
2023ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್) ಮಿನಿ ಹರಾಜು ಪ್ರಕ್ರಿಯೆಗೆ ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಇದೇ ವೇಳೆ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರ್ರಾನ್ ಐಪಿಎಲ್ ಇತಿಹಾಸದಲ್ಲಿಯೇ ದಾಖಲೆಯ ಬೆಲೆಗೆ ಮಾರಾಟವಾಗಿದ್ದಾರೆ.
ಮಾಜಿ ಸಿಎಸ್‌ಕೆ ಆಟಗಾರ ಸ್ಯಾಮ್ ಕರ್ರಾನ್ ಅವರು ಐಪಿಎಲ್ ಹರಾಜು ದಾಖಲೆಯನ್ನು ಮುರಿದಿದ್ದು, ಪಂಜಾಬ್ ಕಿಂಗ್ಸ್ ತಂಡ 18.50 ಕೋಟಿ ರೂ.ಗೆ ಖರೀದಿಸಿದೆ. ಪ್ರಸ್ತುತ ಕ್ಯಾಪ್ಡ್ ಆಲ್‌ರೌಂಡರ್‌ಗಳ ಬಿಡ್ಡಿಂಗ್ ನಡೆಯುತ್ತಿದೆ.
ಇದಕ್ಕೂ ಮುನ್ನ ಇಂಗ್ಲೆಂಡ್‌ನ ಮತ್ತೊಬ್ಬ ಆಟಗಾರ ಹ್ಯಾರಿ ಬ್ರೂಕ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 13.25 ಕೋಟಿ ರೂ. ಖರೀದಿಸಿದೆ.
ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕರ್ರಾನ್ ಐಪಿಎಲ್‌ಗೆ ಮರಳಿದ್ದಾರೆ ಮತ್ತು ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಶುಕ್ರವಾರ ಕೊಚ್ಚಿಯಲ್ಲಿ 18.50 ಕೋಟಿಗೆ ರೂ.ಗೆ ಮಾರಾಟವಾದ ನಂತರ ಪಂಜಾಬ್ ಕಿಂಗ್ಸ್ ತಂಡದ ಜೆರ್ಸಿಯನ್ನು ಧರಿಸಲಿದ್ದಾರೆ.
ಇದಕ್ಕೂ ಮುನ್ನ ಹರಾಜಿನಲ್ಲಿ ಮೊಹಾಲಿ ಮೂಲದ ಫ್ರಾಂಚೈಸಿ 7.2 ಕೋಟಿ ರೂ.ಗೆ ಖರೀದಿಸಿದ ನಂತರ ಸ್ಯಾಮ್ ಕರ್ರಾನ್ 2019ರಲ್ಲಿ ಪಂಜಾಬ್ ಕಿಂಗ್ಸ್‌ನೊಂದಿಗೆ ತಮ್ಮ ಐಪಿಎಲ್ ಕ್ರಿಕೆಟ್ ಆರಂಭಿಸಿದ್ದರು. ಅನಂತರ ಬಿಡುಗಡೆ ಮಾಡಲಾಗಿತ್ತು ಮತ್ತು 2020ರ ಹಿಂದಿನ ಐಪಿಎಲ್ ಹರಾಜಿನಲ್ಲಿ 5.5 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು.
ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಈ ಆಲ್‌ರೌಂಡರ್ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು. ಸ್ಯಾಮ್ ಕರ್ರಾನ್ ತಮ್ಮ ತಂಡಕ್ಕೆ ಟ್ರೋಫಿ ಗೆಲ್ಲಿಸಿದರಲ್ಲದೆ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಮತ್ತು ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್ ನೀಡಲಾಯಿತು. ಹೀಗಾಗಿ ಈ ಮಿನಿ ಹರಾಜಿನಲ್ಲಿ ಹೆಚ್ಚು ಬೇಡಿಕೆಯಿರುವ ಆಟಗಾರರಲ್ಲಿ ಒಬ್ಬರಾಗಿದ್ದರು, ಅವರ ಮೂಲ ಬೆಲೆ 2 ಕೋಟಿ ರೂ. ಆಗಿತ್ತು.
ದೊಡ್ಡ ಮೊತ್ತಕ್ಕೆ ಖರೀದಿಯಾದ ಮಯಾಂಕ್ ಅಗರ್ವಾಲ್
ಭಾರಿ ಬೆಲೆಗೆ ಮಾರಾಟವಾಗುವ ನಿರೀಕ್ಷೆ ಮೂಡಿಸಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಬರೋಬ್ಬರಿ 8.25 ಕೋಟಿ ರೂ.ಗೆ ಖರೀದಿಸಿದೆ. ಎಸ್‌ಆರ್‌ಎಚ್ ದೊಡ್ಡ ಆಟಗಾರರಿಗೆ ಮಣೆ ಹಾಕಲಿದೆ ಎಂದು ಅಂದಾಜು ಹಾಕಲಾಗಿತ್ತು, ಇದೀಗ ಅದನ್ನೇ ಮಾಡಿದ್ದಾರೆ.
ಕಳೆದ ಬಾರಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಮಯಾಂಕ್ ಅಗರ್ವಾಲ್ ತಂಡವನ್ನು ಮುನ್ನಡೆಸಿದ್ದರು. ಅದರೆ ಈ ಬಾರಿ ಅವರನ್ನು ರಿಟೇನ್ ಮಾಡಿಕೊಳ್ಳದೆ ಬಿಡುಗಡೆ ಮಾಡಿತ್ತು. ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾದ್ಯತೆ ಇದೆ.