ಗುರುವಾರ, ಏಪ್ರಿಲ್ 6ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಐಪಿಎಲ್‌ನ 9ನೇ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ನಿತೀಶ್ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಮುಖಾಮುಖಿಯಾಗುತ್ತಿವೆ.
ಆರ್‌ಸಿಬಿ vs ಕೆಕೆಆರ್ ನಡುವಿನ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ದೊಡ್ಡ ಭವಿಷ್ಯವನ್ನು ನುಡಿದಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂದು ತಿಳಿಸಿದ್ದಾರೆ.

ಕೋವಿಡ್-19 ಕಾರಣದಿಂದಾಗಿ ಮೂರು ವರ್ಷಗಳ ನಂತರ ಕೋಲ್ಕತ್ತಾದಲ್ಲಿ ಐಪಿಎಲ್ ಪಂದ್ಯವನ್ನು ಆಡಲಾಗುತ್ತಿದ್ದು, ಹೀಗಾಗಿ ಕೆಕೆಆರ್ ತಂಡ ಮೂರು ಐಪಿಎಲ್ ಆವೃತ್ತಿಗಳ ಬಳಿಕ ಮೊದಲ ತವರಿನ ಪಂದ್ಯವನ್ನು ಆಡಲು ಸಜ್ಜಾಗಿದೆ.
ಈ ಪಂದ್ಯದಲ್ಲಿ ನಿತೀಶ್ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಫಾಫ್ ಡು ಪ್ಲೆಸಿಸ್ ಪಡೆ ಗೆಲುವು ಸಾಧಿಸಲಿದೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಆರ್‌ಸಿಬಿ ತಂಡ ಐಪಿಎಲ್‌ನ ತಮ್ಮ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಹೆಚ್ಚು ಆತ್ಮವಿಶ್ವಾಸದಲ್ಲಿದೆ.
ಆರ್‌ಸಿಬಿ ತಂಡ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಬಲಾಢ್ಯವಾಗಿದೆ. ಮತ್ತೊಂದೆಡೆ, ಆತಿಥೇಯ ಕೆಕೆಆರ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋತಿರುವ ಕಾರಣ, ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ತಂಡದಲ್ಲಿ ಸ್ಟಾರ್ ಆಟಗಾರರಿಲ್ಲದಿರುವುದು ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ.

"ನನ್ನ ಪ್ರಕಾರ, ಇಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ತಂಡ ಗೆಲ್ಲಲಿದೆ. ಅಂದರೆ, ಆರ್‌ಸಿಬಿಗೆ ಸತತ ಎರಡನೇ ಗೆಲುವು ಮತ್ತು ಕೆಕೆಆರ್ ತಂಡಕ್ಕೆ ಸತತ ಎರಡನೇ ಸೋಲಾಗಲಿದೆ. ಅದು ಆಗುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದರು.
"ನನ್ನ ಎರಡನೇ ಭವಿಷ್ಯ ಏನೆಂದರೆ, ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ತಲಾ ಮೂರಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆಯುತ್ತಾರೆ. ನಿಮಗೆ ಬೇಕಾದ ಇತರ ವೇಗದ ಬೌಲರ್‌ನ ಹೆಸರನ್ನು ನೀವು ಸೇರಿಸಬಹುದು. ಇಲ್ಲಿ ಸ್ಪಿನ್ನರ್‌ಗಳಿಗಿಂತ ವೇಗದ ಬೌಲರ್‌ಗಳು ಹೆಚ್ಚು ಯಶಸ್ವಿಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ ಆಕಾಶವಾಣಿಯಲ್ಲಿ ಹೇಳಿದ್ದಾರೆ.

ರಸೆಲ್ ಮತ್ತು ಮ್ಯಾಕ್ಸ್‌ವೆಲ್ ಐದಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸುತ್ತಾರೆ
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿದೆ. ಟಿ20 ಚುಟುಕು ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ಇಂತಹ ಮೈದಾನದಲ್ಲಿ ಆಡಲು ಹೆಚ್ಚು ಆನಂದಿಸುತ್ತಾರೆ. ಪವರ್‌ಪ್ಲೇ ಸಮಯದಲ್ಲಿ ಹೆಚ್ಚಿನ ಬೌಂಡರಿಗಳು ಹರಿದು ಬರಲಿವೆ. ಎರಡು ತಂಡಗಳ ಬ್ಯಾಟಿಂಗ್ ಲೈನ್-ಅಪ್ ಗಮನಿಸಿದರೆ, ಎರಡೂ ಇನ್ನಿಂಗ್ಸ್‌ನ ಮೊದಲ ಆರು ಓವರ್‌ಗಳಲ್ಲಿ ಬ್ಯಾಟರ್‌ಗಳು ಪ್ರಾಬಲ್ಯ ಸಾಧಿಸುತ್ತಾರೆ. ಹೆಚ್ಚಿನ ಸ್ಕೋರ್‌ಗೆ ಈ ಪಂದ್ಯ ಸಾಕ್ಷಿಯಾಗಲಿದೆ ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
"ಪವರ್‌ಪ್ಲೇ ಮೊದಲ ಆರು ಓವರ್‌ಗಳಲ್ಲಿ ಎರಡೂ ತಂಡಗಳು ತಲಾ 80ರಿಂದ 90 ರನ್ ಗಳಿಸಲಾಗುತ್ತದೆ. ಆರಂಭಿಕ ಬ್ಯಾಟರ್‌ಗಳು ಉತ್ತಮ ಶಾಟ್‌ಗಳ ಮೂಲಕ ರನ್‌ಗೆ ವೇಗ ನೀಡಲಿದ್ದಾರೆ. ವೇಗದ ಬೌಲರ್‌ಗಳಿಗೆ ಈ ಪಿಚ್‌ನಲ್ಲಿ ಸ್ವಲ್ಪ ಸಹಾಯವಾಗಬಹುದು. ಆದರೆ ಬಾಲ್ ಬ್ಯಾಟ್‌ಗೆ ತುಂಬಾ ಚೆನ್ನಾಗಿ ಬರುತ್ತದೆ".
"ಕೆಕೆಆರ್‌ನ ಆಂಡ್ರೆ ರಸೆಲ್ ಮತ್ತು ಆರ್‌ಸಿಬಿಯ ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿ ಐದು ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸುತ್ತಾರೆ. ಇಬ್ಬರೂ ಸಿಕ್ಸರ್ ಬಾರಿಸಲು ಹೆಚ್ಚು ಇಷ್ಟಪಡುತ್ತಾರೆ. ಚಿಕ್ಕ ಮೈದಾನವು ಸಿಕ್ಸರ್‌ಗಳನ್ನು ಹೊಡೆಯಲು ಅತ್ಯಂತ ಅನುಕೂಲಕರವಾಗಿದೆ," ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.