ಐಪಿಎಲ್: ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಧೋನಿ; ಐಪಿಎಲ್‌ನಿಂದ ದೂರವಿರಲು ಇದು ಕಾರಣ ಎಂದ ಫ್ಯಾನ್ಸ್!

ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ನಾಯಕರಲ್ಲಿ ಓರ್ವರಾದ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಾಯಕ ಎಂ ಎಸ್ ಧೋನಿ ಮಾರ್ಚ್ 24ರ ಗುರುವಾರದಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತ್ಯಜಿಸಿದ್ದಾರೆ. ಹೌದು, ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಾ ಬಂದಿದ್ದ ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದಿರುವ ವಿಷಯವನ್ನು ಸ್ವತಃ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಧೋನಿ ನಂತರ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಸಿದೆ. ಇನ್ನು ಎಂಎಸ್ ಧೋನಿ ಈ ರೀತಿ ದಿಢೀರನೆ ನಾಯಕತ್ವ ತ್ಯಜಿಸಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ದೊಡ್ಡ ಮಟ್ಟದ ಸುದ್ದಿಯಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಕುರಿತಾಗಿ ಚರ್ಚೆಗಳನ್ನು ಆರಂಬಿಸಿದ್ದಾರೆ.
ಕೆಲವರು ಎಂಎಸ್ ಧೋನಿ ನಾಯಕತ್ವ ತ್ಯಜಿಸಿರುವುದರ ಕುರಿತು ಬೇಸರ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಎಂಎಸ್ ಧೋನಿ ಐಪಿಎಲ್‌ನಿಂದ ನಿವೃತ್ತಿ ತೆಗೆದುಕೊಳ್ಳುವ ಮುನ್ನ ನೂತನ ನಾಯಕನನ್ನು ತಯಾರು ಮಾಡುವ ಕೆಲಸವನ್ನು ಆರಂಭಿಸಿದ್ದಾರೆ ಹಾಗೂ ಇದೊಂದು ಉತ್ತಮ ನಿರ್ಧಾರ ಎಂದೂ ಸಹ ತಮ್ಮ ತಮ್ಮ ವಿಭಿನ್ನ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಎಂಎಸ್ ಧೋನಿಗೋಸ್ಕರವೇ ಚೆನ್ನೈ ಸೂಪರ್ ಕಿಂಗ್ಸ್ ಬೆಂಬಲಿಸುತ್ತಿದ್ದ ಹಲವಾರು ಅಭಿಮಾನಿಗಳು ಧೋನಿ ನಾಯಕತ್ವ ತ್ಯಜಿಸಿದ ಸುದ್ದಿ ಕೇಳಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದು, ತಮ್ಮ ನೆಚ್ಚಿನ ನಾಯಕ ನಾಯಕತ್ವ ತ್ಯಜಿಸಿದ್ದರ ಕುರಿತಾಗಿ ಈ ಕೆಳಕಂಡಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಐಪಿಎಲ್‌ನಿಂದ ದೂರ ಸರಿಯಲು ಇದು ಮತ್ತೊಂದು ಕಾರಣ
ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ತ್ಯಜಿಸಿದ ಸುದ್ದಿಯನ್ನು ಕೇಳಿ ತೀವ್ರ ಬೇಸರಕ್ಕೆ ಒಳಗಾಗಿರುವ ಅಭಿಮಾನಿಯೊಬ್ಬರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹಿಂದೆ ಸರಿಯಲು ನನಗಿದು ಮತ್ತೊಂದು ಕಾರಣ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಎಂಎಸ್ ಧೋನಿ ನಾಯಕನಾಗಿರದೇ ಕೇವಲ ಓರ್ವ ಆಟಗಾರನಾಗಿ ಕಣಕ್ಕಿಳಿಯುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ನಾನು ವೀಕ್ಷಿಸುವುದಿಲ್ಲ ಎಂದು ಈ ಅಭಿಮಾನಿ ಬೇಸರ ಹೊರಹಾಕಿದ್ದಾರೆ.

ನಾವು ಇದಕ್ಕೆ ಸಿದ್ಧರಿರಲಿಲ್ಲ
ಎಂ ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದ ಸುದ್ದಿ ಕೇಳಿ ಟ್ವಿಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಮತ್ತೋರ್ವ ಅಭಿಮಾನಿ ತಮ್ಮ ಬೇಸರ ಹೊರಹಾಕಿದ್ದಾರೆ. ಎಂಎಸ್ ಧೋನಿಯವರ ಈ ನಡೆಗೆ ನಾವು ಸಿದ್ಧರಾಗಿರಲೇ ಇಲ್ಲ ಎಂದು ಟ್ವೀಟ್ ಮಾಡಿರುವ ಈ ಅಭಿಮಾನಿ ಧೋನಿ ನಾಯಕತ್ವ ತ್ಯಜಿಸಿದ್ದು ಅನಿರೀಕ್ಷಿತ ಎಂದಿದ್ದಾರೆ.

ಐಪಿಎಲ್ ಮೇಲಿನ ಆಸಕ್ತಿಯೇ ಹೋಯಿತು
ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ತ್ಯಜಿಸಿರುವುದರ ಕುರಿತು ಟ್ವೀಟ್ ಮಾಡಿರುವ ಮತ್ತೋರ್ವ ಅಭಿಮಾನಿ 2019ರ ವಿಶ್ವಕಪ್ ನಂತರ ನಾನು ಐಪಿಎಲ್ ಹೊರತುಪಡಿಸಿ ಉಳಿದ ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿದ್ದೆ ಹಾಗೂ ಈಗ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೇಲಿನ ಆಸಕ್ತಿಯನ್ನೂ ಕೂಡ ಕಳೆದುಕೊಂಡೆ ಎಂದು ಬರೆದುಕೊಂಡಿದ್ದಾರೆ.

ಟ್ರೋಫಿಯೊಂದಿಗೆ ಆರಂಭ, ಟ್ರೋಫಿಯೊಂದಿಗೆ ಅಂತ್ಯ
ಎಂಎಸ್ ಧೋನಿ ಅಭಿಮಾನಿ ಬಳಗದ ಟ್ವಿಟರ್ ಖಾತೆಯಾದ ಧೋನಿ ಟ್ರೆಂಡ್ಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದಿರುವುದರ ಕುರಿತು ಟ್ವೀಟ್ ಮಾಡಿದ್ದು, ಎಂಎಸ್ ಧೋನಿ 2007ರಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪರ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಮೂಲಕ ತಮ್ಮ ನಾಯಕತ್ವದ ಪಯಣವನ್ನು ಆರಂಭಿಸಿದರು ಹಾಗೂ ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಮೂಲಕ ನಾಯಕತ್ವವನ್ನು ತ್ಯಜಿಸಿದರು ಎಂದು ಬರೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications