IPL 2023: ತನಗೆ ಆಡುವ ಅವಕಾಶ ನೀಡದೇ ಹೊರಗಿಟ್ಟ 2 ತಂಡಗಳ ವಿರುದ್ಧ ಚಾಟಿ ಬೀಸಿದ ರಹಾನೆ!

ಅಜಿಂಕ್ಯಾ ರಹಾನೆ.. ಈ ಹೆಸರು ಕೇಳಿದ ಕೂಡಲೇ ಎಲ್ಲರ ತಲೆಗೂ ಬರುವುದು ಓರ್ವ ಉತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಎಂಬುದು. ಹೌದು, ರಹಾನೆ ಟೆಸ್ಟ್ ಸ್ಪೆಷಲಿಸ್ಟ್‌ಗಳಲ್ಲಿ ಓರ್ವರು. ನೆಲಕಚ್ಚಿ ನಿಂತು ಗಂಟೆಗಟ್ಟಲೆ ಬ್ಯಾಟ್ ಬೀಸಿ ವಿಕೆಟ್ ಒಪ್ಪಿಸದೇ ರನ್ ಗಳಿಸುವ ಸಾಮರ್ಥ್ಯ ಇರುವ ರಹಾನೆ ವೇಗವಾಗಿ ರನ್ ಗಳಿಸುವಲ್ಲಿ ಅಷ್ಟೇನೂ ಯಶಸ್ವಿ ಆಟಗಾರನಲ್ಲ ಎಂಬ ಅಭಿಪ್ರಾಯ ಅನೇಕ ಕ್ರಿಕೆಟ್ ಪ್ರೇಮಿಗಳಲ್ಲಿತ್ತು.
ಹೌದು, ಅಜಿಂಕ್ಯಾ ರಹಾನೆ ಕ್ರಿಕೆಟ್ ಪ್ರೇಮಿಗಳು ವಾವ್ ಎನ್ನುವಂತಹ ವೇಗದ ಟಿ ಟ್ವೆಂಟಿ ಇನ್ನಿಂಗ್ಸ್‌ಗಳನ್ನು ಆಡಿರಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ರಹಾನೆ ವೇಗವಾಗಿ ರನ್ ಗಳಿಸಬಲ್ಲ ಎಂಬ ನಂಬುಗೆಯ ಆಟಗಾರನಾಗಿರಲಿಲ್ಲ. ಆದರೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಲ್ಲವೂ ಉಲ್ಟಾ ಆಗಿದೆ. ಅಜಿಂಕ್ಯಾ ರಹಾನೆ ಯುವ ಸ್ಪೋಟಕ ಬ್ಯಾಟ್ಸ್‌ಮನ್‌ಗಳಿಗೆ ಟಕ್ಕರ್ ಕೊಡುವ ಹಾಗೆ ಬ್ಯಾಟ್ ಬೀಸುತ್ತಿದ್ದಾರೆ..
ಹೌದು, ಸದ್ಯ ನಡೆಯುತ್ತಿರುವ ಹದಿನಾರನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿರುವ ಅಜಿಂಕ್ಯಾ ರಹಾನೆ ಇಲ್ಲಿಯವರೆಗೂ 5 ಪಂದ್ಯಗಳನ್ನಾಡಿ 209 ರನ್ ಬಾರಿಸಿದ್ದಾರೆ. ಈ ಪೈಕಿ 2 ಅರ್ಧಶತಕಗಳೂ ಸಹ ಸೇರಿವೆ. ಅದರಲ್ಲೂ ಏಪ್ರಿಲ್ 23ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಅಬ್ಬರದ ಆಟವನ್ನಾಡಿ ಕ್ರಿಕೆಟ್ ಜಗತ್ತೇ ಬೆರಗಾಗಿ ತಮ್ಮತ್ತ ನೋಡುವಂತೆ ಮಾಡಿದ್ದರು.
ಹೌದು, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅಜಿಂಕ್ಯಾ ರಹಾನೆ 29 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 71 ರನ್ ಬಾರಿಸಿದ್ದರು. ಈ ಮಟ್ಟಿಗೆ ಅಬ್ಬರಿಸಿದ್ದ ರಹಾನೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ರನ್ ಕಲೆಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಸಹ ಭಾಜನರಾಗಿದ್ದರು.
ಹೀಗೆ ಈ ಭರ್ಜರಿ ಇನ್ನಿಂಗ್ಸ್ ಆಡಿದ ಬಳಿಕ ಮಾತನಾಡಿದ ಅಜಿಂಕ್ಯಾ ರಹಾನೆ ತಮ್ಮಲ್ಲಿನ ಈ ಬೃಹತ್ ಬದಲಾವಣೆಗೆ ಕಾರಣವೇನೆಂದು ತಿಳಿಸಿದರು. "ನಾನು ನನ್ನ ಬ್ಯಾಟಿಂಗ್ ಅನ್ನು ಎಂಜಾಯ್ ಮಾಡಿದೆ. ಪಂದ್ಯವನ್ನು ಗೆದ್ದದ್ದರ ಖುಷಿಯೂ ಇದೆ. ಧೋನಿ ಭಾಯ್ ನಾಯಕತ್ವದಡಿಯಲ್ಲಿ ಆಡುವಾಗ ಅನೇಕ ವಿಷಯಗಳ ಬಗ್ಗೆ ಕಲಿಯುವ ಅವಕಾಶ ಲಭಿಸುತ್ತೆ. ಒಬ್ಬ ಬ್ಯಾಟ್ಸ್‌ಮನ್ ಆಗಿ ಹಾಗೂ ಕ್ರಿಕೆಟಿಗನಾಗಿ ಯಾವಾಗಲೂ ಬೆಳೆಯಬೇಕೆನ್ನುವ ಆಸೆ ಇರುತ್ತದೆ. ಟಿ ಟ್ವೆಂಟಿ ಮಾದರಿ ಹೇಗೆ ಬಳೆಯುತ್ತಿದೆಯೋ ಅದೇ ರೀತಿ ಓರ್ವ ಆಟಗಾರ ಸಹ ಬೆಳೆಯಬೇಕು ಹಾಗೂ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು" ಎಂದು ರಹಾನೆ ತಿಳಿಸಿದರು.
ಮುಂದುವರೆದು ಮಾತನಾಡಿದ ರಹಾನೆ "ತಿರುವೇನೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನನಗೆ ಆಡುವ ಅವಕಾಶ ಸಿಗುತ್ತಿದೆ. ಸಿಎಸ್‌ಕೆ ನನ್ನನ್ನು ಖರೀದಿಸಿದಾಗ ನನಗೆ ತುಂಬಾ ಖುಷಿಯಾಗಿತ್ತು. ಅವರು ನನಗೆ ಆಡುವ ಹಾಗೂ ನನ್ನನ್ನು ಬಹಿರಂಗಪಡಿಸಿಕೊಳ್ಳುವ ಅವಕಾಶ ನೀಡಿದ್ದಾರೆ. ಕಳೆದೆರಡು ವರ್ಷಗಳನ್ನು ನೋಡಿದರೆ ನನಗೆ ಆಡುವ ಅವಕಾಶವೇ ಸಿಗುತ್ತಿರಲಿಲ್ಲ. ಆಡುವ ಅವಕಾಶವನ್ನೇ ನೀಡದಿದ್ದ ಮೇಲೆ ನಮ್ಮ ಬತ್ತಳಿಕೆಯಲ್ಲಿ ಯಾವ ಶಾಟ್ ಅಡಗಿದೆ ಎಂದು ಹೇಗೆ ತಿಳಿಯುತ್ತೆ" ಎಂದು ರಹಾನೆ ತಿಳಿಸಿದರು.

ರಹಾನೆ ಹೇಳಿಕೊಂಡ ಹಾಗೆ ಅವರು ಕಳೆದ ವರ್ಷ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಆ ಬಾರಿ ಕೇವಲ 7 ಪಂದ್ಯಗಳಲ್ಲಿ ಆಡುವ ಅವಕಾಶ ರಹಾನೆಗೆ ಸಿಕ್ಕಿತ್ತು. 2020 ಹಾಗೂ 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿದ್ದರು. 2020ರಲ್ಲಿ 9 ಪಂದ್ಯಗಳಲ್ಲಿ ಆಡುವ ಅವಕಾಶ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 2021ರಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಆಡಿಸಿತ್ತು. ಈ ಮೂಲಕ ಅಜಿಂಕ್ಯಾ ರಹಾನೆ ಕಳೆದೆರಡು ವರ್ಷಗಳಲ್ಲಿ ತಾವು ಆಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಸರಿಯಾದ ಅವಕಾಶ ಲಭಿಸಿರಲಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications