
ಇದೇ ಶನಿವಾರದಿಂದ ( ಮಾರ್ಚ್ 26 ) ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳುತ್ತಿದ್ದು, ಟೂರ್ನಿಯ ಪ್ರಥಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಎಂಎಸ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಎತ್ತಿಹಿಡಿಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಎಂಎಸ್ ಧೋನಿ ಅಭಿಮಾನಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇಂದು ಹೊರಡಿಸಿದ ಒಂದು ಘೋಷಣೆ ದೊಡ್ಡ ಮಟ್ಟದ ನಿರಾಸೆಯನ್ನು ಉಂಟು ಮಾಡಿದೆ. ಹೌದು, ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ತ್ಯಜಿಸಿದ್ದು, ರವೀಂದ್ರ ಜಡೇಜಾ ನೂತನ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಘೋಷಣೆಯನ್ನು ಚೆನ್ನೈ ಫ್ರಾಂಚೈಸಿ ಮಾಡಿತು.
ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಟ್ಟು ನಾಲ್ಕು ಐಪಿಎಲ್ ಟ್ರೋಫಿಗಳನ್ನು ತಂದುಕೊಟ್ಟಿರುವ ಯಶಸ್ವಿ ನಾಯಕ ಎನಿಸಿಕೊಂಡಿದ್ದ ಎಂಎಸ್ ಧೋನಿ ನಾಯಕತ್ವ ತ್ಯಜಿಸಿದ್ದನ್ನು ಕಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಸರವನ್ನು ಹೊರಹಾಕಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಕ್ರಿಕೆಟಿಗರೂ ಸಹ ಎಂಎಸ್ ಧೋನಿ ನಾಯಕತ್ವ ತ್ಯಜಿಸಿರುವುದರ ಕುರಿತು ಪ್ರತಿಕ್ರಿಯಿಸಿದ್ದು, ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ಗಳನ್ನು ಮಾಡಿ ಧೋನಿಯ ನಾಯಕತ್ವದ ಸೇವೆಗೆ ಧನ್ಯವಾದ ತಿಳಿಸಿದ್ದಾರೆ. ಈ ಕುರಿತಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸಹ ಪ್ರತಿಕ್ರಿಯಿಸಿದ್ದು, ಹಳದಿ ಜೆರ್ಸಿಯಲ್ಲಿನ ಲೆಜೆಂಡರಿ ನಾಯಕತ್ವ ಅಂತ್ಯಗೊಂಡಿದ್ದು, ಅಭಿಮಾನಿಗಳು ಎಂದೂ ಮರೆಯಲಾಗದ ಅಧ್ಯಾಯ ಇದಾಗಿದೆ ಎಂದು ಬರೆದುಕೊಂಡಿದ್ದಾರೆ.