರೋಬ್ಬರಿ 74 ಪಂದ್ಯಗಳು ನಡೆದಿದ್ದು, ಮೇ 29ರಂದು ನರೇಂದ್ರ ಮೋದಿ ಅಂತಾರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್‍ಗಳ ಭರ್ಜರಿ ಗೆಲುವು ಕಾಣುವುದರ ಮೂಲಕ ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲೇ ಟ್ರೋಫಿಯನ್ನು ಎತ್ತಿಹಿಡಿಯಿತು.
ಹೀಗೆ ಇತ್ತಂಡಗಳ ನಡುವಿನ ಈ ಮಹಾಕಾಳಗ ಮುಗಿದ ನಂತರ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೈಲಿಗಲ್ಲುಗಳನ್ನು ನೆಟ್ಟ ಹಲವಾರು ಆಟಗಾರರನ್ನು ಗುರುತಿಸಿ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಹೀಗೆ ಹಲವಾರು ಆಟಗಾರರು ತಾವು ನೀಡಿದ ಉತ್ತಮ ಪ್ರದರ್ಶನಕ್ಕೆ ಮನ್ನಣೆಯನ್ನು ಪಡೆದುಕೊಂಡು ಗುರುತಿಸಿಕೊಂಡರೆ, ಮತ್ತಷ್ಟು ಆಟಗಾರರು ಕಳಪೆ ಪ್ರದರ್ಶನ ನೀಡಿ ಬೇಡವಾದ ಕೆಟ್ಟ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಅಂತಹ ಕೆಟ್ಟ ದಾಖಲೆಗಳಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ಆಟಗಾರರು ಎಂಬುದು ಕೂಡ ಒಂದು. ಇನ್ನು ಆಟಗಾರರು ಮಾತ್ರವಲ್ಲದೇ ಡಕ್ ಔಟ್ ವಿಚಾರವಾಗಿ ಈ ಬಾರಿಯ ಐಪಿಎಲ್ ಟೂರ್ನಿ ಕೂಡ ಕೆಟ್ಟ ಹೆಸರನ್ನು ಸಂಪಾದಿಸಿದೆ. ಅಷ್ಟಕ್ಕೂ ಡಕ್ ಔಟ್ ವಿಚಾರವಾಗಿ ಈ ಬಾರಿಯ ಟೂರ್ನಿಗೆ ಸಿಕ್ಕ ಆ ಕೆಟ್ಟ ಹೆಸರೇನು ಮತ್ತು ಟೂರ್ನಿಯಲ್ಲಿ ದಾಖಲಾದ ಡಕ್ ಔಟ್‌ಗಳ ಸಂಖ್ಯೆ ಮತ್ತು ಹೆಚ್ಚು ಬಾರಿ ಡಕ್ ಔಟ್ ಆದ ಆಟಗಾರರ ಕುರಿತ ಮಾಹಿತಿ ಮುಂದೆ ಇದೆ ಓದಿ.

ಕೆಟ್ಟ ದಾಖಲೆಗೆ ಪಾತ್ರವಾದ ಟೂರ್ನಿ
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅತಿ ಹೆಚ್ಚು ಬೌಂಡರಿ, ಅತಿ ಹೆಚ್ಚು ಸಿಕ್ಸರ್ ಹಾಗೂ ಅತಿ ಹೆಚ್ಚು ಶತಕಗಳಿಗೆ ಸಾಕ್ಷಿಯಾಗಿದ್ದು ಮಾತ್ರವಲ್ಲದೇ ಐಪಿಎಲ್ ಇತಿಹಾಸದಲ್ಲಿಯೇ ಹಿಂದೆಂದೂ ಕಂಡರಿಯದ ಡಕ್ ಔಟ್ ಕೆಟ್ಟ ದಾಖಲೆಗೂ ಸಾಕ್ಷಿಯಾಗಿದೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಬರೋಬ್ಬರಿ 107 ಡಕ್ ಔಟ್‌ಗಳಾಗಿದ್ದು, ಇಷ್ಟು ಸಂಖ್ಯೆಯ ಡಕ್ ಔಟ್ ಹಿಂದಿನ ಯಾವುದೇ ಆವೃತ್ತಿಯಲ್ಲಿಯೂ ಆಗಿರಲಿಲ್ಲ.

ಟೂರ್ನಿಯಲ್ಲಿ ಹೆಚ್ಚು ಬಾರಿ ಡಕ್ ಔಟ್ ಆದ ಐವರು ಆಟಗಾರರಿವರು
• ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 16 ಪಂದ್ಯಗಳನ್ನಾಡಿದ ವಿರಾಟ್ ಕೊಹ್ಲಿ 3 ಬಾರಿ ಡಕ್ ಔಟ್ ಆಗಿದ್ದಾರೆ ಹಾಗೂ ಈ ಮೂರೂ ಡಕ್ ಔಟ್ ಕೂಡ ಗೋಲ್ಡನ್ ಡಕ್ ಔಟ್ ಆಗಿರುವುದು ವಿಪರ್ಯಾಸ. ಈ ಮೂಲಕ ಈ ಬಾರಿ ಅತಿ ಹೆಚ್ಚು ಡಕ್ ಔಟ್ ಆದ ಆಟಗಾರ ಎಂಬ ಕೆಟ್ಟ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ.
• 15 ಪಂದ್ಯಗಳನ್ನಾಡಿದ ಕೆಎಲ್ ರಾಹುಲ್ ಕೂಡ 3 ಬಾರಿ ಡಕ್ ಔಟ್ ಆಗಿದ್ದು, 2 ಗೋಲ್ಡನ್ ಡಕ್ ಔಟ್ ಮತ್ತು 1 ಬಾರಿ ಡೈಮಂಡ್ ಡಕ್ ಔಟ್ ಆಗಿದ್ದಾರೆ.
• 10 ಪಂದ್ಯಗಳನ್ನಾಡಿದ ಸುನೀಲ್ ನರೇನ್ ಕೂಡ 2 ಬಾರಿ ಗೋಲ್ಡನ್ ಡಕೌಟ್ ಮತ್ತು 1 ಬಾರಿ ಡೈಮಂಡ್ ಡಕ್ ಔಟ್ ಆಗುವುದರ ಮೂಲಕ ಒಟ್ಟು 3 ಬಾರಿ ಡಕ್ ಔಟ್ ಆಗಿದ್ದಾರೆ.
• ಇನ್ನುಳಿದಂತೆ ರಶೀದ್ ಖಾನ್ ಮತ್ತು ಟಿಮ್ ಸೌದಿ ಕೂಡ 3 ಬಾರಿ ಡಕ್ ಔಟ್ ಆಗಿದ್ದಾರೆ.

ಗೋಲ್ಡನ್ ಮತ್ತು ಡೈಮಂಡ್ ಡಕ್ ಔಟ್ ಎಂದರೇನು?
ಗೋಲ್ಡನ್ ಡಕ್ ಔಟ್ ಎಂದರೆ ಆಟಗಾರ ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಔಟ್ ಆಗುವುದನ್ನು ಗೋಲ್ಡನ್ ಡಕ್ ಔಟ್ ಎನ್ನುತ್ತಾರೆ.
ಡೈಮಂಡ್ ಡಕ್ ಔಟ್ ಎಂದರೆ ಆಟಗಾರ ಯಾವುದೇ ಎಸೆತವನ್ನು ಎದುರಿಸದೇ ಔಟ್ ಆಗುವುದಕ್ಕೆ ಡೈಮಂಡ್ ಡಕ್ ಔಟ್ ಎನ್ನಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications