ಐಪಿಎಲ್ 2021ರ ಆವೃತ್ತಿಯಲ್ಲಿ ಭಾರೀ ನಿರೀಕ್ಷೆ ಮೂಡಿಸಿ ಫ್ಲಾಪ್ ಶೋ ನೀಡಿದ ಐದು ಸ್ಟಾರ್ ಕ್ರಿಕೆಟಿಗರು!

ಐಪಿಎಲ್ ಟೂರ್ನಿಯ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿರುವ ಸಂದರ್ಭದಲ್ಲಿ ಎಲ್ಲಾ ತಂಡಗಳು ಕೂಡ ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿದೆ. ಈ ಬಾರಿ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆದಿದ್ದು ಪ್ರತಿ ತಂಡಗಳು ಕೂಡ ಈ ಬಾರಿ ಕಳೆದ ಬಾರಿಗಿಂತ ಬಹುತೇಕ ಭಿನ್ನ ಆಟಗಾರರ ಬಳಗದೊಂದಿಗೆ ಕಣಕ್ಕಿಳಿಯುತ್ತಿದೆ. ಆಟಗಾರರು ಕೂಡ ತಮ್ಮ ತಮ್ಮ ತಂಡಗಳ ಪರವಾಗಿ ಉತ್ತಮ ಪ್ರದರ್ಶನ ನೀಡಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ವಿಶ್ವದ ಪ್ರಖ್ಯಾತ ಕ್ರಿಕೆಟ್ ಟೂರ್ನಿಯಾಗಿರುವ ಐಪಿಎಲ್‌ನಲ್ಲಿ ಕ್ರಿಕೆಟ್ ಆಡುವ ಎಲ್ಲಾ ರಾಷ್ಟ್ರಗಳ ಪ್ರಮುಖ ಆಟಗಾರರು ಭಾಗಿಯಾಗುತ್ತಿದ್ದು ಟೂರ್ನಿಯ ಮೆರುಗು ಹೆಚ್ಚಿಸಿದೆ. ಅದ್ದೂರಿ ವೇದಿಕೆಯಲ್ಲಿ ಅದ್ಭುತ ಪ್ರದರ್ಶನ ನೀಡಬೇಕು ಎಂಬ ಗುರಿಯನ್ನು ಎಲ್ಲಾ ಆಟಗಾರರು ಕೂಡ ಹೊಂದಿರುತ್ತಾರೆ. ಆದರೆ ಕೆಲ ಆಟಗಾರರು ಐಪಿಎಲ್ ಟೂರ್ನಿಗೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿ ಟೂರ್ನಿಯಲ್ಲಿ ವೈಫಲ್ಯವನ್ನು ಅನುಭವಿಸಿದ್ದಾರೆ. ಹೀಗೆ ಈ ಹಿಂದಿನ ಐಪಿಎಲ್ ಆವೃತ್ತಿ ಐಪಿಎಲ್ 2021ರಲ್ಲಿ ಭಾರೀ ನಿರೀಕ್ಷೆ ಮೂಡಿಸಿ ಫ್ಲಾಪ್ ಶೋ ನೀಡಿದ್ದ ಐವರು ಸ್ಟಾರ್ ಆಟಗಾರರ ಪಟ್ಟಿ ಇಲ್ಲಿದೆ.

ಟಾಪ್ 5. ಸುರೇಶ್ ರೈನಾ
ಅಗ್ರ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನಕ್ಕೆ ಹೆಸರಾಗಿದ್ದ ಸುರೇಶ್ ರೈನಾ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಈ ಹಿಂದೆ ಆಡಿದ್ದ ಎಲ್ಲಾ ಟೂರ್ನಿಯಲ್ಲಿಯೂ ಅಮೋಘ ಆಟವನ್ನು ಪ್ರದರ್ಶಿಸಿ ಅನೇಕ ಐಪಿಎಲ್ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದ್ದರು ಸುರೇಶ್ ರೈನಾ. ಈ ಕಾರಣದಿಂದಾಗಿಯೇ ಮಿಸ್ಟರ್ ಐಪಿಎಲ್ ಎಂಬ ಹೆಗ್ಗಳಿಕೆಗೂ ರೈನಾ ಪಾತ್ರವಾಗಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ಸುರೇಶ್ ರೈನಾ ಒಟ್ಟು 12 ಪಂದ್ಯಗಳಲ್ಲಿ ಆಡಿದ್ದು ಕೇವಲ 160 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ. ಕಳಪೆ ಪ್ರದರ್ಶನದ ಕಾರಣದಿಂದಾಗಿ ಟೂರ್ನಿಯ ಅಂತಿಮ ಹಂತದ ಪಂದ್ಯಗಳಿಂದ ರೈನಾ ಆಡುವ ಬಳಗದಿಂದಲೂ ಹೊರಬಿದ್ದಿದ್ದರು. ನಂತರ ಮೆಗಾ ಹರಾಜಿಗೆ ಮುನ್ನ ಹರಾಜು ಪಟ್ಟಿಗೆ ಬಿಡುಗಡೆಯಾಗಿದ್ದ ರೈನಾ ಈ ಬಾರಿಯ ಹರಾಜಿನಲ್ಲಿ ಯಾವುದೇ ತಂಡ ಖರೀದಿಸದ ಕಾರಣ ಹರಾಜಾಗದೆ ಉಳಿದುಕೊಂಡಿದ್ದಾರೆ.

ಟಾಪ್ 4. ಡೇನಿಯನ್ ಕ್ರಿಶ್ಚಿಯನ್
ಆರ್‌ಸಿಬಿ ತಂಡ ಕಳೆದ ಆವೃತ್ತಿಯಲ್ಲಿ ಡೇನಿಯನ್ ಕ್ರಿಶ್ಚಿಯನ್ ಅವರನ್ನು ಭಾರೀ ನಿರೀಕ್ಷೆಯೊಂದಿಗೆ ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಆದರೆ ತಂಡಕ್ಕೆ ಅಗತ್ಯವಾಗಿದ್ದಾಗ ನಿರೀಕ್ಷಿತ ಪ್ರದರ್ಶನ ನೀಡಲು ಡೇನಿಯಲ್ ಕ್ರಿಶ್ಚಿಯನ್ ಸಂಪೂರ್ಣವಾಗಿ ವಿಫಲವಾದರು. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರವಾಗಿ 9 ಪಂದ್ಯಗಳಲ್ಲಿ ಆಡಿದ್ದ ಡೇನ್ ಕ್ರಿಶ್ಚಿಯನ್ ಗಳಿಸಿದ್ದು ಕೇವಲ 14 ರನ್ ಮಾತ್ರ. ಒಮ್ಮೆಯೂ ಎರಡಂಕಿಯನ್ನು ದಾಟಲು ವಿಫಲವಾದ ಕ್ರಿಶ್ಚಿಯನ್ ಬೌಲಿಂಗ್‌ನಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಕೇವಲ 4 ವಿಕೆಟ್‌ಗಳನ್ನು ಮಾತ್ರವೇ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಟಾಪ್ 3. ಹಾರ್ದಿಕ್ ಪಾಂಡ್ಯ
ಐಪಿಎಲ್‌ನಲ್ಲಿ ಪ್ರತಿ ಬಾರಿಯೂ ಅದ್ಭುತ ಪ್ರದರ್ಶನದ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾಗುತ್ತಿದ್ದ ಹಾರ್ದಿಕ್ ಪಾಂಡ್ಯ ಕಳೆದ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಅಚ್ಚರಿ ಮೂಡಿಸಿದ್ದರು. ಸಾಧಾರಣ ಎಸೆತಗಳಿಗೂ ವಿಕೆಟ್ ಕಳೆದುಕೊಳ್ಳುವ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಹಿನ್ನಡೆಗೂ ಕಾರಣವಾದರು. ಗಾಯದ ಕಾರಣ ಬೌಲಿಂಗ್ ಮಾಡುವಲ್ಲಿ ವಿಫಲವಾಗಿದ್ದ ಹಾರ್ದಿಕ್ ಸ್ಪೆಶಲಿಸ್ಟ್ ಬ್ಯಾಟರ್ ಆಗಿ ಕಣಕ್ಕಿಳಿದಿದ್ದರು. ಆದರೆ ಟೂರ್ನಿಯಲ್ಲಿ ಒಟ್ಟಾರೆ ಹಾರ್ದಿಕ್ ಆಡಿದ 12 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 127 ಮಾತ್ರ.

ಟಾಪ್ 2. ಇಯಾನ್ ಮಾರ್ಗನ್
2021ರ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ದ್ವಿತಿಯಾರ್ಧದಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್ ಹಂತಕ್ಕೆ ತಲುಪಿ ರನ್ನರ್‌ಅಪ್ ತಂಡವಾಗಿ ಹೊರಹೊಮ್ಮಿತ್ತು. ಆದರೆ ತಂಡದ ನಾಯಕನಾಗಿದ್ದ ಇಯಾನ್ ಮಾರ್ಗನ್ ಮಾತ್ರ ಅತ್ಯಂತ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದರು. ಕಳೆದ ಆವೃತ್ತಿಯಲ್ಲಿ ಮಾರ್ಗನ್ ಆಡಿದ್ದ 17 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 133 ರನ್ ಮಾತ್ರ. ಟೂರ್ನಿಯುದ್ದಕ್ಕೂ ಮಾರ್ಗನ್ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಯಾವುದೇ ತಂಡ ಕೂಡ ಇಂಗ್ಲೆಂಡ್ ತಂಡದ ಸೀಮಿತ ಓವರ್‌ಗಳ ನಾಯಕನನ್ನು ಖರೀದಿಸುವ ಧೈರ್ಯ ಮಾಡಿಲ್ಲ. ಹೀಗಾಗಿ ಹರಾಜಾಗದೆ ಉಳಿದುಕೊಂಡಿದ್ದಾರೆ ಇಯಾನ್ ಮಾರ್ಗನ್.

ಟಾಪ್ 1. ನಿಕೋಲಸ್ ಪೂರನ್
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಪ್ರತಿಭಾವಂತ ಆಟಗಾರ ನಿಕೋಲಸ್ ಪೂರನ್ ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಪರವಾಗಿ ಆಡಿದ್ದು ಐಪಿಎಲ್ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪ್ರಮುಖ ಆಟಗಾರ ಎನಿಸಿದ್ದಾರೆ. ಕ್ರೀಸ್‌ನಲ್ಲಿ ಕೆಲ ನಿಮಿಷಗಳ ಕಾಲ ನಿಲ್ಲಲು ಕೂಡ ಪೂರನ್ ವಿಫಲರಾಗಿದ್ದು ವಿಪರ್ಯಾಸ. ಆಡಿದ 12 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶೂನ್ಯ ಸಂಪಾದನೆ ಮಾಡಿದ್ದು ಪೂರನ್ ಕಳಪೆ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಪೂರನ್ ಕಳಪೆ ಪ್ರದರ್ಶನ ಪಂಜಾಬ್ ಕಿಂಗ್ಸ್ ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದು ತಂಡ ಪ್ಲೇಆಫ್ ಹಂತಕ್ಕೇರುವಲ್ಲಿಯೂ ವಿಫಲವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications