
2023ರ ಐಪಿಎಲ್ ಋತುವಿಗಾಗಿ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 23ರ ಶುಕ್ರವಾರದಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಮತ್ತು ತಂಡದ ಅಧಿಕಾರಿಗಳು ಮಿನಿ ಹರಾಜಿಗಾಗಿ ಈಗಾಗಲೇ ಕೊಚ್ಚಿಗೆ ಬಂದಿಳಿದಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ನಾಯಕತ್ವದ ಮೂಲಕ ನೀಡಿದ ಎಲ್ಲಾ ಕೊಡುಗೆಗಳ ಹೊರತಾಗಿಯೂ ಪಂಜಾಬ್ ಕಿಂಗ್ಸ್ ತಂಡ ಮಯಾಂಕ್ ಅಗರ್ವಾಲ್ ಅವರನ್ನು ಕೈಬಿಟ್ಟಿರುವುದನ್ನು ಅರಗಿಸಿಕೊಳ್ಳಲು ನಿರಾಶಾದಾಯಕವಾಗಿದೆ ಎಂದು ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಗುರುವಾರ ಹೇಳಿದ್ದಾರೆ.
ಐಪಿಎಲ್ 2023ರ ಹರಾಜಿಗೆ ಮುಂಚಿತವಾಗಿ ಬಿಡುಗಡೆಯಾದ ನಂತರ ಮಯಾಂಕ್ ಅಗರ್ವಾಲ್ ಬಹುಶಃ ನೊಂದುಕೊಂಡಿದ್ದಾರೆ ಎಂದು ಕ್ರಿಸ್ ಗೇಲ್ ತಿಳಿಸಿದರು.
ಐಪಿಎಲ್ 2022ರಲ್ಲಿ ಕೆಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ನಾಯಕರಾಗಿ ತೆರಳಿದ ನಂತರ ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದರು. ಭಾರತದ ಆರಂಭಿಕ ಆಟಗಾರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗಾಗಿ ಅತ್ಯಂತ ಸ್ಥಿರ ಪ್ರದರ್ಶನಕಾರರಲ್ಲಿ ಒಬ್ಬರಾಗಿದ್ದರು. 2018 ಮತ್ತು 2022ರ ನಡುವೆ 60 ಪಂದ್ಯಗಳಲ್ಲಿ ಒಂದು ಶತಕ ಸೇರಿದಂತೆ 1513 ರನ್ ಗಳಿಸಿದ್ದಾರೆ.

ಐಪಿಎಲ್ 2022ರ ಸಮಯದಲ್ಲಿ ಜಾನಿ ಬೈರ್‌ಸ್ಟೋವ್ ಮತ್ತು ಶಿಖರ್ ಧವನ್ ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯುವುದಕ್ಕಾಗಿ ಮಯಾಂಕ್ ತಮ್ಮ ಆರಂಭಿಕ ಸ್ಥಾನವನ್ನು ತ್ಯಾಗ ಮಾಡಿದ್ದರು.
ಆದರೆ, ಪ್ಲೇ-ಆಫ್‌ಗೆ ಮತ್ತೊಮ್ಮೆ ಅರ್ಹತೆ ಪಡೆಯಲು ಪಂಜಾಬ್ ಕಿಂಗ್ಸ್ ತಂಡಕ್ಕೆ ಸಾಧ್ಯವಾಗಲಿಲ್ಲ. 2014ರಿಂದ ಪ್ಲೇ-ಆಫ್‌ಗೆ ಅರ್ಹತೆ ಪಡೆಯದ ಪಂಜಾಬ್ ಕಿಂಗ್ಸ್ ತಂಡ, 2022ರಲ್ಲಿ 10 ತಂಡಗಳಲ್ಲಿ 6ನೇ ಸ್ಥಾನ ಗಳಿಸಿತು.
ಇದೀಗ ಐಪಿಎಲ್ 2023ರ ಹರಾಜಿಗೆ ಮುಂಚಿತವಾಗಿ ಪಂಜಾಬ್ ಕಿಂಗ್ಸ್ ಶಿಖರ್ ಧವನ್ ಅವರನ್ನು ತಮ್ಮ ತಂಡದ ಹೊಸ ನಾಯಕನನ್ನಾಗಿ ಘೋಷಿಸಿತು ಮತ್ತು ತಂಡವು 32.2 ಕೋಟಿ ರೂ. ಮೌಲ್ಯದ ಪರ್ಸ್‌ನೊಂದಿಗೆ ಹರಾಜಿಗೆ ಹೋಗುತ್ತಿದೆ.

"ಮಯಾಂಕ್ ಅಗರ್ವಾಲ್ ಖಂಡಿತವಾಗಿಯೂ ಆಯ್ಕೆಯಾಗುತ್ತಾರೆ. ಅವರು ಆಯ್ಕೆಯಾಗದಿದ್ದರೆ ನಾನು ತುಂಬಾ ನಿರಾಶೆಗೊಳ್ಳುತ್ತೇನೆ. ಏಕೆಂದರೆ ಅವರು ಅಂತಹ ಉತ್ತಮ ಆಟಗಾರ," ಎಂದು ಕ್ರಿಸ್ ಗೇಲ್ ತಿಳಿಸಿದರು.
ಪಂಜಾಬ್ ಕಿಮಗ್ಸ್ ತಂಡದ ದೀರ್ಘಕಾಲಿಕ ವೈಫಲ್ಯಗಳ ಮೇಲೆ ಬೆಳಕು ಚೆಲ್ಲುವ ಕ್ರಿಸ್ ಗೇಲ್, ಸ್ಥಿರತೆಯನ್ನು ನಂಬದ ತಂಡ ಅಗ್ರ 4ರೊಳಗೆ ಬರುವುದು ಕಷ್ಟ ಎಂದು ಹೇಳಿದರು. ಪಂಜಾಬ್ ಕಿಂಗ್ಸ್ ತಂಡದಲ್ಲಿ ಕೈಬಿಡುವುದು ಮತ್ತು ಬದಲಾಯಿಸುವುದು 'ಹಾಸ್ಯಾಸ್ಪದ'ವಾಗಿದೆ ಎಂದು ಹೇಳಿದರು.
"ನೀವು ಆಟಗಾರರನ್ನು ಕೈಬಿಡುತ್ತಲೇ ಇರಿ ಮತ್ತು ಬದಲಾಯಿಸುತ್ತೀರಿ. ನೀವು ಪಂದ್ಯವನ್ನು ಗೆದ್ದರೂ ತಂಡಕ್ಕೆ ಎಂದಿಗೂ ಆಡುವ ಹನ್ನೊಂದರ ಬಳಗ ಸಿಗುವುದಿಲ್ಲ".
ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರನ್ನು ಸಹ ವಜಾಗೊಳಿಸಿದೆ ಮತ್ತು 2023ರ ಋತುವಿಗೆ ಮಾಜಿ ಇಂಗ್ಲೆಂಡ್ ಕೋಚ್ ಟ್ರೆವರ್ ಬೇಲಿಸ್ ಅವರನ್ನು ನೇಮಿಸಿದೆ.